ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಪೂರ್ವ ಮುಂಗಾರು ಹಾಗೂ ಮುಂಗಾರು ಕೈ ಕೊಟ್ಟ ಹಿನ್ನೆಲೆ ಭೋರ್ಗರೆದು ಧುಮ್ಮಿಕ್ಕಬೇಕಿದ್ದ ಜಲಪಾತಗಳು ಸೊಬಗು ಕಳೆದುಕೊಂಡಿದ್ದು ಬಂಡೆಗಳ ದರ್ಶನ ಆಗುತ್ತಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಭರಚುಕ್ಕಿ ಜಲಪಾತ ಮತ್ತು ಹನೂರು ತಾಲೂಕಿನ ಹೊಗೇನಕಲ್ ಜಲಪಾತದಲ್ಲಿ ಕಾವೇರಿ ಧುಮ್ಮಿಕ್ಕುವ ರುದ್ರ ರಮಣೀಯ ದೃಶ್ಯ ಕಣ್ಮರೆಯಾಗಿದೆ.

ಮುಂಗಾರು ಮಳೆ ಸಮರ್ಪಕವಾಗಿದ್ದರೆ ಈ ಎರಡೂ ಜಲಪಾತಗಳಲ್ಲಿ ಮನಮೋಹಕ ದೃಶ್ಯ ಉಂಟಾಗುತ್ತಿತ್ತು. ಜೂನ್, ಜುಲೈ, ಆಗಸ್ಟ್ ತಿಂಗಳುಗಳಲ್ಲಿ ಕಾವೇರಿ ರುದ್ರ ನರ್ತನದ ಸೊಬಗು ಕಾಣಲು ಸಹಸ್ರಾರು ಮಂದಿ ಭಕ್ತರು ದಾಂಗುಡಿ ಇಡುತ್ತಿದ್ದರು. ಈಗ ಬೆರಳಣಿಕೆ ಮಂದಿ ಪ್ರವಾಸಿಗರು ಬಂದರೂ ಕೂಡ ಬಂಡೆಕಲ್ಲುಗಳನ್ನು ಕಂಡು ನಿರಾಸೆ ಪಡುವಂತಾಗಿದೆ.

ಕಬಿನಿ ಹಾಗೂ ಕೆಆರ್‌ಎಸ್ ಜಲಾಶಯ ಭರ್ತಿಯಾದರೆ ಭರಚುಕ್ಕಿ ಜಲಪಾತ ಮೈದುಂಬಿ ಹರಿಯುತ್ತದೆ. ಈ ಬಾರಿ ಎರಡೂ ಜಲಾಶಯಗಳು ಭರ್ತಿಯಾಗದೆ ಭರಚುಕ್ಕಿ ನೀರಿನ ಬರ ಎದುರಿಸುತ್ತಿದೆ. ಹರಿಯುವ ಕಾವೇರಿ ನದಿಯಲ್ಲೂ ನೀರಿನ ಹರಿವು ಕಾಣದ ಪರಿಣಾಮ ಭರಚುಕ್ಕಿ ಭಣಭಣ ಅನ್ನುತ್ತಿದೆ.


ಮಳೆಗಾಲದಲ್ಲಿ ಮೈದುಂಬಿ ಕೊಳ್ಳುತ್ತಿದ್ದ ಭರಚುಕ್ಕಿ ಜಲಧಾರೆಯ ಸೊಬಗು ಕಣ್ಣುಂಬಿಕೊಳ್ಳಲು ಪ್ರತಿವರ್ಷ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದರು. ಮೇ ಕೊನೆಯ ವಾರದಿಂದ ಆರಂಭವಾಗಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ಜಲಪಾತ ವೀಕ್ಷಣೆಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಲಗ್ಗೆ ಇಡುತ್ತಿದ್ದರು. ನೀರಿಲ್ಲದ ಪರಿಣಾಮ ಈ ಬಾರಿ ಪ್ರವಾಸಿಗರೂ ಬರದೇ ಸ್ಥಳೀಯ ವ್ಯಾಪಾರಿಗಳಿಗೆ ಹೊಡೆತವೇ ಬಿದ್ದಿದೆ.

ಇನ್ನು, ಕಾವೇರಿಯ ವಿಶಾಲ ಹರಿವು ಮತ್ತು ಭೋರ್ಗರೆತವನ್ನು ಕಣ್ತುಂಬಿಕೊಳ್ಳಬಹುದಾಗಿದ್ದ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ನೀರಿಲ್ಲದೇ ಖಾಲಿ ಬಂಡೆಗಳ ದರ್ಶನ ಆಗುತ್ತಿದೆ.

ಮುಂಗಾರು ಚುರುಕುಗೊಂಡರೇ ಸಾಕು ಜಲಪಾತವೇ ಕಣ್ಮರೆಯಾಗುವಂತೆ ಆರ್ಭಟಿಸಬೇಕಿದ್ದ ಕಾವೇರಿ ಈ ಬಾರಿ ನಿಶ್ಯಬ್ದಗೊಂಡು ಜುಳು ಜುಳು ಶಬ್ಧವೂ ಇಲ್ಲವಾಗಿದೆ. ನೂರಾರು ಮಂದಿ ಬೋಟ್ ನಡೆಸುವವರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ.

ಕೈ ಕೊಟ್ಟ ವರುಣನಿಂದ ಬೆಳೆಗಳು ಒಣಗಿದ್ದರೆ ಮತ್ತೊಂದೆಡೆ ಜಲಪಾತಗಳು ಸೊಬಗು ಕಳೆದುಕೊಂಡಿವೆ. ಪ್ರವಾಸೋದ್ಯಮಕ್ಕೂ ಹೊಡೆತ ನೀಡಿವೆ.

--

ಪ್ರತಿ ವರ್ಷ ಮುಂಗಾರು ಆರಂಭದಲ್ಲಿ ಭರಚುಕ್ಕಿ ಮತ್ತು ಹೊಗೇನಕಲ್‌ ಜಲಪಾತದಲ್ಲಿ ಕಾವೇರಿ ನರ್ತನ ಕಾಣಬಹುದಾಗಿತ್ತು. ಈ ಬಾರಿ ನಿರಂತರ ಮಳೆಯಿಲ್ಲದೆ. ಎರಡು ಪ್ರವಾಸಿತಾಣಗಳು ಭಣಗುಡುತ್ತಿವೆ. ಇದರಿಂದಾಗಿ ಪ್ರವಾಸೋದ್ಯಮಕ್ಕೆ ಹೊಡೆದ ಬಿದ್ದಿದೆ.

ಕೆ. ಕಾವ್ಯಶ್ರೀ, ಪ್ರವಾಸಿ, ಬೆಂಗಳೂರು