ಸಾರಾಂಶ
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ ಪ್ರತಿಮೆಗಳನ್ನು ಡಾ.ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಭಾಲ್ಕಿ
ಬೆಂಗಳೂರಿನ ಲಾಲಬಾಗ್‌ನಲ್ಲಿ ಏರ್ಪಡಿಸಿದ್ದ 12ನೇ ಶತಮಾನದ ಬಸವಾದಿ ಶರಣರ ಫಲಪುಷ್ಪ ಪ್ರದರ್ಶನವನ್ನು ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ವೀಕ್ಷಿಸಿದರು.ಗಣರಾಜ್ಯೋತ್ಸವ ಅಂಗವಾಗಿ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಜ.28ರವರೆಗೆ ಶರಣರ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು, ಪೂಜ್ಯರು ಶನಿವಾರ ಭೇಟಿ ನೀಡಿ, ಗಾಜಿನ ಮನೆಯ ಒಳಾಂಗಣದ ಹಿಂಬದಿಯ ಆವರಣದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಮತ್ತು ಶರಣೆ ಸತ್ಯಕ್ಕನವರ ಪ್ರತಿಮೆಗಳನ್ನು ಪೀಠದ ಮೇಲಿರಿಸಿ, ಪೀಠವನ್ನು ಹೂಗಳಿಂದ ಅಲಂಕರಿಸಿದ್ದನ್ನು ವೀಕ್ಷಿಸಿದರು.
ಜತೆಗೆ ಹೂವುಗಳಲ್ಲಿ ಅರಳಿದ ಅನುಭವ ಮಂಟಪವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿ ಇದೇ ಮೊದಲ ಬಾರಿಗೆ ಫಲಪುಷ್ಪಗಳಲ್ಲಿ ಬಸವಾದಿ ಶರಣರನ್ನು ಅಲಂಕರಿಸಿರುವುದು ಅತ್ಯಂತ ಖುಷಿ ತಂದು ಕೊಟ್ಟಿದೆ. ಪ್ರದರ್ಶನ ಏರ್ಪಡಿಸಿದ ತೋಟಾಗರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ತೋಟಗಾರಿಕೆ ಇಲಾಖೆ ನಿರ್ದೇಶಕ ರಮೇಶ ಡಿ.ಎಸ್.ಅವರನ್ನು ಅಭಿನಂದಿಸುವುದಾಗಿ ತಿಳಿಸಿದ್ದರು. ಬಸವಲಿಂಗ ದೇವರು ಜತೆಗಿದ್ದರು.