ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಭರಮಸಾಗರ ಹೋಬಳಿ ರೈತ ಸಮುದಾಯಕ್ಕೆ ಭರಮಣ್ಣನಾಯಕನ ಕೆರೆಯೇ ಡ್ಯಾಂ ಇದ್ದಂತೆ. ತುಂಗಾಭದ್ರ ನದಿಯಿಂದ ಬರುವ ನೀರು ಸಂಗ್ರಹಿಸಿ ೪೨ ಕೆರೆಗಳನ್ನು ತುಂಬಿಸುವ ಮಹತ್ವದ ಯೋಜನೆ ರೂಪುಗೊಂಡ ಮೇಲೆ ರೈತರು ಭಯಪಡುವುದು ತಪ್ಪಿದೆ ಎಂದು ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.ಸಮೀಪದ ದೊಡ್ಡಾಲಘಟ್ಟ ಗ್ರಾಮದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಗೋವಿಂದರಾಜನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ನಿಮಿತ್ತ ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತರೊಡನೆ ಮಾತನಾಡಿ, ದೊಡ್ಡ ಹಾಲ್ಘಟ್ಟ ಗ್ರಾಮದ ಕೆರೆಯ ಸುತ್ತಮುತ್ತಲಿನ ಗ್ರಾಮದ ಕೆರೆಗಳಿಗೆ ಅತಿ ಶೀಘ್ರದಲ್ಲೇ ನೀರು ತುಂಬಿಸುವ ಕಾರ್ಯ ಮಾಡಲಾಗುತ್ತದೆ. ಕೆಲವೊಂದಿಷ್ಟು ತಾಂತ್ರಿಕ ಸಮಸ್ಯೆಗಳು ಹಾಗೂ ಸ್ಥಳೀಯ ಸಮಸ್ಯೆಗಳು ಎದುರಾಗಿವೆ. ಅವುಗಳನ್ನು ಸರಿಪಡಿಸಿ ರೈತರಿಗೆ ಸಮರ್ಪಕ ನೀರು ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ರೈತರು ಕೆರೆಗಳು ತುಂಬಿಲ್ಲ ಎಂದು ಭಯ ಬೀಳುವ ಅವಶ್ಯಕತೆ ಬೇಡ. ನದಿ ನೀರನ್ನು ಕೆರೆಗಳಿಗೆ ತುಂಬಿಸುವ ಕಾರ್ಯ ಈಗಾಗಲೇ ನಡೆಯುತ್ತಿದೆ. ಭರಮಸಾಗರ ಕೆರೆ ಮೊದಲು ತುಂಬಿದರೆ ಸ್ಥಳೀಯವಾಗಿರುವಂತಹ ಎಲ್ಲಾ ಕೆರೆಗಳು ತುಂಬಿದಂತೆ. ಭರಮಸಾಗರ ಸುತ್ತಮುತ್ತಲಿನ ಕೆರೆಗಳಿಗೆ ಭರಮಸಾಗರ ಕೆರೆ ಒಂದು ಡ್ಯಾಂ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಡ್ಯಾಂ ತುಂಬಿದರೆ ಸಣ್ಣಪುಟ್ಟ ಕೆರೆಗಳು ತುಂಬುತ್ತವೆ ಎಂದು ರೈತರಿಗೆ ಮನವರಿಕೆ ಮಾಡಿದರು.ದೊಡ್ಡಾಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ ನಾಗರಾಜಪ್ಪ ಮಾತನಾಡಿ, ಸಿರಿಗೆರೆ ಮಠಕ್ಕೂ ದೊಡ್ಡಾಲಘಟ್ಟ ಗ್ರಾಮಕ್ಕೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಶ್ರೀಗಳ ಕೃಪೆಯಿಂದ ದೊಡ್ಡಾಲಘಟ್ಟ ಗ್ರಾಮದ ಕೆರೆಗೆ ತುಂಗಭದ್ರಾ ನೀರನ್ನ ಹರಿಸುವುದರ ಮೂಲಕ ರೈತರಿಗೆ ನೆರವಾಗಿದ್ದಾರೆ ಎಂದರು. ಗ್ರಾಮಸ್ಥರು ಶ್ರೀಗಳನ್ನು ಅದ್ಧೂರಿಯಾಗಿ ಡೊಳ್ಳು ನಗಾರಿ ಬಾರಿಸುವುದರ ಮೂಲಕ ರಸ್ತೆ ಉದ್ಧಕ್ಕೂ ತಳಿರು-ತೋರಣ ಕಟ್ಟಿ ಗ್ರಾಮಕ್ಕೆ ಬರಮಾಡಿಕೊಂಡರು.
ಈ ವೇಳೆ ಮುಖಂಡರಾದ ಬಿಜೆ ಗಿರಿಯಪ್ಪ, ಕೆ.ಓಂಕಾರಪ್ಪ, ಜಿಬಿ ರಂಗಪ್ಪ, ಉಮಾಪತಿ, ಓಬವ್ವನಾಗತಿಹಳ್ಳಿ ಮಂಜಣ್ಣ, ವಿಜಯ್ ಕುಮಾರ್, ಬಿ.ಟಿ ನಾಗರಾಜ್, ಎಸ್ ರವಿ, ಎಸ್.ಬಿ ಸ್ವಾಮಿ, ಸುಧಾಕರ್ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.ಸಮಸ್ಯೆ ಇದ್ದರೆ ಮಠಕ್ಕೆ ಬಂದು ಪರಿಹರಿಸಿಕೊಳ್ಳಿ
ತರಳಬಾಳು ಮಠದ ವಿಚಾರವಾಗಿ ಕೆಲವರು ಟಿವಿ ಮತ್ತು ಪತ್ರಿಕೆಗಳಲ್ಲಿ ತಪ್ಪು ಮಾಹಿತಿ ಪ್ರಚುರಪಡಿಸುತ್ತಿದ್ದಾರೆ. ಇದು ಮಠಕ್ಕೆ ಶೋಭೆ ತರುವಂತದ್ದಲ್ಲ. ಸಮಸ್ಯೆಗಳಿದ್ದರೆ ಮಠಕ್ಕೆ ಬಂದು ಶ್ರೀಗಳ ಬಳಿ ಮಾತನಾಡಬಹುದು. ಹೀಗೆ ಹಾದಿಬೀದಿಯಲ್ಲಿ ಮಾತನಾಡಿ ಮಠದ ಘನತೆಗೆ ಧಕ್ಕೆ ತರಬಾರದು. ಶ್ರೀಗಳು ಮತ್ತು ಮಠದ ಬಗ್ಗೆ ಗ್ರಾಮಸ್ಥರಿಗೆ ಅಪಾರ ಶ್ರದ್ಧೆ ಇದೆ. ಶ್ರೀಗಳು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಭಕ್ತರು ಘೋಷಿಸಿದರು.