ಸಾರಾಂಶ
ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶತೀರ್ಥ ಶ್ರೀಪಾದರು 45ನೇ ಚಾತುರ್ಮಾಸ್ಯ ವ್ರತವನ್ನು ಬುಧವಾರ ಸಂಪನ್ನಗೊಳಿಸಿದರು. ವ್ರತದ ಮೃತ್ತಿಕೆಯನ್ನು ಮಧ್ವಸರೋವರದಲ್ಲಿ ವಿಸರ್ಜನೆಗೊಳಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ಭಂಡಾರಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು ಉಡುಪಿಯಲ್ಲಿ ಈ ಬಾರಿ ತಾವು ನಡೆಸಿದ ತಮ್ಮ 45 ನೇ ಚಾತುರ್ಮಾಸ್ಯ ವ್ರತವನ್ನು ಬುಧವಾರ ಸಂಪನ್ನಗೊಳಿಸಿದರು. ತಮ್ಮ ಪಟ್ಟದ ದೇವರ ಪೂಜೆಯ ಬಳಿಕ ವ್ರತದ ಮೃತ್ತಿಕೆಯನ್ನು ಶ್ರೀ ಕೃಷ್ಣಮಠದ ಮಧ್ವ ಸರೋವರದಲ್ಲಿ ವಿಸರ್ಜನೆಗೊಳಿಸಿದರು.ಮಧ್ಯಾಹ್ನ ಭಿಕ್ಷೆ ಸ್ವೀಕರಿಸಿದ ಬಳಿಕ ಪಟ್ಟದ ದೇವರು ಮತ್ತು ಶಿಷ್ಯರೊಂದಿಗೆ ಉಡುಪಿ ನಗರದ ಸೀಮೆ ಉದ್ಯಾವರದ ಅಘನಾಶಿನಿ ನದಿ ತೀರಕ್ಕೆ ಬಂದರು. ಅಲ್ಲಿ ಅನೇಕ ಭಕ್ತರು ನಾಗರಿಕರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡ ಬಳಿಕ ಶ್ರೀಗಳು ನದಿಗೆ ಸೀಯಾಳಾಭಿಷೇಕ, ಅರಸಿನ - ಕುಂಕುಮ ತಾಂಬೂಲ, ದಕ್ಷಿಣೆ, ಸೀರೆ - ರವಿಕೆಕಣ, ಅಕ್ಕಿ - ತೆಂಗಿನ ಕಾಯಿ, ಫಲವಸ್ತುಗಳುಳ್ಳ ಬಾಗಿನವನ್ನು ಅರ್ಪಿಸಿ ಮಂಗಳಾರತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದರು.
ನಂತರ ದೋಣಿಯ ನಾವಿಕನಿಗೆ ವಸ್ತ್ರ ಫಲ ಸಹಿತ ಸಂಭಾವನೆ ಕೊಟ್ಟು ನದಿಯನ್ಜು ದಾಟಿಸುವಂತೆ ಸೂಚಿಸಿದರು. ಶ್ರೀಗಳು ಪಟ್ಟದೇವರು ಹಾಗೂ ಕೆಲ ಶಿಷ್ಯರೊಂದಿಗೆ ದೋಣಿಯನ್ನೇರಿದರು. ನಾವಿಕ ಜಯರಾಮ್ ದೋಣಿ ಚಲಾಯಿಸಿ ನದಿ ಆಚೆ ತೀರಕ್ಕೆ ಶ್ರೀಗಳನ್ನು ಬೀಳ್ಕೊಟ್ಟರು. ಈ ಸಂದರ್ಭ ಶಿಷ್ಯರು ಸ್ತೋತ್ರ ಪಠಣಗೈದು ಶ್ರೀಕೃಷ್ಣ ಶ್ರೀರಾಮ ಮುಖ್ಯಪ್ರಾಣ ಮಧ್ವಗುರುಗಳು ಹಾಗೂ ಶ್ರೀಗಳಿಗೆ ಜೈಕಾರ ಹಾಕಿದರು.ಶ್ರೀನಿವಾಸ ಬಾದ್ಯ, ರಾಜೇಶ ಉಪಾಧ್ಯ, ನಾಗೇಂದ್ರಾಚಾರ್ಯ, ಪವನ ಆಚಾರ್ಯ, ಚಂದ್ರಶೇಖರ ಆಚಾರ್ಯ, ಜಯರಾಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಶ್ರೀನಿವಾಸ ಬಾದ್ಯ ಮತ್ತು ವಾಸುದೇವ ಭಟ್ ಪೆರಂಪಳ್ಳಿ ಸೀಮೋಲ್ಲಂಘನ ವಿಧಿಯನ್ನು ಸಂಯೋಜಿಸಿದರು.