ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆ.4ರಂದು ನಗರದ ಪೂರ್ಣ ಚೇತನ ಶಾಲೆಯ ವಿದ್ಯಾರ್ಥಿಗಳು ದೇಶದ ಎಲ್ಲ ರಾಜ್ಯಗಳ ಸ್ಥಳೀಯ ನೃತ್ಯ ಪ್ರಕಾರಗಳನ್ನು ಈ ಎಲ್ಲ ನೃತ್ಯ ಪ್ರಕಾರಗಳ ವಿಶ್ವರೂಪ ದರ್ಶನ ಪ್ರದರ್ಶಿಸಲಿದ್ದಾರೆ.ನಮ್ಮ ರಾಜ್ಯಗಳಲ್ಲಿ ಪ್ರಸಿದ್ಧವಾಗಿರುವ ಜನಪ್ರಿಯ ನೃತ್ಯ ಪ್ರಕಾರಗಳನ್ನು ಅವರು ನಗರದ ನೃತ್ಯಪ್ರಿಯರ ಎದುರು ಪ್ರಸ್ತುತಪಡಿಸಲಿದ್ದಾರೆ. ಆ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಶ್ರೀಕಾರ ಹಾಡಲಿದ್ದಾರೆ. ತಮ್ಮ ಎರಡು ಗಂಟೆಗಳ ಪ್ರದರ್ಶನದಲ್ಲಿ ಈ ವಿದ್ಯಾರ್ಥಿಗಳು ವಿವಿಧತೆಯಲ್ಲಿ ಏಕತೆಯ ಕಲ್ಪನೆಯನ್ನು ಪ್ರಸ್ತುತಪಡಿಸಲಿದ್ದಾರೆ.
ಪೂರ್ಣ ಚೇತನ ಶಾಲೆಯ ಪೂರ್ವ ಪ್ರಾಥಮಿಕದಿಂದಿಡಿದು ಹತ್ತನೇ ತರಗತಿಯವರೆಗಿನ 525 ವಿದ್ಯಾರ್ಥಿಗಳು ಅಂದು ಸಂಜೆ ನಿಮ್ಮನ್ನು ಭಾರತೀಯ ನೃತ್ಯ ಪ್ರಕಾರಗಳ ಗಾಂಧರ್ವ ಲೋಕಕ್ಕೆ ಕರೆದೊಯ್ಯಲಿದ್ದಾರೆ. ಅಂದು ಸಂಜೆ 4ಕ್ಕೆ ನಗರದ ಕೆಎಸ್ಒಯು ಘಟಿಕೋತ್ಸವ ಸಭಾಂಗಣದಲ್ಲಿ ಈ ಭಾರತೀಯ ನೃತ್ಯ ಪ್ರಕಾರಗಳ ಗಾಂಧರ್ವ ಲೋಕ ಸೃಷ್ಟಿಯಾಗಲಿದೆ.ವಿದ್ಯಾರ್ಥಿಗಳು ಮಾರುಣಿ (ಸಿಕ್ಕಿಂ), ಚಿರಾವ್ (ಮಿಜೋರಾಂ), ರೌಫ್ (ಕಾಶ್ಮೀರ್), ಬೌಲ್ (ಪಶ್ಚಿಮ ಬಂಗಾಳ), ಮಣಿಪುರಿ (ಮಣಿಪುರ), ಜುಮರ್ (ಹರಿಯಾಣ), ಘೂಮರ್ (ರಾಜಸ್ಥಾನ), ಗಾರ್ಬಾ (ಗುಜರಾತ್), ರಾಸ್ಲೀಲಾ (ಉತ್ತರ ಪ್ರದೇಶ), ಕೋಲಾಟ (ಕರ್ನಾಟಕ), ಲಾವಣಿ (ಮಹಾರಾಷ್ಟ್ರ), ಗೋವಾ (ಗೋವಾ), ಬಿಹು (ಅಸ್ಸಾಂ), ವಂಗಲಾ (ಮೇಘಾಲಯ), ದಾಂಡಿಯಾ (ಗುಜರಾತ್), ಭಾಂಗ್ರಾ (ಪಂಜಾಬ್), ಲೆಜಿಮ್ (ಮಹಾರಾಷ್ಟ್ರ), ಚಾಹು (ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ), ಪಿಲಿ ನಲಿಕೆ (ಹುಲಿ ಕುಣಿತ- ಕರ್ನಾಟಕ ಜಾನಪದ), ಯಕ್ಷಗಾನ (ಕರ್ನಾಟಕ), ನಾತಿ (ಹಿಮಾಚಲ ಪ್ರದೇಶ), ಚಾಂಗ್ ಲೂ (ನಾಗಾಲ್ಯಾಂಡ್), ಭರತನಾಟ್ಯ (ತಮಿಳುನಾಡು), ಪೆರಿಣಿ (ತೆಲಂಗಾಣ), ಒಡಿಸ್ಸಿ (ಒಡಿಶಾ), ಮೋಹಿನಿಯಾಟ್ಟಂ (ಕೇರಳ), ಡೊಳ್ಳು ಕುಣಿತ (ಕರ್ನಾಟಕ), ವೀರಗಾಸೆ (ಕರ್ನಾಟಕ), ಹೊಜಗಿರಿ (ತ್ರಿಪುರ) ಮತ್ತು ಹಿಮಾಚಲ ಪ್ರದೇಶದ ಅಜಿಲಮು ನೃತ್ಯ ಪ್ರಕಾರಗಳನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುತ್ತಾರೆ.
ಶಾಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ದರ್ಶನ್ ರಾಜ್ ಪ್ರಕಾರ ವೈವಿಧ್ಯತೆಯಲ್ಲಿ ಒಗ್ಗಟ್ಟಿನ ಪರಿಕಲ್ಪನೆಯನ್ನು ನಮ್ಮಲ್ಲಿ ಇನ್ನಷ್ಟು ದೃಢಗೊಳಿಸುವುದೇ ಈ ಪ್ರಯತ್ನದ ಪ್ರಮುಖ ಉದ್ದೇಶ. ನಮ್ಮ ರಾಷ್ಟ್ರದ ಪ್ರತಿಯೊಂದು ರಾಜ್ಯವು ತನ್ನದೇ ಆದ ವಿಭಿನ್ನ ನೃತ್ಯ ಪ್ರಕಾರಗಳನ್ನು ಹೊಂದಿದೆ ಎಂದರು.ಶಾಲೆಯ ಮುಖ್ಯ ಆಡಳಿತಾಧಿಕಾರಿ ಮಾಧುರ್ ರಾಮಸ್ವಾಮಿ ಮಾತನಾಡಿ, ಇಂತಹ ಪ್ರಯೋಗ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ನಡೆಯಲಿದೆ. ಇದು ಕೇವಲ ನೃತ್ಯ ಪ್ರದರ್ಶನವಲ್ಲ; ಬದಲಿಗೆ ಭಾರತೀಯತೆಯ ಸಂಭ್ರಮವನ್ನು ಆಚರಿಸುವುದು ಎಂದು ಹೇಳಿದ್ದಾರೆ.
ಶಾಲೆಯ ಹಳೆ ವಿದ್ಯಾರ್ಥಿ, ನಟ, ನಿರ್ದೇಶಕ ಸುಪ್ರೀತ್ ಆರ್. ಭಾರದ್ವಾಜ್ ಹಾಗೂ ಅವರ ತಂಡ, ಶಾಲೆಯ ಶಿಕ್ಷಕರು ಈ ಎಲ್ಲ ನೃತ್ಯ ಪ್ರಕಾರಗಳ ಸಂಯೋಜನೆಯನ್ನು ಮಾಡುತ್ತಿದ್ದಾರೆ.