ಸಾರಾಂಶ
ಮೈಸೂರು: ಜಿಲ್ಲೆಯ ನಾಲ್ವರು 2023ರ ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
ಮೈಸೂರು ತಾಲೂಕಿನ ಬೆಳವಾಡಿಯ ಭಾನುಪ್ರಕಾಶ್ 600ನೇ, ಪಿರಿಯಾಪಟ್ಟಣ ತಾಲೂಕಿನ ಕುಡಕೂರಿನ ಕೆ.ಟಿ. ಮೇಘನಾ 721ನೇ, ಹುಣಸೂರು ತಾಲೂಕಿನ ತಿಮ್ಮಲಾಪುರದ ಎಂ. ಲೇಖನ್ 777ನೇ ಹಾಗೂ ಎಚ್.ಡಿ. ಕೋಟೆ ತಾಲೂಕಿನ ಆಲನಹಳ್ಳಿಯ ಎನ್. ತೇಜಸ್ವಿನಿ 781ನೇ ರ‍್ಯಾಂಕ್ ಪಡೆದಿದ್ದಾರೆ.ಗ್ರಾಮೀಣ ಭಾಗದ ಎಂ.ಲೇಖನ್, ಪ್ರೌಢಶಾಲಾ ಮುಖ್ಯಶಿಕ್ಷಕ ಎಲ್.ಮಹದೇವ ಹಾಗೂ ಕೆ.ಟಿ.ಶೈಲಜಾ ದಂಪತಿ ಪುತ್ರ. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಹುಣಸೂರಿನ ರೋಟರಿ ಶಾಲೆಯಲ್ಲಿ ಪಡೆದರು. ಮೂಡುಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ಪಿಯು, ನಂತರ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಮೈಸೂರಿನ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪಡೆದಿದ್ದಾರೆ.
ಪದವಿ ಮುಗಿದ ನಂತರ ಕೆಪಿಎಸ್ಸಿ, ಯುಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸಿದೆ. ಎಲ್ಲಿಯೂ ಕೋಚಿಂಗ್ ಪಡೆದಿಲ್ಲ. ನಿತ್ಯ ಆರು ಗಂಟೆ ಓದುತ್ತಿದ್ದೆ. ನನ್ನೆಲ್ಲಾ ಪ್ರಯತ್ನಗಳಿಗೆ ತಂದೆಯೇ ಸ್ಫೂರ್ತಿ. 2017ರಲ್ಲಿ ತೀರಿಕೊಂಡರು. ಅವರಿದ್ದರೆ ತುಂಬಾ ಖುಷಿ ಪಡುತ್ತಿದ್ದರು ಎಂದರು.ಹೈದರಾಬಾದ್ ನಲ್ಲಿ ಈಗಾಗಲೇ ಐಪಿಎಸ್ ತರಬೇತಿ ಪಡೆಯುತ್ತಿರುವ ಜೆ. ಭಾನುಪ್ರಕಾಶ್ ಬೆಳವಾಡಿಯ ಕೃಷಿಕರಾದ ಜಯರಾಮೇಗೌಡ ಹಾಗೂ ಅಂಗನವಾಡಿ ಶಿಕ್ಷಕಿ ಗಿರಿಜಮ್ಮ ದಂಪತಿ ಪುತ್ರ. ಚಾಮರಾಜನಗರದ ಹೊಂಡರಬಾಳಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಶಿಕ್ಷಣ ಪಡೆದರು. ಮಂಡ್ಯ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಎಂಬಿಬಿಎಸ್ ಮಾಡಿದ್ದಾರೆ.
ಕಳೆದ ವರ್ಷ 448ನೇ ರ‍್ಯಾಂಕ್ ಪಡೆದಿದ್ದೆ. ಈ ಬಾರಿ ಐಎಎಸ್ ಹುದ್ದೆಗಾಗಿ ಪರೀಕ್ಷೆ ಬರೆದಿದ್ದೆ, 600ನೇ ರ‍್ಯಾಂಕ್ ಬಂದಿದೆ. ಇನ್ನೂ ಎರಡು ಪರೀಕ್ಷೆ ಬರೆಯುವ ಅವಕಾಶವಿದೆ ಎಂದರು.ಕುಡಕೂರಿನ ಕೆ.ಟಿ. ಮೇಘನಾ ಈಗಾಗಲೇ ಭಾರತೀಯ ಮಾಹಿತಿ ಸೇವೆ (ಇಂಡಿಯನ್ ಇನ್ ಫರ್ಮೇಶನ್ ಸರ್ವೀಸ್) ಅಧಿಕಾರಿಯಾಗಿ ದೆಹಲಿಯಲ್ಲಿದ್ದಾರೆ. ಐಎಎಸ್ ಆಗುವ ಕನಸಿದ್ದು, ರ‍್ಯಾಂಕಿಂಗ್ ಉತ್ತಮ ಪಡೆಸಿಕೊಳ್ಳಲು ಪರೀಕ್ಷೆ ಬರೆಯುತ್ತಿದ್ದಾರೆ.
ಈ ಬಾರಿ ರ‍್ಯಾಂಕಿಂಗ್ ಸ್ವಲ್ಪ ಕಡಿಮೆಯಾಯಿತು. ಗುರಿ ಈಡೇರುವವರೆಗೂ ಪ್ರಯತ್ನಿಸುವೆ. ಪೋಷಕರ ಪ್ರೋತ್ಸಾಹವೂ ದೊಡ್ಡದು ಎಂದರು.ಹುಣಸೂರು ತಾಲೂಕಿನ ಗೆಜ್ಜಯ್ಯನ ವಡ್ಡರಗುಡಿಯ ಕೃಷಿಕರಾದ ನಂಜಪ್ಪ ಹಾಗೂ ಸುಂದರಮ್ಮ ದಂಪತಿ ಪುತ್ರಿ ತೇಜಸ್ವಿನಿ, 787ನೇ ರ‍್ಯಾಂಕ್ ಪಡೆದಿದ್ದಾರೆ. ಎಚ್.ಡಿ. ಕೋಟೆ ತಾಲೂಕಿನ ಆಲೇನಹಳ್ಳಿಯ ಯೋಗೇಶ್ ಅವರನ್ನು ವಿವಾಹವಾಗಿದ್ದು, ಅಲ್ಲಿಯೇ ನೆಲೆಸಿದ್ದಾರೆ.
ಯುಪಿಎಸ್ಸಿ ಪರೀಕ್ಷೆ ಬರೆಯಲು 2020ರಲ್ಲಿ ಬೆಂಗಳೂರಿನ ರಾಜ್ ಕುಮಾರ್ ಐಎಎಸ್ ಅಕಾಡೆಮಿಯಲ್ಲಿ ತರಬೇತಿ ಪಡೆದೆ. ಪತಿ ಎ.ಆರ್. ಯೋಗೇಶ್ ನನ್ನ ಸಾಧನೆಗೆ ಬೆಂಬಲವಾಗಿ ನಿಂತರು. ಎರಡು ವರ್ಷದ ಹಿಂದೆ ತಂದೆ ತೀರಿ ಹೋದರು. ಅವರಿದ್ದರೆ ತುಂಬ ಖುಷಿ ಪಡುತ್ತಿದ್ದರು ಎಂದು ತೇಜಸ್ವಿನಿ ಹೇಳಿದರು.