ಸಾರಾಂಶ
ಮುರುಘಾಮಠದಿಂದ ಮುರುಘ ಶಾಂತವೀರ ಶ್ರೀಗಳ ಭಾವಚಿತ್ರ ಮೆರವಣಿಗೆ. ಕೋಟೆ ಆವರಣದಲ್ಲಿ ಭಕ್ತಿ ಸಮರ್ಪಣೆ. ವೆಂಕಟರಮಣ ಸ್ವಾಮಿ ರಥೋತ್ಸವ ಕನ್ನಡಪ್ರಭವಾರ್ತೆ, ಚಿತ್ರದುರ್ಗ ವಿಜಯದ ಸಂಕೇತವಾಗಿ ಆಚರಿಸಲ್ಪಡುವ ವಿಜಯದಶಮಿಗೆ ಮಂಗಳವಾರ ಕೋಟೆ ನಾಡು ಚಿತ್ರದುರ್ಗದಲ್ಲಿ ಭಕ್ತಿ , ಭಾವಗಳ ಸಮಾಗಮವಾದಂತೆ ಕಂಡು ಬಂತು. ಬಸವಕೇಂದ್ರ ಮುರುಘಾ ಮಠದಿಂದ ಅದ್ಧೂರಿಯಾಗಿ ಜನಪದ ಕಲಾ ತಂಡಗಳ ಮೆರವಣಿಗೆ ನಡೆಯಬೇಕಿತ್ತು. ಪುಷ್ಪಾಲಂಕೃತ ಸಾರೋಟ್ ನಲ್ಲಿ ಮುರುಘಾ ಶ್ರೀ ಸಾಗಿ ದುರ್ಗದ ಜನತಗೆ ದರ್ಶನ ನೀಡುತ್ತಿದ್ದರು. ಆದರೆ ಕಾರಣಾಂತರಗಳಿಂದ ಕಳೆದೆರೆಡು ವರ್ಷಗಳಿಂದ ಈ ದೃಶ್ಯ ಮಸುಕಾಗಿದೆ. ಮುರುಗಿ ಶಾಂತವೀರ ಶ್ರೀಗಳ ಭಾವಚಿತ್ರ ಮೆರವಣಿಗೆಗಷ್ಟೇ ಸೀಮಿತವಾಗಿದೆ. ಇಳಿಹೊತ್ತಿನಲ್ಲಿ ಸುಮಾರಿಗೆ ನಗರದ ಗಾಂಧಿ ವೃತ್ತದಿಂದ ಭಾವಚಿತ್ರ ಮೆರವಣಿಗೆ ಆರಂಭವಾದಾಗ ಮಾದಾರ ಚೆನ್ನಯ್ಯ ಶ್ರೀ, ಇಮ್ಮಡಿ ಸಿದ್ದರಾಮಶ್ರೀ, ಬಸವಪ್ರಭು ಸ್ವಾಮೀಜಿ, ಶಿವಬಸವ ಸ್ವಾಮೀಜಿ ಸಾಥ್ ನೀಡಿದರು. ನಂತರ ಐತಿಹಾಸಿಕ ಕೋಟೆ ಮೇಲೆ ಹೋಗಿ ಮುರುಘಾಮಠದ ಆವರಣದಲ್ಲಿ ರಾಜ ವಂಶಸ್ತರಿಂದ ಭಕ್ತಿ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಶರಣ ಸಂಸ್ಕೃತಿ ಉತ್ಸವ 2023 ಬಿಚ್ಚುಗತ್ತಿ ಭರಮಣ್ಣನಾಯಕ ವೇದಿಕೆಯಲ್ಲಿ ಚಿತ್ರದುರ್ಗದ ರಾಜವಂಶಸ್ಥರಿಂದ ಭಕ್ತಿಸಮರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಮ್ಮುಖ ವಹಿಸಿ ಮಾತನಾಡಿದ ಕನಕಪುರದ ಶ್ರೀ ಮರಳೇಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮಿಗಳು, ಗುರು ಮುಟ್ಟಿದ್ದು ಗುಡ್ಡ ಎನ್ನುತ್ತಾರೆ. ಗುರುಕೃಪೆಯಾದರೆ ಎಲ್ಲವೂ ಸುಗಮವಾಗಿ ಸಾಗುತ್ತದೆ ಎಂಬುದಕ್ಕೆ ಇದೊಂದು ನಿದರ್ಶನವಾಗಿದೆ. ಗುರುಗಳಿಂದ ರಾಜರು, ಮುರುಗಿ ಸ್ವಾಮಿಗಳ ಕೃಪೆಯಿಂದ ಭರಮಣ್ಣನಾಯಕ ರಾಜನಾಗಿದ್ದು ಅವರ ವಂಶಸ್ಥರು ಆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ನುಡಿದರು. ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು ಮಾತನಾಡಿ, ಮುರುಘಾಮಠವು ನೂರಾರು ವರ್ಷಗಳಿಂದ ಸರ್ವಸಮಾಜಕ್ಕೆ ಧಾರ್ಮಿಕ ಸಮಾನತೆಯನ್ನು ನೀಡಿರುವಂತಹ ಪರಂಪರೆಯಿದೆ. ಶ್ರೀಮಠವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ ಎಂದು ನುಡಿದರು. ಗುರುಮಿಠಕಲ್ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಬಸವಪ್ರಭುಸ್ವಾಮಿಗಳು, ರಾವಂದೂರು ಮುರುಘಾಮಠದ ಮೋಕ್ಷಪತಿ ಮಹಾಸ್ವಾಮಿಗಳು, ಎಸ್.ಜೆಎಂ ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಭರತ್‍ಕುಮಾರ್, ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ರಾಜವಂಶಸ್ಥರುಗಳಾದ ಬಿ.ಎಸ್.ಮದಕರಿ ನಾಯಕ, ಪರಶುರಾಮ ನಾಯಕ ಮತ್ತು ಪಿ.ಕಿರಣ್ ಕುಮಾರ್, ಪ್ರಸನ್ನಕುಮಾರ್ ಉಪಸ್ಥಿತರಿದ್ದರು.ವೆಂಕಟರಮಣಸ್ವಾಮಿ ರಥೋತ್ಸವ:ವಿಜಯದಶಮಿ ಅಂಗವಾಗಿ ಚಿತ್ರದುರ್ಗ ಹೊರವಲಯದಲ್ಲಿರುವ ವೆಂಕಟರಮಸ್ವಾಮಿ ರಥೋತ್ಸವ ಸಂಜೆ ವಿಜೃಂಭಣೆಯಿಂದ ನೆರವೇರಿತು. ಸಹಸ್ರಾರು ಭಕ್ತರು ಪಾಲ್ಗೊಂಡು ರಥೋತ್ಸವ ಕಣ್ತುಂಬಿಕೊಂಡರು ನಂತರ ಮಹಾಮಂಗಳಾರತಿ ನೇರವೇರಿತು. ಭಕ್ತರು ಸರತಿಯಲ್ಲಿ ನಿಂತ ದರ್ಶನ ಪಡೆದರು.
ಹಿರಿಯೂರಿನಲ್ಲಿ ಅಂಬಿನೋತ್ಸವ: ವಿಜಯದಶಮಿಯ ಅಂಬಿನೋತ್ಸವ ಕಾರ್ಯಕ್ರಮ ನಗರದ ಬನ್ನಿಮಂಟಪ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಮುಜರಾಯಿ ಅಧಿಕಾರಿಗಳು ಹಾಗೂ ತಹಸೀಲ್ದಾರ್ ರಾಜೇಶ್ ಕುಮಾರ್ ದೇವಾಲಯದ ಸುತ್ತ ಬಿಲ್ಲಿನಿಂದ ಬಾಣ ಹೂಡುವ ಮೂಲಕ ಅಂಬಿನೋತ್ಸವವನ್ನು ನೆರವೇರಿಸಿದರು. ದೇವಾಲಯದ ಆವರಣಕ್ಕೆ ದಕ್ಷಿಣ ಕಾಶಿ ಶ್ರೀ ತೇರುಮಲ್ಲೇಶ್ವರ ಸ್ವಾಮಿ, ಮೈಲಾರಲಿಂಗೇಶ್ವರ ಸ್ವಾಮಿ, ರೇವಣಸಿದ್ದೇಶ್ವರ ಸ್ವಾಮಿ, ದುರ್ಗಮ್ಮ, ಬನಶಂಕರಮ್ಮ, ಪೌದಿಯಮ್ಮ, ಕಾಳಿಕಾಂಬ, ಗೌರಸಂದ್ರ ಮಾರಮ್ಮ, ಹುಲಿಗಮ್ಮ, ಮಾರಮ್ಮ ಸೇರಿದಂತೆ ನಗರದ ಅನೇಕ ದೇವಾನುದೇವತೆಗಳು ಆಗಮಿಸಿದ್ದವು. ಅಂಬಿನೋತ್ಸವವನ್ನು ಸಾವಿರಾರು ಭಕ್ತರು ವೀಕ್ಷಿಸಿ ದೇವರುಗಳ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಬನ್ನಿಮಂಟಪ ಆಂಜನೇಯ ಸ್ವಾಮಿ ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಜಪ್ಪ ಸೇರಿದಂತೆ ಸಮಿತಿಯ ಪದಾಧಿಕಾರಿಗಳು, ಗಣ್ಯರು, ಅಧಿಕಾರಿ ವರ್ಗದವರು ಹಾಜರಿದ್ದರು.