ಸಾರಾಂಶ
ಕನ್ನಡಪ್ರಭ ವಾರ್ತೆ ತುರುವೇಕೆರೆ
ಕಳೆದ ಎಂಟತ್ತು ತಿಂಗಳಿನಿಂದ ಮಳೆಯನ್ನೇ ಕಾಣದಿದ್ದ ತಾಲೂಕಿನ ಜನತೆಗೆ ವರುಣನ ಸಿಂಚನವಾಗಿದೆ. ಸೋಮವಾರ ತಡರಾತ್ರಿ ಬಿದ್ದ ಮಳೆ ಜನ- ಜಾನುವಾರುಗಳಿಗೆ ಹರ್ಷ ತಂದಿದೆ. ನೀರಿಲ್ಲದೇ ಹೈರಾಣಾಗಿ ಹೋಗಿದ್ದ ರೈತಾಪಿಗಳ ಮೊಗದಲ್ಲಿ ತುಸು ಮಂದಹಾಸ ಮೂಡುವಂತಾಗಿದೆ.ಭರಣಿ ಮಳೆ ಆಗಿದ್ದರಿಂದ ಧರಣಿ ತಂಪಾಗಿದೆ. ಅಲ್ಲದೇ ಬಿಸಿಲಿನ ಝಳದಿಂದ ಕಂಗಾಲಾಗಿ ಹೋಗಿದ್ದ ಜನರಿಗೆ ಮಳೆಯ ಸಿಂಚನ ಹರ್ಷವನ್ನು ತಂದಿದೆ.
ತಾಲೂಕಿನ ಹಲವೆಡೆ ಸೋಮವಾರ ತಡರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಭರಣಿ ಮಳೆ ರೈತರ ಮುಖದಲ್ಲಿ ಸಂತಸವನ್ನು ತಂದಿದೆ.ಈ ವರ್ಷದ ಮೊದಲ ಮಳೆ ಭರಣಿಯು ಏ.೨೭ರಿಂದ ಹುಟ್ಟಿದ್ದರೂ ಸರಿಯಾಗಿ ಮಳೆಯಾಗಿರಲಿಲ್ಲ, ಸೋಮವಾರ ಮಧ್ಯರಾತ್ರಿ ಮಿಂಚು-ಗುಡುಗಿನ ಸಹಿತ ಬಂದ ಭಾರೀ ಮಳೆ ಒಂದು ತಾಸಿಗೂ ಹೆಚ್ಚು ಹೊತ್ತು ಸುರಿಯಿತು.
ತಾಲೂಕಿನ ಸಂಪಿಗೆ ರೈಲ್ವೇ ಸ್ಟೇಷನ್ ರಸ್ತೆ, ತಳವಾರನಹಳ್ಳಿ, ಹಂಪಲಾಪುರ, ಅಂಗರೇಖನಹಳ್ಳಿ, ಮಲ್ಲೇನಹಳ್ಳಿ, ಹಾಲಗನಹಳ್ಳಿ, ಮಾಸ್ಕನಹಳ್ಳಿ ಸೇರಿ ಸಂಪಿಗೆ ವ್ಯಾಪ್ತಿಯ ಆಸುಪಾಸಿನ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.ಮಾಯಸಂದ್ರ, ಜನಾರ್ಧನಪುರ, ಆನಡಗು, ಕಲ್ಲನಾಗತಿಹಳ್ಳಿ, ಚಿಕ್ಕಬೀರನಕೆರೆ, ಜಡೆಯ, ಕಸಬಾ ವ್ಯಾಪ್ತಿಯ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳು, ದಂಡಿನಶಿವರ, ಹುಲ್ಲೇಕೆರೆ, ಸಾರಿಗೇಹಳ್ಳಿ ಸೇರಿ ಹಲವೆಡೆ ಸಾಧಾರಣ ಮಳೆಯಾಗಿದೆ.
ಕಳೆದ ಏಳೆಂಟು ತಿಂಗಳಿನಿಂದ ಮಳೆ ಇಲ್ಲದೇ ರೈತರು ತಮ್ಮ ವಾಣಿಜ್ಯ ಬೆಳೆಗಳಾದ ತೆಂಗು ಮತ್ತು ಅಡಿಕೆ, ಬಾಳೆ ಗಿಡಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ನಿನ್ನೆ ಸುರಿದ ಭರಣಿ ಮಳೆಯಿಂದ ರೈತರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.ಬೇಸಿಗೆ ಬೆಳೆಯಾದ ಭತ್ತವನ್ನು ತುರುವೇಕೆರೆ ಕೆರೆ ಮತ್ತು ಮಲ್ಲಾಘಟ್ಟ ಕೆರೆ ಆಶ್ರಯದಲ್ಲಿ ಮುನಿಯೂರು ಮತ್ತು ಮಲ್ಲಾಘಟ್ಟ ಬಯಲಿನಲ್ಲಿ ರೈತರು ಬೆಳೆದಿದ್ದು, ಭತ್ತದ ತೆನೆ ಬರುವ ಸಮಯಕ್ಕೆ ಸರಿಯಾಗಿ ಕೆರೆಗಳಲ್ಲಿ ನೀರು ಖಾಲಿಯಾಗಿ ರೈತರಲ್ಲಿ ಆತಂಕ ಸೃಷ್ಟಿಸಿತ್ತು. ಭರಣಿ ಮಳೆಯಿಂದ ಭತ್ತದ ಕಾಳು ಬಲಿಯಲು ಅನುಕೂಲವಾಗಿದೆ ಎನ್ನುತ್ತಾರೆ ರೈತ ಬಸವರಾಜು.
ರಾತ್ರಿ ಬೀಸಿದ ಬಿರುಗಾಳಿಗೆ ತಾಲೂಕಿನ ಹಟ್ಟಿಹಳ್ಳಿ ಸಮೀಪದ ಅಡಿಕೆ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದಿದೆ. ಅದೇ ಮಾರ್ಗದಲ್ಲಿ ನೀಲಗಿರಿ ಮರದ ಕೊಂಬೆ ಮುರಿದು ವಿದ್ಯುತ್ ಲೈನ್ ಮೇಲೆ ಬಿದ್ದು ಕೆಲ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.ತಾಲೂಕಿನ ಸಂಪಿಗೆಯಲ್ಲಿ ೩೯.೨ ಮಿಮಿ, ತುರುವೇಕೆರೆ ಪಟ್ಟಣ ೩.೬ ಮಿಮೀ, ಮಾಯಸಂದ್ರ ೧೧.೪ಮಿಮೀ, ದಂಡಿನಶಿವರ ೭.೨ ಮಿಮೀ ಮಳೆಯಾಗಿದೆ. ಆದರೆ ದಬ್ಬೇಘಟ್ಟ ಹೋಬಳಿಯಲ್ಲಿ ಯಾವುದೇ ಮಳೆಯಾಗಿಲ್ಲ ಎಂದು ಹವಾಮಾನ ಇಲಾಖಾ ಮೂಲಗಳಿಂದ ತಿಳಿದು ಬಂದಿದೆ.
;Resize=(128,128))
;Resize=(128,128))
;Resize=(128,128))
;Resize=(128,128))