ಸಾರಾಂಶ
ಗದಗ: ತಮ್ಮ ಇಷ್ಟ ದೇವರಲ್ಲಿ ನಿಸ್ಸಂದೇಹ, ಪ್ರಶ್ನಾತೀತ ನಂಬಿಕೆ ಇರಿಸುವುದೇ ಭಕ್ತಿಯಾಗಿದ್ದು, ನಮ್ಮ ಇಷ್ಟಾರ್ಥಗಳು ಈಡೇರದೇ ಇದ್ದಾಗ ದೇವರನ್ನು ದೂಷಿಸುವುದು ಭಕ್ತಿ ಅಲ್ಲ ಎಂದು ಪ್ರವಚನ ಭಾಸ್ಕರ ಡಾ. ಪಾವಗಡ ಪ್ರಕಾಶರಾವ್ ಹೇಳಿದರು.
ಅವರು ನಗರದಲ್ಲಿ ಕುಮಾರವ್ಯಾಸ ಪ್ರವಚನ ಸಂಚಾಲನ ಸಮಿತಿಯಿಂದ ಏರ್ಪಡಿಸಿದ ಭಗವದ್ಗೀತೆ ಪ್ರವಚನದ 4ನೇ ದಿನದ ಉಪನ್ಯಾಸ ನೀಡಿ ಮಾತನಾಡಿದ ಅವರು, ಅಧ್ಯಯನ ಹಾಗೂ ಪಾರಾಯಣ ಎರಡೂ ಭಿನ್ನವಾಗಿದ್ದು, ಪಾರಾಯಣ ಎಂದರೆ ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗುವುದು. ಭಗವದ್ಗೀತೆ ಅರ್ಥೈಸಿಕೊಳ್ಳಲು ಸತತ ಪಾರಾಯಣ ಅನಿವಾರ್ಯವಾಗಿದ್ದು, ಭಗವದ್ಗೀತೆಯ ಕುರಿತು ನಡೆಯುತ್ತಿರುವ ಈ ಪ್ರವಚನ ಆಲಿಸುವ ಜತೆಗೆ ಧಾರಣ ಮಾಡಿಕೊಳ್ಳಬೇಕು ಎಂದರು.ಬಾಲಗಂಗಾಧರ ತಿಲಕರು ಭಗವದ್ಗೀತೆ ಕುರಿತು ಗೀತಾ ರಹಸ್ಯ ಎಂಬ ಅಮೂಲ್ಯ ಗ್ರಂಥ ರಚಿಸಿದ್ದು, ಅದೇ ರೀತಿ ಮಹಾತ್ಮ ಗಾಂಧೀಜಿ, ಡಿ.ವಿ. ಗುಂಡಪ್ಪ ಸೇರಿದಂತೆ ಅನೇಕರು ರಚಿಸಿದ ಭಗವದ್ಗೀತಾ ವ್ಯಾಖ್ಯಾನ ಅಧ್ಯಯನ ಯೋಗ್ಯವಾಗಿವೆ. ಪಶ್ಚಿಮ ಬಂಗಾಳದ ಮಧುಸೂದನಾನಂದ ಸರಸ್ವತಿ ಸ್ವಾಮೀಜಿಗಳು ಭಗವದ್ಗೀತೆಯ ಕುರಿತು ಅನೇಕ ಶ್ಲೋಕ ರಚಿಸಿದ್ದು, ಗೀತಾಧ್ಯಯನಕ್ಕೆ ಪೀಠಿಕೆ ಹಾಕಲು ಯೋಗ್ಯವಾಗಿವೆ. ಪಾರ್ಥಾಯ ಪ್ರತಿಬೋಧಿತಾಯ ಎಂಬ ಭಗವದ್ಗೀತೆಯ ಉಕ್ತಿಯು ವ್ಯಾಖ್ಯಾರ್ಥದಲ್ಲಿ ಕೇವಲ ಅರ್ಜುನನಿಗೆ ಶ್ರೀಕೃಷ್ಣ ಬೋಧಿಸಿದ್ದು ಎನಿಸುತ್ತದೆ ಆದರೆ ನಿಜಾರ್ಥದಲ್ಲಿ ಭೂಮಿಯ ಪ್ರತಿಯೊಬ್ಬ ಮನುಷ್ಯರಿಗೆ ಶ್ರೀಕೃಷ್ಣ ಬೋಧನೆ ನೀಡುತ್ತಿದ್ದಾನೆ ಎಂದು ವೇದ್ಯವಾಗುತ್ತದೆ. ಈ ಪ್ರವಚನ ಮಹಾ ಭಾರತದ ಕಥೆಗಳಷ್ಟೇ ಅಲ್ಲದೇ ಅದರ ತತ್ವದ ಚಿಂತನೆಯಾಗಿದ್ದು, ಕೇಳುಗರು ಪ್ರತಿನಿತ್ಯ ವೇಳೆಗೆ ಸರಿಯಾಗಿ ಆಗಮಿಸಿ ಪ್ರತಿನಿತ್ಯವೂ ಕೊಂಚವಾದರೂ ಜ್ಞಾನದ ಪರಿಧಿ ವಿಸ್ತರಿಸಿಕೊಳ್ಳಬೇಕು ಎಂದರು.
ಈ ವೇಳೆ ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಡಾ. ಜಿ.ಬಿ. ಪಾಟೀಲ, ಅನಿಲ ವೈದ್ಯ, ವಾದಿರಾಜ ರಾಯ್ಕರ, ಡಾ. ಎಸ್.ಡಿ.ಯರಿಗೇರಿ, ಡಾ. ವಿಜಯದತ್ತ ಮಂಗಸೂಳಿ, ಗೋಪಾಲಕೃಷ್ಣ ತಾಸಿನ, ಶಶಿಧರ ಮೂರಶಿಳ್ಳಿನ, ಅನಿಲ ತೆಂಬದಮನಿ, ಗೌರಪ್ಪ ಬೊಮ್ಮಣ್ಣನವರ, ಬಿ.ವಿ. ಹಿರೇಮಠ, ಡಾ. ದತ್ತಪ್ರಸನ್ನ ಪಾಟೀಲ ಸೇರಿದಂತೆ ಅನೇಕ ಭಕ್ತರು ಇದ್ದರು.