ಕನ್ನಡ ಉಳಿವಿಗಾಗಿ ಶ್ರಮಿಸಿದ ಭಾಲ್ಕಿ ಮಠ: ಚವ್ಹಾಣ್‌

| Published : Dec 23 2024, 01:01 AM IST

ಸಾರಾಂಶ

ಔರಾದ್‌ ಶಾಸಕರ ಕಚೇರಿಯಲ್ಲಿ ಡಾ.ಚನ್ನಬಸವ ಪಟ್ಟದ್ದೇವರು ಜಯಂತಿ ಆಚರಣೆ

ಕನ್ನಡಪ್ರಭ ವಾರ್ತೆ ಔರಾದ್‌

ಹಲವು ದಬ್ಬಾಳಿಕೆ ಹಾಗೂ ವಿರೋಧದ ನಡುವೆಯೂ ಹೊರಗೆ ಉರ್ದು ನಾಮಫಲಕ ಹಾಕಿ ಒಳಗೆ ಕನ್ನಡ ಕಲಿಸುವ ಮೂಲಕ ನಾಡಿನಲ್ಲಿ ಕನ್ನಡದ ಉಳಿವಿಗೆ ಶ್ರಮಿಸಿದ ಭಾಲ್ಕಿ ಮಠ ಈಗಲೂ ಕೂಡ ಕನ್ನಡ ಮಠವೆಂದೇ ಖ್ಯಾತಿಯಾಗಿದೆ ಎಂದು ಶಾಸಕ ಪ್ರಭು ಚವ್ಹಾಣ್‌ ಸ್ಮರಿಸಿದರು.

ಔರಾದ್‌ (ಬಿ)ಶಾಸಕರ ಕಚೇರಿಯಲ್ಲಿ ಭಾನುವಾರ ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತಿ ನಿಮಿತ್ತ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಜಾತಿ ತಾರತಮ್ಯದಂತಹ ಸಮಸ್ಯೆಗಳನ್ನು ತೊಡೆದು ಹಾಕಿ ಕಲ್ಯಾಣ ರಾಜ್ಯವಾಗಿಸಲು 12ನೇ ಶತಮಾನದಲ್ಲಿ ಬಸವಾದಿ ಶರಣರು ಹೋರಾಡಿದ್ದರು. ಅವರಂತೆ ಡಾ.ಚನ್ನಬಸವ ಪಟ್ಟದ್ದೇವರು ಕೂಡ 20ನೇ ಶತಮಾನದಲ್ಲಿ ಶರಣರ ಆಶಯಗಳಿಗಾಗಿಯೇ ಹೋರಾಡಿದ್ದಾರೆ ಎಂದರು.

ಡಾ.ಬಸವಲಿಂಗ ಪಟ್ಟದ್ದೇವರು ಕೂಡ ಶ್ರೀಗಳು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗುತ್ತಿದ್ದಾರೆ. ಅನಾಥ ಮಕ್ಕಳಿಗೆ ಆಶ್ರಯ ನೀಡುವುದಲ್ಲದೇ ಉತ್ತಮ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಕಲಿಸುತ್ತಿದ್ದಾರೆ ಎಂದು ಹೇಳಿದರು.

ಡಾ.ಚನ್ನಬಸವ ಪಟ್ಟದ್ದೇವರು ನಾಡು ಕಂಡ ಅಪರೂಪದ ಸಂತರಾಗಿದ್ದರು. ಅವರ ಹೆಸರು ಸದಾ ಸ್ಮರಣೀಯವಾಗಿಸಬೇಕೆಂಬ ಉದ್ದೇಶದಿಂದ ಜಿಲ್ಲಾ ರಂಗಮಂದಿರಕ್ಕೆ ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರವೆಂದು ಮರುನಾಮಕರಣ ಮಾಡಿದ್ದು, ಇದು ನನ್ನ ಜೀವನದ ಅವಿಸ್ಮರಣೀಯ ಘಳಿಗೆಯಾಗಿದೆ ಎಂದರು.

ಈ ವೇಳೆ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಸಂದೀಪ ಪಾಟೀಲ್‌, ರಮೇಶ ಗೌಡ, ಜಗದೀಶ ಪಾಟೀಲ್‌, ಎಂಡಿ ಸಲಾವುದ್ದಿನ್‌, ಮಹೇಶ ಭಾಲ್ಕೆ, ಸಿದ್ರಾಮಪ್ಪ ನಿಡೋದೆ, ಕಿರಣ ಶೆಂಬೆಳ್ಳಿ, ಬಾಬು ಎಕಲಾರ ಸೇರಿ ಇತರರು ಉಪಸ್ಥಿತರಿದ್ದರು.