ವೈಚಾರಿಕ ಪ್ರಜ್ಞೆ ಮೂಡಿಸುವ ಭಾರತ ಸ್ಕೌಟ್ಸ್, ಗೈಡ್ಸ್

| Published : Jan 01 2024, 01:15 AM IST

ಸಾರಾಂಶ

ಹಳಿಯಾಳದ ಕೆ.ಕೆ. ಹಳ್ಳಿಯ ಚೈತನ್ಯ ವಸತಿ ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಬಿರ ನಡೆಯಿತು. ಪಿಜಿಆರ್ ಸಿಂಧ್ಯಾ ಭಾಗವಹಿಸಿದ್ದರು.

ಹಳಿಯಾಳ: ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳನ್ನು ವಿಶ್ವ ಮಾನವನ್ನರನ್ನಾಗಿ ಸಜ್ಜುಗೊಳಿಸಲು, ಅವರಲ್ಲಿ ಸೇವಾ ಮನೋಭಾವ ಜಾಗೃತಿಗೊಳಿಸುತ್ತದೆ ಎಂದು ಎಂದು ಮಾಜಿ ಸಚಿವ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.

ಭಾನುವಾರ ತಾಲೂಕಿನ ಕೆ.ಕೆ. ಹಳ್ಳಿಯ ಚೈತನ್ಯ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು. ಇದೊಂದು ಪಕ್ಷಾತೀತ, ಜಾತಿ ಧರ್ಮಗಳನ್ನು ಮೀರಿದ ವೈಚಾರಿಕ ಪ್ರಜ್ಞೆ ಮೂಡಿಸುವ ಸಂಸ್ಥೆಯಾಗಿದೆ ಎಂದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಬೇಕು. ವಿಶ್ವದೆಲ್ಲೆಡೆ ಸ್ಥಾಪಿಸಿರುವ ಈ ಸಂಸ್ಥೆಯ ಸಂಘಟನೆಯನ್ನು ಬಲಪಡಿಸಲು ಪ್ರತಿ ಶಾಲೆಯಲ್ಲೂ ಘಟಕ ತೆರೆದು ಬಲವರ್ಧನೆ ಮಾಡಬೇಕಾಗಿದೆ. ಈ ಸಂಸ್ಥೆಯ ಮೌಲ್ಯಗಳನ್ನು ಮಕ್ಕಳಿಗೆ ತಲುಪಿಸಿ ತನ್ಮೂಲಕ ಶಿಕ್ಷಕರು ದೇಶ ಕಟ್ಟುವ ಕಾಯಕದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ ಇದ್ದರೆ ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳು ನಡೆಯುತ್ತವೆ. ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ, ಹಾಸನದ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಕಾಭಿಷೇಕ, ಹಾಸನಾಂಬೆ ಜಾತ್ರೆಯಲ್ಲಿ ರೋವರ್ಸ್ ಮತ್ತು ರೇಂಜರ್ಸ್‌ಗಳು ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಅಭಿನಂದಿಸಿದರು. ಶಿಸ್ತು ಮತ್ತು ಸಹನೆ ರೂಢಿಸಿಕೊಳ್ಳಲು ಸ್ಕೌಟ್ಸ್ ಮತ್ತು ಗೈಡ್ಸ್ ಅತ್ಯುತ್ತಮ ವೇದಿಕೆಯಾಗಿದೆ. ಇಲ್ಲಿ ನಡೆಯುವ ಚಟುವಟಿಕೆ ಯುವಸಮೂಹಕ್ಕೆ ಮತ್ತು ವಿದ್ಯಾರ್ಥಿಗಳಿಗೆ ಬಹು ಉಪಯುಕ್ತವಾಗಿವೆ ಎಂದರು.ಶಿಬಿರ: ಚೈತನ್ಯ ವಸತಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಶಿರಸಿ ಶೈಕ್ಷಣಿಕ ಜಿಲ್ಲೆಯ ವತಿಯಿಂದ ಡಿ. 26ರಿಂದ ಜ. 1ರ ವರೆಗೆ ಆಯೋಜಿಸಿದ ಶಿಬಿರದಲ್ಲಿ ನೂತನವಾಗಿ ನೇಮಕಗೊಂಡ ಶಿಕ್ಷಕ ಮತ್ತು ಶಿಕ್ಷಕಿಯರಿಗಾಗಿ ಏಳು ದಿನಗಳ ಮೂಲ ತರಬೇತಿ ಹಾಗೂ ರೋವರ್ಸ್‌ ರೇಂಜರ್ಸಗಳಿಗಾಗಿ ಮೂರು ದಿನಗಳ ನಿಪುಣ ತರಬೇತಿ ಶಿಬಿರ ಆಯೋಜಿಸಲಾಗಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಎಚ್. ಭಟ್ ವಹಿಸಿದ್ದರು. ಎಂ.ಎಂ. ಭಟ್, ಟಿ.ಕೆ. ನಾಯಕ್, ವೀರೇಶ್ ಮಾದರ್, ದೈಹಿಕ ಶಿಕ್ಷಣ ನಿರ್ದೇಶಕ ವಿವೇಕಾನಂದ ಕವರಿ, ಸಿಆರ್‌ಪಿ ಗೋಪಾಲ ಅರಿ, ರಮೇಶ ಕುರಿಯವರ, ಕಿರಣ ಫರ್ನಾಂಡಿಸ್ ಇದ್ದರು.ಹೇಮಲತಾ, ಪ್ರೇಮಲತಾ, ಮಧುಶ್ರೀಯವರು ತರಬೇತುದಾರರಾಗಿ ಮತ್ತು ವಿನಯಕುಮಾರ್, ಪ್ರಿತೇಶ್, ಹೇಮಂತ್, ಅಶಿತಾ, ರಮೇಶ್ ಚವ್ಹಾಣ, ನವೀನಕುಮಾರ್ ಮತ್ತು ಮಂಜುನಾಥ ನಾಯಕ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದರು. ದಿವ್ಯಾ ಎಸ್‌.ಎಸ್‌. ಕಾರ್ಯಕ್ರಮ ನಿರ್ವಹಿಸಿದರು.