ಸಮೀಪದ ಕೋಹಳ್ಳಿ ಗ್ರಾಮದ ಭಾರತ ಕೋ-ಆಪ್ ಕ್ರೆಡಿಟ್ ಬ್ಯಾಂಕ್ 2025-26ನೇ ಸಾಲಿನಲ್ಲಿ ₹18 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ನೂರಅಹ್ಮದ್ ಡೊಂಗರಗಾಂವ ಹೇಳಿದರು.
ಕನ್ನಡಪ್ರಭ ವಾರ್ತೆ ಐಗಳಿ
ಸಮೀಪದ ಕೋಹಳ್ಳಿ ಗ್ರಾಮದ ಭಾರತ ಕೋ-ಆಪ್ ಕ್ರೆಡಿಟ್ ಬ್ಯಾಂಕ್ 2025-26ನೇ ಸಾಲಿನಲ್ಲಿ ₹18 ಲಕ್ಷ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ನೂರಅಹ್ಮದ್ ಡೊಂಗರಗಾಂವ ಹೇಳಿದರು.ಕೋಹಳ್ಳಿಯಲ್ಲಿ ನಡೆದ ಬ್ಯಾಂಕಿನ 25ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲ ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಹಕರ ಸಹಕಾರದಿಂದ ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ. 2001ರಲ್ಲಿ ವಿಜಯಪುರದ ಸಿದ್ದೇಶ್ವರ ಮಹಾಸ್ವಾಮಿಗಳು ಬ್ಯಾಂಕ್ ಉದ್ಘಾಟಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಬ್ಯಾಂಕ್ ಮುನ್ನಡೆಯುತ್ತಿದೆ ಎಂದರು.ಬ್ಯಾಂಕ್ ಸ್ವಂತ ಕಟ್ಟಡ ಹೊಂದಿದ್ದು, ಗಣಕಯಂತ್ರ, ಲಾಕರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸದಸ್ಯರಿಗೆ ಶೇ.16ರಷ್ಟು ಲಾಭಾಂಶ ವಿತರಿಸಲಾಗುವುದು. ನಿರ್ದೇಶಕರು ಹಾಗೂ ಸದಸ್ಯರ ವಿಶ್ವಾಸದೊಂದಿಗೆ ಬ್ಯಾಂಕನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸಲಾಗುವುದು ಎಂದರು.ಪ್ರತಿವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವ ಐಗಳಿ, ಕೋಹಳ್ಳಿ ಹಾಗೂ ಅಡಹಳ್ಳಿ ಗ್ರಾಮದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ ಸತ್ಕರಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಉತ್ತೇಜನ ದೊರೆಯಲಿದೆ ಎಂದು ತಿಳಿಸಿದರು.ಬ್ಯಾಂಕ್ 25 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವ ಆಚರಿಸಲು ಉದ್ದೇಶಿಸಲಾಗಿತ್ತು. ಆದರೆ ಮಳೆ ಕೊರತೆಯಿಂದ ಬರಗಾಲ ಉಂಟಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಬೆಳ್ಳಿ ಮಹೋತ್ಸವವನ್ನು ರದ್ದುಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿಯಾಗಲಿ ಎಂದು ಗ್ರಾಮ ದೇವತೆ ಸಂಗಮೇಶ್ವರರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.ನಿವೃತ್ತ ಶಿಕ್ಷಕ ಅಪ್ಪಾಸಾಬ ತೆಲಸಂಗ ಮಾತನಾಡಿ, ಕೋಹಳ್ಳಿ ಭಾರತ ಬ್ಯಾಂಕ್ ತನ್ನದೇ ಆದ ಘನತೆ, ಗೌರವ ಹಾಗೂ ವಿಶ್ವಾಸವನ್ನು ಉಳಿಸಿಕೊಂಡು 25 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ಸಂಗತಿ. ಆಡಳಿತ ಮಂಡಳಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕ್ ಪ್ರಗತಿಯತ್ತ ಸಾಗುತ್ತಿದೆ ಎಂದರು.2027ರಲ್ಲಿ ಲಿಂ.ಅಪ್ಪಯ್ಯ ಮಹಾಸ್ವಾಮಿಗಳ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.ಇದೇ ಸಂದರ್ಭದಲ್ಲಿ ಸೇವಾ ನಿವೃತ್ತ ಶಿಕ್ಷಕರಾದ ಎ.ಎಸ್.ತೆಲಸಂಗ, ಎಸ್.ಜಿ.ಬಿರಾದಾರ, ಶಿವಗೌಡ ಮುದೋಳ ಹಾಗೂ ಪಿಕೆಪಿಎಸ್ ನೂತನ ಅಧ್ಯಕ್ಷ ಶೌಕತ್ ಅಲಿ ಡೊಂಗರಗಾಂವ ಅವರನ್ನು ಬ್ಯಾಂಕ್ ವತಿಯಿಂದ ಸತ್ಕರಿಸಲಾಯಿತು.ಆಡಳಿತ ಮಂಡಳಿ ನಿರ್ದೇಶಕರಾದ ಅಡಹಳ್ಳಿಯ ಅಡಿವೆಪ್ಪ ಕೆಂಚನ್ನವರ, ಉಪಾಧ್ಯಕ್ಷ ಶಂಕರ ಪೂಜಾರಿ, ಷಣ್ಮುಖ ದೇವಖಾತೆ, ವಿಠ್ಠಲ ಹರಪಾಳೆ, ಮಹಾದೇವ ಸತ್ತಿ, ಭೀಮು ಪಾತ್ರೂಟ್, ಲಕ್ಷ್ಮೀಬಾಯಿ ಸಲಗರ, ಬದ್ರುದ್ದಿನ್ ಡೊಂಗರಗಾಂವ, ರಿಯಾಜ್ ಅಹ್ಮದ್ ಡೊಂಗರಗಾಂವ, ಐಗಳಿಯ ಪ್ರಲ್ಹಾದ ಪಾಟೀಲ, ಸುನಂದಾ ಬಳಗಲಿ, ಡಾ.ಆರ್.ಡಿ.ವಾಘಮೋರೆ, ತುಕಾರಾಮ ದೇವಖಾತೆ, ಸೋಮಲಿಂಗ ಪೂಜಾರಿ ಸೇರಿದಂತೆ ಸದಸ್ಯರು ಇದ್ದರು.ಮುಖ್ಯ ಕಾರ್ಯದರ್ಶಿ ಚನ್ನಪ್ಪ ತೆಲಸಂಗ ವಾರ್ಷಿಕ ಜಮಾ-ಖರ್ಚು ಹಾಗೂ ವಿವಿಧ ವಿಷಯಗಳನ್ನು ಮಂಡಿಸಿದರು. ಗಣೇಶ ಪೂಜಾರಿ ಸ್ವಾಗತಿಸಿದರು. ಅಧ್ಯಕ್ಷ ನೂರಅಹ್ಮದ್ ಡೊಂಗರಗಾಂವ ವಂದಿಸಿದರು.