ಭಾರತ್ ಬಂದ್‌: ಹುಬ್ಬಳ್ಳಿಯಲ್ಲಿ ಪ್ರತಿಭಟನೆಗೆ ಸೀಮಿತ

| Published : Jul 10 2025, 12:45 AM IST

ಸಾರಾಂಶ

ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿ ನಡೆದ ಸಿಐಟಿಯು, ಎಐಯುಟಿಯು, ಎಐಬಿಇಎ ಸಂಘಟನೆಗಳ ಪದಾಧಿಕಾರಿಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತದ ವರೆಗೆ ಮಳೆಯಲ್ಲಿಯೇ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಹುಬ್ಬಳ್ಳಿ: ಕೇಂದ್ರ ಸರ್ಕಾರ ಕಾರ್ಮಿಕ, ರೈತ, ಆರ್ಥಿಕತೆ, ರಾಷ್ಟ್ರವಿರೋಧಿ ಮತ್ತು ಕಾರ್ಪೊರೇಟ್‌ ಪರ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿರುವ 10 ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್‌ಗೆ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮೂಲಕ ಬೆಂಬಲ ವ್ಯಕ್ತಪಡಿಸಲಾಯಿತು.

ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ ಹಾಗೂ ವೇತನ ಸಂಹಿತೆಗಳನ್ನು ರದ್ದು ಪಡಿಸುವಂತೆ ಆಗ್ರಹಿಸಿ ನಡೆದ ಸಿಐಟಿಯು, ಎಐಯುಟಿಯು, ಎಐಬಿಇಎ ಸಂಘಟನೆಗಳ ಪದಾಧಿಕಾರಿಗಳು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಡಾ. ಅಂಬೇಡ್ಕರ್ ವೃತ್ತದ ವರೆಗೆ ಮಳೆಯಲ್ಲಿಯೇ ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನೆಯಲ್ಲಿ ನೂರಾರು ಬ್ಯಾಂಕ್‌ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪಾಲ್ಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ದೇಶದ ಕಾರ್ಮಿಕ ವರ್ಗದ ತೀವ್ರ ಹೋರಾಟಗಳಿಂದಾಗಿ ಈ ಸಂಹಿತೆಗಳನ್ನು ಇನ್ನೂ ಜಾರಿ ಮಾಡಲು ಸಾಧ್ಯವಾಗಿಲ್ಲ. ಈಗ ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಹಿಂಬಾಗಿಲಿನಿಂದ ಕಾರ್ಮಿಕ ಸಂಹಿತೆಗಳ ಅಂಶಗಳನ್ನು ಜಾರಿ ಮಾಡಿಸಲು ಕೇಂದ್ರ ಸರ್ಕಾರ ಮುಂದಾಗುತ್ತಿದೆ. ಈ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕರ ರಕ್ಷಣೆ, ಜೀವಿಸುವ ಹಕ್ಕು, ಮೂಲಭೂತ ಹಕ್ಕುಗಳು, ವೇತನ, ಮುಷ್ಕರ, ಹೋರಾಟದ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ. ಈ ಸಂಹಿತೆಗಳು ಕಾರ್ಮಿಕರ ಮರಣ ಶಾಸನಗಳಾಗಲಿದ್ದು, ಯಾವುದೇ ಕಾರಣಕ್ಕೂ ಈ ಸಂಹಿತೆಗಳನ್ನು ಜಾರಿ ಮಾಡಬಾರದು ಎಂದು ಆಗ್ರಹಿಸಿದರು.