ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತ ಸುಭಿಕ್ಷವಾಗಿಡುವ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ 29 ರು.ಗೆ ಕೆಜಿಯಂತೆ 290 ರು.ಗೆ 10 ಕೆಜಿ ಭಾರತ್ ಅಕ್ಕಿ ನೀಡುವ ಮಾನವೀಯ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಿಳಿಸಿದರು.ನಗರದ ಶ್ರೀ ಜಯದೇವ ವೃತ್ತದಲ್ಲಿ ಸೋಮವಾರ ಭಾರತ್ ಅಕ್ಕಿ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ ಬಡವರಿಗೆ ಕಡಿಮೆ ದರದಲ್ಲಿ ಅಕ್ಕಿ ನೀಡುವ ಯೋಜನೆ ಪ್ರಧಾನಿ ನರೇಂದ್ರ ಮೋದಿ ಬದ್ಧತೆಗೆ ಸಾಕ್ಷಿ. ಈ ಯೋಜನೆ ಶಾಶ್ವತವಾಗಿರಲಿದೆ. ಎಲ್ಲೆಲ್ಲಿ ಬೇಡಿಕೆ ಇದೆಯೋ ಅಲ್ಲಲ್ಲಿ ಅಕ್ಕಿ ಪೂರೈಸಲಾಗುತ್ತಿದೆ. ಇದೇ ರೀತಿ ಗ್ರಾಮೀಣ ಪ್ರದೇಶದಲ್ಲೂ ಭಾರತ್ ಅಕ್ಕಿ ನೀಡಲಾಗುವುದು. ಪ್ರಧಾನಿ ಮೋದಿ ಈಗಾಗಲೇ ಸಾಕಷ್ಟು ಕೊಡುಗೆಗಳ ನೀಡುವ ಮೂಲಕ ದೇಶ ಸುಭದ್ರಗೊಳಿಸಿದ್ದಾರೆ ಎಂದರು.
ಕೊರೋನಾ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಉಚಿತ ನೀಡಲಾಗುತ್ತಿತ್ತು. ಈಗಲೂ 5 ಕೆಜಿ ಅಕ್ಕಿ ಜನರಿಗೆ ಉಚಿತವಾಗಿ ಪೂರೈಸಲಾಗುತ್ತಿದೆ. ಇದೇ ರೀತಿ ನೂರಾರು ಕಾರ್ಯಕ್ರಮ, ಯೋಜನೆಗಳ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗಾಗಿ ಜಾರಿಗೊಳಿಸಿದ್ದಾರೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ವಿವರಿಸಿದರು.ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ತಂದಿದ್ದಾರೆ. ಜನ್ ಧನ್ ಖಾತೆ, ಮುದ್ರಾ ಯೋಜನೆ ಸೇರಿ ಹಲವು ಯೋಜನೆಗಳ ನೀಡಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೇ, ಫಲಾನುಭವಿಗಳ ಖಾತೆಗೆ ನೇರ ಹಣ ಪಾವತಿ ವ್ಯವಸ್ಥೆ ಮಾಡಿದ್ದಾರೆ. ಮುಂದಿನ 6 ತಿಂಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಮಹಾ ನಗರದ ಪ್ರತಿಯೊಬ್ಬರ ಮನೆಯಲ್ಲಿ ದಿನದ 24 ಗಂಟೆ ನೀರು ಸಿಗಲಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆ, ರಾಜ್ಯ, ದೇಶದ ಜನತೆ ಬಿಜೆಪಿಗೆ ಬೆಂಬಲಿಸಿ ಮೂರನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ದೇಶ ಮುನ್ನಡೆಸಲು ಶಕ್ತಿ ತುಂಬಬೇಕು ಎಂದು ಸಿದ್ದೇಶ್ವರ ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮಾಜಿ ಮೇಯರ್ ಎಸ್. ಟಿ.ವೀರೇಶ, ಮುರುಗೇಶ್ ಆರಾಧ್ಯ, ಆನಂದ, ಕಡಲೇಬಾಳು ಧನಂಜಯ, ಅನಿಲ್ ನಾಯ್ಕ, ಟಿಂಕರ್ ಮಂಜಣ್ಷ, ರಾಜೇಶ್, ಕೆ.ವಿ.ಗುರು ಇತರರಿದ್ದರು.ನನಗೆ ಅಥವಾ ನಮ್ಮ ಕುಟುಂಬಕ್ಕೆ ಬಿಜೆಪಿ ಟಿಕೆಟ್: ಸಿದ್ದೇಶ್ವರ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ನನಗೆ ಅಥವಾ ನಮ್ಮ ಕುಟುಂಬಕ್ಕೆ ಟಿಕೆಟ್ ಸಿಗುವ ವಿಶ್ವಾಸವಿದೆ. ನನಗೆ ಟಿಕೆಟ್ ಕೊಟ್ಟರೂ ಕೆಲಸ ಮಾಡುವೆ, ಕೊಡದಿದ್ದರೂ ಕೆಲಸ ಮಾಡುವೆ ಎಂದು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸ್ಪಷ್ಟಪಡಿಸಿದ್ದಾರೆ.ನಗರದಲ್ಲಿ ಭಾರತ್ ಅಕ್ಕಿ ವಿತರಣೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಟಿಕೆಟ್ ಘೋಷಣೆ ಯಾವಾಗ ಆಗುತ್ತದೋ ನನಗೂ ಗೊತ್ತಿಲ್ಲ. ನಾನೂ ಟಿವಿ, ಪತ್ರಿಕೆಗಳಲ್ಲಷ್ಟೇ ನೋಡುತ್ತಿದ್ದೇನೆ. ನನಗೆ ಟಿಕೆಟ್ ಕೊಡಬೇಡಿ ಎಂಬುದಾಗಿ ಚರ್ಚೆ ನಡೆಯುತ್ತಿದೆ. ಇದರ ಬಗ್ಗೆ ರಾಜ್ಯ, ಕೇಂದ್ರ ನಾಯಕರು ನಿರ್ಧರಿಸುತ್ತಾರೆ. ಜಿಲ್ಲೆಯಲ್ಲಿ ನಡೆದ ಸಮೀಕ್ಷೆಯಲ್ಲಿ ಮತ್ತೆ ಸಿದ್ದೇಶಪ್ಪನೇ ಬೇಕು ಎಂಬುದಾಗಿ ಜನರೇ ಹೇಳುತ್ತಿದ್ದಾರೆ ಎಂದು ತಿಳಿಸಿದರು.