ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿ ಬಳಿ ಮಂಗಳವಾರ ಪಕ್ಷದ ಕಾರ್ಯಕರ್ತರಿಗೆ ‘ಭಾರತ ರೈಸ್’ ಅಕ್ಕಿ ಚೀಲ ವಿತರಿಸುವಾಗ ದಾಳಿ ಮಾಡಿರುವ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು, ತಲಾ 10 ಕೆ.ಜಿ. ತೂಕದ 940 ಅಕ್ಕಿ ಚೀಲಗಳನ್ನು ಜಪ್ತಿ ಮಾಡಿದ್ದಾರೆ.
ಪಕ್ಷದ ಕಚೇರಿ ಬಳಿ ಭಾರತ್ ರೈಸ್ ಅಕ್ಕಿ ಚೀಲಗಳನ್ನು ಕಾರ್ಯಕರ್ತರಿಗೆ ವಿತರಿಸುತ್ತಿರುವ ಬಗ್ಗೆ ಮಾಹಿತಿ ಪಡೆದು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ದಾಳಿ ಮಾಡಿದರು.
ಈ ವೇಳೆ ಅಕ್ಕಿಯನ್ನು ಜಪ್ತಿ ಮಾಡಲು ಮುಂದಾದಾಗ, ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಅವರು ವಿರೋಧಿಸಿದರು. ಅಕ್ಕಿ ವಿತರಿಸಲು ಅವಕಾಶವಿದ್ದು, ಜಪ್ತಿ ಮಾಡದಂತೆ ವಾಗ್ವಾದ ನಡೆಸಿದರು.
ಆದರೂ ಇದಕ್ಕೆ ಜಗ್ಗದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು, ಲಾರಿ ಸಹಿತ ಅಕ್ಕಿ ಚೀಲಗಳನ್ನು ಜಪ್ತಿ ಮಾಡಿ ಗೋವಿಂದರಾಜನಗರ ಪೊಲೀಸ್ ಠಾಣೆಗೆ ಕೊಂಡೊಯ್ದರು.
ಬಳಿಕ ಉಮೇಶ್ ಶೆಟ್ಟಿ, ಲಾರಿ ಚಾಲಕ ಹಾಗೂ ಗುತ್ತಿಗೆದಾರ ಸೇರಿದಂತೆ ಇತರರ ವಿರುದ್ಧ ಚುನಾವಣಾಧಿಕಾರಿಗಳು ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಎನ್‌ಸಿಆರ್ ದಾಖಲಿಸಲಾಗಿದೆ.
ನ್ಯಾಯಾಲಯದಿಂದ ಅನುಮತಿ ಪಡೆದ ಬಳಿಕ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವುದಾಗಿ ಗೋವಿಂದರಾಜನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.