ಸಾರಾಂಶ
ಕನ್ನಡದ ಅಸ್ಮಿತೆಯ ನಿರಂತರವಾಗಿ ಬೆಳಕು ಹೊರಹೊಮ್ಮಬೇಕು ಎನ್ನುವ ದೃಷ್ಟಿಯನ್ನು ಹೊಂದಿರುವ ಡಾ. ಅರ್ಜುನ ಗೊಳಸಂಗಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ
ಗದಗ: ಬೂಕರ ಪ್ರಶಸ್ತಿಗೆ ಭಾಜನರಾಗಿರುವ ಭಾನು ಮುಸ್ತಾಕ ಅವರ ಲೇಖನ ಭಾಷಾ ವೈವಿಧ್ಯ, ಮಹಿಳಾ ಹಕ್ಕುಗಳ ಜನಪ್ರತಿನಿಧಿತ್ವದ ಮೂಲಕ ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸಿಸುವಂತೆ ಮಾಡಿದೆ ಎಂದು ಪ್ರಾಚಾರ್ಯ ಎಂ.ಯು. ಹಿರೇಮಠ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಐಕ್ಯೂಎಸಿ ಮತ್ತು ಕನ್ನಡ ವಿಭಾಗ, ಗದಗ ಚಕೋರ ಸಾಹಿತ್ಯ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜರುಗಿದ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಮತ್ತು ಅವರ ಸಾಹಿತ್ಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಸ್.ಯು. ಸಜ್ಜನಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ಕವಿಗಳಾಗಬೇಕು. ಕನ್ನಡದ ಅಸ್ಮಿತೆಯ ನಿರಂತರವಾಗಿ ಬೆಳಕು ಹೊರಹೊಮ್ಮಬೇಕು ಎನ್ನುವ ದೃಷ್ಟಿಯನ್ನು ಹೊಂದಿರುವ ಡಾ. ಅರ್ಜುನ ಗೊಳಸಂಗಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ ಎಂದರು.
ಡಾ. ಸುಜಾತಾ ಬರದೂರ ವಿಶೇಷ ಉಪನ್ಯಾಸ ನೀಡಿ, ಬಾನು ಮುಷ್ತಾಕ್ ಅವರು ಜಗತ್ತಿನ ಸಾಹಿತ್ಯ ವೇದಿಕೆಯಲ್ಲಿ ಕನ್ನಡಕ್ಕೆ ಖ್ಯಾತಿ ತಂದಿದ್ದಾರೆ. ಸಮಾನತೆ, ಪ್ರತಿಭಟನೆ ಮತ್ತು ಸಾಂಸ್ಕೃತಿಕ ಪ್ರಾಮಾಣಿಕತೆಯ ಶಕ್ತಿಯನ್ನು ಪ್ರತಿಬಿಂಬಿಸಿದೆ. ಅವರ ಎದೆಯ ಹಣತೆ (ಹಾರ್ಟ್ ಲ್ಯಾಂಪ್) ಅವರ ಕಥೆಗಳು ಘಟನೆಗಳಲ್ಲ, ಅನುಕರಣೆಗಳಲ್ಲ. ಸದಾ, ಹೊಳಪು, ಹಾಸ್ಯ ಮತ್ತು ದುಃಖವೆಲ್ಲವನ್ನು ಒಳಗೊಂಡಿದ್ದು, ನಿರಂತರ ಹೋರಾಟಕ್ಕೆ, ಜಾಗೃತಿ ಸೃಷ್ಟಿಗೆ ಶಕ್ತಿ ನೀಡುವುದಾಗಿದೆ ಎಂದು ಹೇಳಿದರು.ಪ್ರೊ. ಶಿಲ್ಪಾ ಮ್ಯಾಗೇರಿ ಮಾತನಾಡಿದರು. ಡಾ. ಅರ್ಜುನ ಗೊಳಸಂಗಿ, ಪ್ರಕಾಶ ಕರಿಗಾರ, ಐಕ್ಯೂಎಸಿ ಸಂಚಾಲಕ ಮಹಬೂಬ ಆರಿಫ್ ಸದರಸೋಫೆವಾಲೆ, ದ್ಯಾಮಣ್ಣ ಮಣಿಕಟ್ಟಿ, ರಿಯಾಜಅಹ್ಮದ ದೊಡ್ಡಮನಿ, ಸುಮಿತ್ರಾ ಮೇದಾರ ಉಪಸ್ಥಿತರಿದ್ದರು.