ಸಾರಾಂಶ
ಶಿಗ್ಗಾಂವಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಭರತ್ ಬೊಮ್ಮಾಯಿ ಗೆಲುವು ಸಾಧಿಸುವುದು ಶತಸಿದ್ಧ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಭವಿಷ್ಯ ನುಡಿದಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್. ಬೊಮ್ಮಾಯಿ ಹಾಗೂ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅಖಂಡ ಧಾರವಾಡ ಜಿಲ್ಲೆ ಅಭಿವೃದ್ಧಿ ಜತೆಗೆ ಶಿಗ್ಗಾಂವಿ ಕ್ಷೇತ್ರದಲ್ಲಿಯೂ ವಿದ್ಯಾಭ್ಯಾಸ, ನೀರಾವರಿ ಸೇರಿದಂತೆ ₹೫ ಸಾವಿರ ಜನರಿಗೆ ಉದ್ಯೋಗ ಸಿಗುವಂತೆ ಮಾಡಲು ಕ್ರಾಂತಿಯನ್ನೇ ಮಾಡಿದ್ದಾರೆ. ಇವರ ಸೇವೆಯನ್ನು ಹಾಗೂ ಮಾಡಿರುವ ಅಭಿವೃದ್ಧಿಯನ್ನು ನೆನೆದು ಮತದಾರರು ಭರತ್ ಬೊಮ್ಮಾಯಿ ಅವರ ಕೈಹಿಡಿಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಿಎಂ ಸಿದ್ದರಾಮಯ್ಯ ಇವರೇ ಆರೋಪಿ ನಂಬರ್ ಒನ್ ಆಗಿದ್ದು, ಈ ಸರ್ಕಾರ ಭ್ರಷ್ಟಾಚಾರ ಹಗರಣಗಳನ್ನೇ ತುಂಬಿಕೊಂಡಿದೆ. ದಲಿತರಿಗೆ ಈ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದ್ದಾರೆ. ಒಳ ಮೀಸಲಾತಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿ ಅದನ್ನು ಇದುವರೆಗೂ ಈಡೇರಿಸಿಲ್ಲ. ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಸುಳ್ಳು ಹೇಳಿ ಒನ್ ಮ್ಯಾನ್ ಕಮಿಶನ್ ರಚನೆ ಮಾಡಿ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ ಎಂದು ಆರೋಪಿಸಿದರು. ೨೦೨೩ರಲ್ಲಿ ಜಾತಿ ಜಾತಿಗಳ ನಡುವೆ ವಿಷದ ಬೀಜ ಬಿತ್ತಿದರು. ಸುಳ್ಳು ಸುದ್ದಿ ಹಬ್ಬಿಸಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಒಳ ಮೀಸಲಾತಿ ಜಾರಿ ವಿಚಾರದಲ್ಲಿ ನಿಜವಾದ ಉದ್ದೇಶವನ್ನು ಕಾಂಗ್ರೆಸ್ ಸರ್ಕಾರದ ಹಿಡನ್ ಅಜೆಂಡಾದ ನೈಜತೆಯನ್ನು ದಲಿತ ಜನಾಂಗ ಸ್ಪಷ್ಪವಾಗಿ ಅರಿಯಬೇಕು ಎಂದು ಹೇಳಿದರು. ವಕ್ಫ್ ವಿಚಾರವಾಗಿ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಸುಳ್ಳು ಸುದ್ದಿಯನ್ನು ಹರಿಬಿಟ್ಟಿದೆ. ಸಿಟಿಯಲ್ಲಿರುವ ೨೯ ಸಾವಿರ ಎಕರೆ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ದೋಚಿದೆ. ಇದನ್ನು ಉಳಿಸಬೇಕೆಂದು ಬಸವರಾಜ ಬೊಮ್ಮಾಯಿ ಹೇಳಿದ್ದನ್ನು ಕಾಂಗ್ರೆಸ್ ಸರ್ಕಾರ ಈಗ ತಿರುಚಿದೆ. ಕಾಂಗ್ರೆಸಿನ ಪ್ರಮುಖ ನಾಯಕರೇ ಸಾವಿರಾರು ಎಕರೆ ವಕ್ಫ್ ಆಸ್ತಿಯನ್ನು ನುಂಗಿದ್ದಾರೆ. ಇದು ಅನ್ವರ್ ಮಾಣಪ್ಪಾಡಿ ವರದಿಯಲ್ಲಿ ಸ್ಪಷ್ಪವಾಗಿ ಇದೆ. ವಕ್ಫ್ ಆಸ್ತಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರೈತರ ಭೂಮಿ, ಹಿಂದೂ ದೇವಾಲಯಗಳ ಭೂಮಿಯನ್ನು ಕಾಂಗ್ರೆಸ್ ನುಂಗಿದೆ. ಸಿಂಧಗಿ ವಿರಕ್ತಮಠದ ಆಸ್ತಿ, ಯರಗಲ್ ಮಠದ ಭೂಮಿ, ಸೋಮೇಶ್ವರ ದೇವಸ್ಥಾನದ ಆಸ್ತಿಯನ್ನು ಕಾಂಗ್ರೆಸ್ ವಕ್ಪ್ ಆಸ್ತಿ ಎಂಬುದಾಗಿ ಹಾಗೂ ಪಹಣಿಯಲ್ಲಿ ನಮೂದು ಮಾಡಿ ಸೇರಿಸಿ ನುಂಗಿಹಾಕಿದೆ. ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದರು.ವಿಜಯಪುರದ ಗೋಲಗುಮ್ಮಟ ಭಾರತ ಸರ್ಕಾರದ ಆಸ್ತಿಯಾಗಿದ್ದರೂ ಇದನ್ನು ಕಾಂಗ್ರೆಸ್ ವಕ್ಫ್ ಆಸ್ತಿ ಎಂದು ಹೇಳಿರುವುದು ಘೋರ ಅನ್ಯಾಯ. ಈ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದ್ದಿದ್ದೇ ಆಗಿದ್ದಲ್ಲಿ ವಕ್ಫ್ ಆಸ್ತಿ ಉಳಿಸಬೇಕೆಂದಲ್ಲಿ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಜಾರಿಗೊಳಿಸಲಿ ಎಂದು ಕಾರಜೋಳ ಆಗ್ರಹಿಸಿದರು. ಸಿದ್ದರಾಮಯ್ಯ ಸರ್ಕಾರ ಜಮೀರ್ ಎನ್ನುವ ಮಂತ್ರಿಯನ್ನಿಟ್ಟುಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದೆ. ಹಿಂದೂ ದೇವಾಲಯಗಳನ್ನು ಕಬಳಿಸಲು ಹೊರಟಿದೆ. ಸಿದ್ದರಾಮಯ್ಯಗೆ ಸಿಎಂ ಆಗಿ ಮುಂದುವರಿಯಲು ಯಾವ ನೈತಿಕತೆಯೂ ಇಲ್ಲ. ಆರೋಪಿ ನಂಬರ್ ಒನ್ ಆಗಿರುವ ಸಿದ್ದರಾಮಯ್ಯ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕೆಂದು ಗೋವಿಂದ ಕಾರಜೋಳ ಅಗ್ರಹಿಸಿದರು.