ಸಾರಾಂಶ
ನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ಘೋಷಣೆ
ಕನ್ನಡ ಪ್ರಭ ವಾರ್ತೆ, ಕಡೂರುನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ಘೋಷಣೆಯೊಂದಿಗೆ ಪಟ್ಟಣದ ಒಂದನೇ ವಾರ್ಡಿನಿಂದ ಇ-ಖಾತ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.ಪಟ್ಟಣದ ಶ್ರೀ ಕೆಂಚಾಂಬ ದೇವಾಲಯದ ಆವರಣದಲ್ಲಿ ಪುರಸಭೆಯಿಂದ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ಗಿಡಗಳಿಗೆ ಸದಸ್ಯರೊಂದಿಗೆ ನೀರು ಹಾಕಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು ಮತ್ತು ಪೌರಾಡಳಿತ ಇಲಾಖೆ ನಿರ್ದೇಶಕರು ಸಮಾಲೋಚಿಸಿ ಇ-ಖಾತ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸರ್ಕಾರದ ಆದೇಶದಂತೆ ಜನರು ಇ- ಖಾತಾ ಪಡೆಯಲೇಬೇಕು. ಒಮ್ಮೆ ಈ ಖಾತ ಪಡೆದರೆ ನಿಮ್ಮ ಸ್ವತ್ತುಗಳು ಸರಿಯಾಗಿವೆ ಎಂಬ ಅರ್ಥ. ಇ-ಖಾತ ಮಾಡಿಕೊಡಲು ಅರ್ಜಿ ಜೊತೆ ವಿಭಾಗ ಪತ್ರ, ಕ್ರಯಪತ್ರದ ಜೊತೆ ನೀವು ಸ್ಥಳದಲ್ಲಿ ವಾಸ ಇರಬೇಕು, ಫೋಟೋ ಇರಬೇಕು, ಖಾತೆಗೆ ಸಂಭಂಧ ಪಟ್ಟವರು ಆಗಿರಬೇಕು ಎಂದರು.
ಕಡೂಇನಲ್ಲಿ ಸುಮಾರು 15,000 ಸ್ವತ್ತುಗಳಿವೆ. ಇದರಲ್ಲಿ 10,000 ಕಟ್ಟಡಗಳು, 5000 ಖಾಲಿ ನಿವೇಶನಗಳು ಇದ್ದು, ಇದರಲ್ಲಿ ನಾವು ಶೇ. 60ರಷ್ಟು ಇ-ಖಾತ ನೀಡಿದ್ದು ಇನ್ನು ಶೇ.40 ರಷ್ಟು ಆಗಬೇಕಿದೆ. ಯಾವುದೇ ಹಣಕಾಸು ವ್ಯವಹಾರ ಗಳಿಗೆ ಅಡ ಮಾನ ಇಡಲು ದಾಖಲೆಗಳು ಬೇಕು. ಒಮ್ಮೆ ಇ-ಖಾತ ಪಡೆದರೆ ನಿಮ್ಮ ದಾಖಲೆಗಳು ನೂರಕ್ಕೆ ನೂರು ದೃಢ ವಾಗುತ್ತವೆ. . ಕಂದಾಯ ಕಟ್ಟಿಸಿಕೊಂಡು ತಂತ್ರಾಂಶದ ಮೂಲಕ ಇ- ಸ್ವತ್ತು ಪಡೆದು ಪುರಸಭೆ ವ್ಯಾಪ್ತಿಗೆ ತರುವ ಕಾರ್ಯ ಮಾಡುತ್ತಿದೆ.ಈ ನಿಟ್ಟಿನಲ್ಲಿ ಆಡಳಿತ ಯಂತ್ರವೇ ಜನರ ಮನೆ ಬಾಗಿಲಿಗೆ ಬಂದಿದೆ. ಬಿ- ಖಾತೆ ಜೊತೆ ಇ-ಖಾತೆ ನೀಡಬೇಕು ಎಂದು ಸರ್ಕಾರ ನಿರ್ದೇಶನ ನೀಡಿದೆ. ಇದು ಮಹತ್ವಾಕಾಂಕ್ಷೆ ಕಾರ್ಯವಾಗಿದ್ದು 23 ವಾರ್ಡುಗಳ ಸದಸ್ಯರು ಅವರ ಭಾಗದಲ್ಲಿ ಕೆಲಸ ಮಾಡುತ್ತಿದ್ದು ನಾನು ಕೂಡ ಅಧ್ಯಕ್ಷನಾಗಿ ಬರುವ ಜನರ ಕೆಲಸ ಮಾಡಿಕೊಡುತ್ತಿದ್ದೇನೆ. ನಮ್ಮ ಊರಿನಲ್ಲಿ ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಾಡುತ್ತಿರುವ ಕಾರಣ ಭದ್ರಾ ನೀರಿನಲ್ಲಿ ಏರುಪೇರು ಆಗುತ್ತಿದೆ ಸರಿ ಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ 1ನೇ ವಾರ್ಡಿನ ಹಿರಿಯ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ, ಜನರು ತಮ್ಮ ಆಸ್ತಿ ದೃಢೀಕರಿಸಿದ ದಾಖಲೆ ನೀಡುವ ನಿಟ್ಟಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಕಂದಾಯ ಜಾಗವನ್ನು ಪುರಸಭೆ ವ್ಯಾಪ್ತಿಗೆ ಒಳಪಡಿಸಿ ಅಭಿವೃದ್ಧಿಪಡಿಸಲು ಅದ್ಯತೆ ನೀಡಲಾಗುತ್ತಿದೆ. ಹಾಗಾಗಿ ಪುರಸಭೆಯಿಂದ ನಮ್ಮ ನಡೆ ಸಾರ್ವಜನಿಕರ ಕಡೆ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಪುರಸಭೆ ಸದಸ್ಯರಾಗಿ ಜನರ ಸೇವೆ ಮಾಡುವುದು ನಮ್ಮ ಕರ್ತವ್ಯ, ಎಂದರು.ಹಿರಿಯ ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ರಾಜ್ಯ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದ್ದು ಅನ್ಯಕ್ರಾಂತ ಆಗದಿರುವ ಒಂದು- ಎರಡು ಗುಂಟೆ ಜಮೀನಿನಲ್ಲಿ ಮನೆ ಮಾಡಿರುವ ಜನರಿಗೆ ತಮ್ಮ ಆಸ್ತಿಗಳನ್ನು ಪುರಸಭೆ ವ್ಯಾಪ್ತಿಗೆ ತಂದು ಸವಲತ್ತು ನೀಡಲು ಸರಕಾರ ಈ ಕಾರ್ಯಕ್ರಮ ಆಯೋಜಿಸಿದೆ. ನಿಮ್ಮ ಆಸ್ತಿಗಳಿಗೆ ನೀವೇ ವಾರಸುದಾರರಾಗಲು ಪುರಸಭೆಯಿಂದ ಇ-ಖಾತಾ ಅಭಿಯಾನ ನಡೆಸಲಾಗುತ್ತಿದೆ. ಪಟ್ಟಣದ ಜನತೆ ಇದರ ಸದುಪಯೋಗ ಪಡೆಯಬೇಕು ಎಂದರು
ಪುರಸಭೆ ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಪುರಸಭೆ ಉಪಾಧ್ಯಕ್ಷೆ ಮಂಜುಳಚಂದ್ರು, ಸದಸ್ಯರಾದ ಗೋವಿಂದ ರಾಜು, ಸೈಯದ್ ಯಾಸೀನ್, ಸುಧಾ ಉಮೇಶ್, ಹಾಲಮ್ಮ, ಮಂಡಿ ಇಕ್ಬಾಲ್, ಮನುಮರುಗುದ್ದಿ, ಅಧಿಕಾರಿ ನೌಕರರಾದ ತಿಮ್ಮಯ್ಯ,ಕುಮಾರ್,ಹರ್ಷಕುಮಾರ್ ಸೇರಿದಂತೆ ವಾರ್ಡಿನ ನಿವಾಸಿಗಳು ಹಾಜರಿದ್ದರು.-- ಬಾಕ್ಸ್ --
ಸ್ಥಳದಲ್ಲೇ ಸಮಸ್ಯೆ ಪರಿಹಾರಪಟ್ಟಣದ ಶ್ರೀ ಕೆಂಚಾಂಬ ದೇವಾಲಯದ ಆವರಣದಲ್ಲಿ ಪುರಸಭೆಯ ಜನಪ್ರತಿನಿಧಿಗಳ ಜೊತೆ ಅಧಿಕಾರಿ ನೌಕರರನ್ನು ಒಳಗೊಂಡ ಪುರಸಭೆಯ ಆಡಳಿತ ಯಂತ್ರವೇ ಜಮಾಯಿಸಿತ್ತು. ಸ್ಥಳದಲ್ಲೇ ಸಣ್ಣ ಸಣ್ಣ ಸಮಸ್ಯೆಗಳನ್ನು ಪರಿಹರಿಸಲಾಯಿತು. ಅಲ್ಲೇ ಕಂದಾಯ ಮತ್ತು ನೀರಿನ ಕರ ಕಟ್ಟಲೂ ಕೂಡ ಅವಕಾಶ ಕಲ್ಪಿಸಿದ್ದು ವಿಶೇಷವಾಗಿತ್ತು. ವಿಶೇಷವಾಗಿ ನಡೆದ ಇ-ಖಾತಾ ಅಭಿಯಾನದಲ್ಲಿ ಬಂದಿದ್ದ ಬಹಳಷ್ಟು ಅರ್ಜಿಗಳಲ್ಲಿ ಬೇರೆ ಬೇರೆ ಸಮಸ್ಯೆಗಳನ್ನು ಜನರು ವಿವಿಧ ಅರ್ಜಿಗಳಲ್ಲಿ ನೀಡಿದರು. ಅಲ್ಲದೆ ಆಸ್ತಿಗಳ ಮಾಲೀಕ ಅರುಣ ಮತ್ತಿತರರಿಗೆ ಸ್ಥಳದಲ್ಲೇ ಇ-ಸ್ವತ್ತಿನ ದಾಖಲೆಗಳನ್ನು ವಿತರಿಸಲಾಯಿತು.
8ಕೆಕೆಡಿಯು1. ಕಡೂರು ಪಟ್ಟಣದ ಶ್ರೀಕೆಂಚಾಂಬ ದೇವಾಲಯದ ಬಳಿ ಇ-ಖಾತ ಅಭಿಯಾನಕ್ಕೆ ಪುರಸಭಾಧ್ಯಕ್ಷ ಬಂಢಾರಿ ಶ್ರೀನಿವಾಸ್ ಚಾಲನೆ ನೀಡಿದರು.