ಬ್ಯಾನರ್ ಗಲಾಟೆಯಲ್ಲಿ ಯುವಕ ರಾಜಶೇಖರ ರೆಡ್ಡಿ ಸಾವು ಸಂಭವಿಸಿರುವುದು ಗುರುಚರಣ್ ಸಿಂಗ್ ಎಂಬ ಖಾಸಗಿ ಗನ್ ಮ್ಯಾನ್ ಬಂದೂಕಿನಿಂದ ಎಂಬುದು ಗೊತ್ತಾಗಿದೆ.
ಶಾಸಕ ಭರತ್ ರೆಡ್ಡಿ ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಸ್ಪಷ್ಟ
ಬಳ್ಳಾರಿ: ಬ್ಯಾನರ್ ಗಲಾಟೆಯಲ್ಲಿ ಯುವಕ ರಾಜಶೇಖರ ರೆಡ್ಡಿ ಸಾವು ಸಂಭವಿಸಿರುವುದು ಗುರುಚರಣ್ ಸಿಂಗ್ ಎಂಬ ಖಾಸಗಿ ಗನ್‌ಮ್ಯಾನ್‌ನ ಬಂದೂಕಿನಿಂದ ಎಂಬುದು ಗೊತ್ತಾಗಿದೆ. ಈ ವಿಷಯವನ್ನು ಹೆಚ್ಚುವರಿ ಎಸ್ಪಿ ರವಿಕುಮಾರ್ ಅವರೇ ನನಗೆ ಖಚಿತಪಡಿಸಿದ್ದಾರೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ತಿಳಿಸಿದರು.ಗುರುಚರಣ್ ಸಿಂಗ್ ಶಾಸಕ ಭರತ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್ ಎಂದು ಗೊತ್ತಾಗಿದೆ. ಭರತ್ ರೆಡ್ಡಿ ಅನೇಕ ಕಾರ್ಯಕ್ರಮಕ್ಕೆ ತೆರಳುವಾಗ ಇದೇ ಗನ್‌ಮ್ಯಾನ್ ಜತೆಗಿರುವುದು ಅನೇಕ ವೀಡಿಯೋಗಳಲ್ಲಿ ಕಂಡು ಬರುತ್ತದೆ. ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಿದ್ಧತೆಗಾಗಿ ಶಾಸಕ ಭರತ್ ರೆಡ್ಡಿ ಅವರ ಪತ್ನಿ ಎಸ್ಪಿ ವೃತ್ತಕ್ಕೆ ಬಂದಿದ್ದ ವೇಳೆ ಕಾರಿನಿಂದ ಇಳಿಯುವಾಗ ಜತೆಗೆ ಭರತ್ ರೆಡ್ಡಿ ಅವರ ಖಾಸಗಿ ಗನ್‌ಮ್ಯಾನ್ ಗುರುಚರಣ್ ಸಿಂಗ್ ಇದ್ದರು. ಭರತ್ ರೆಡ್ಡಿ ನಗರದಲ್ಲಿ ಓಡಾಡುವಾಗ ಸರ್ಕಾರಿ ಗನ್‌ಮ್ಯಾನ್ ಅಲ್ಲದೆ, ಇದೇ ಗನ್‌ಮ್ಯಾನ್ ಜತೆ ಓಡಾಡುತ್ತಿರುವುದು ಅನೇಕ ವೀಡಿಯೋಗಳಲ್ಲಿ ವೀಕ್ಷಿಸಿದ್ದೇವೆ. ಅಂದರೆ, ಇದರಿಂದ ಭರತ್ ರೆಡ್ಡಿ ಸರ್ಕಾರಿ ಜತೆಗೆ ಖಾಸಗಿ ಗನ್‌ಮ್ಯಾನ್‌ಗಳನ್ನು ಹೊಂದಿದ್ದರು ಎಂಬುದು ಸ್ಪಷ್ಟವಾಗಿದೆ. ತಮ್ಮ ಕುಟುಂಬ ರಕ್ಷಣೆಗೆ ಹೊಂದಿರುವ ಖಾಸಗಿ ಗನ್‌ಮ್ಯಾನ್‌ಗಳನ್ನು ಸತೀಶ್ ರೆಡ್ಡಿ ಜತೆಗೆ ಕಳುಸಿಕೊಟ್ಟಿರುವ ಶಾಸಕ ಭರತ್ ರೆಡ್ಡಿ ಅವರು ನನ್ನ ಹತ್ಯೆಗೆ ಸಂಚು ರೂಪಿಸಿದ್ದರು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದರು.
ಘಟನೆಗೆ ಸಂಬಂಧಿಸಿ ನಾಲ್ವರು ಗನ್‌ಮ್ಯಾನ್‌ಗಳನ್ನು ವಿಚಾರಣೆ ಮಾಡಿದ್ದೇವೆ. ಸತೀಶ್ ರೆಡ್ಡಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ ಎಂದರು.ಬ್ಯಾನರ್ ಗಲಾಟೆಯ ಗುಂಪು ಘರ್ಷಣೆ ವೇಳೆ ನನ್ನ ಮನೆಗೆ ಮೂರು ಗುಂಡುಗಳು ಬಿದ್ದಿವೆ. ಅವು ನಮ್ಮ ಬಳಿಯೇ ಇವೆ. ಆದರೆ ಪೊಲೀಸರು ಈ ವರೆಗೆ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿಲ್ಲ ಎಂದು ತಿಳಿಸಿದರು.