ಸಾರಾಂಶ
ಯಲ್ಲಾಪುರ:
ವಿದ್ಯಾರ್ಥಿಗಳಲ್ಲಿ ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತ ಸೇವಾದಳವು, ಈ ನಾಡನ್ನು ಸಮೃದ್ಧವಾಗಿ ಕಟ್ಟಿ ಬೆಳೆಸಲು ಅಗತ್ಯವಾಗಿರುವ ಉಪಯುಕ್ತ ಸಂದೇಶ ನೀಡುತ್ತಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.ಅವರು ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯ ಭಾರತ ಸೇವಾದಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಭಾರತ ಸೇವಾದಳ ಜಿಲ್ಲಾ ಸಮಿತಿ ಶಿರಸಿ ಹಾಗೂ ಭಾರತ ಸೇವಾದಳ ತಾಲೂಕು ಸಮಿತಿ ಆಶ್ರಯದಲ್ಲಿ ಭಾರತ ಸೇವಾದಳದ ಶತಮಾನೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾದ ಮಕ್ಕಳ ಭಾವೈಕ್ಯತಾ ಮೇಳ ಉದ್ಘಾಟಿಸಿ ಮಾತನಾಡಿದರು.ಸೇವಾದಳ ಸಂಸ್ಥಾಪಕ ನಾ.ಸು. ಹರ್ಡೀಕರ್ ಸೇರಿದಂತೆ ಅನೇಕ ಮಹನೀಯರು ಸ್ಥಾಪಿಸಿದ ಸೇವಾದಳದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಭಾವೈಕ್ಯತೆ ಮತ್ತಷ್ಟು ಅಧಿಕಗೊಂಡು, ನಾಡಿನ ಸಮೃದ್ಧಿಗೆ ಕಾರಣವಾಗಲಿ ಎಂದು ಆಶಿಸಿದರು. ಬಿಜೆಪಿ ವಕ್ತಾರ ಹರಿಪ್ರಕಾಶ ಕೋಣೇಮನೆ ಮಾತನಾಡಿ, ದೇಶಭಕ್ತಿ, ಸೇವೆ, ಶಿಸ್ತುಗಳ ಗುರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸೇವಾದಳ ಶತಮಾನ ಪೂರೈಸಿದೆ. ಇದು ಮತ್ತಷ್ಟು ಸುದೀರ್ಘ ಕಾಲ ಅಸ್ತಿತ್ವದಲ್ಲಿದ್ದು, ನಾಡಿನ ಪ್ರಗತಿಗೆ ಕಾರಣವಾಗಲಿ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಣ ಇಲಾಖೆ ಉಪನಿರ್ದೇಶಕ ದಿವಾಕರ ಶೆಟ್ಟಿ, ಸೇವಾದಳದ ಅಚ್ಚುಕಟ್ಟಾದ ಸಂಘಟನೆ ಮಾದರಿ ಸ್ವರೂಪದಲ್ಲಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಮಾಜಿ ಶಾಸಕ ವಿ.ಎಸ್. ಪಾಟೀಲ, ವಿದ್ಯಾರ್ಥಿಗಳಲ್ಲಿ ಅವಶ್ಯವಿರುವ ಶಿಸ್ತು, ಸಂಯಮಗಳನ್ನು ಭಾರತ ಸೇವಾದಳ ಮೂಡಿಸಲಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳದ ತಾಲೂಕಾಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ, ತಾಲೂಕಿನಲ್ಲಿ ಸೇವಾದಳದ ಚಟುವಟಿಕೆ ಪ್ರಾರಂಭವಾಗಿ ೨೮ ವರ್ಷ ಸಂದಿವೆ. ಇದೀಗ ೧೫೩ ಶಾಲೆಗಳಲ್ಲಿ ಸೇವಾದಳ ತನ್ನ ಚಟುವಟಿಕೆ ವಿಸ್ತರಿಸಕೊಂಡಿದೆ. ಇದು ತಾಲೂಕಿನಾದ್ಯಂತ ಪೂರ್ಣಪ್ರಮಾಣದಲ್ಲಿ ಪಸರಿಸಬೇಕೆಂಬುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.ತಾಲೂಕಿನ ೫೦ ಶಾಲೆಗಳ ೭೦೦ ವಿದ್ಯಾರ್ಥಿಗಳು ಮತ್ತು ೧೦೦ ಶಿಕ್ಷಕರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ಕುಂದರಗಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಾದ ಅರ್ಪಿತಾ ನಾಯ್ಕ ಮತ್ತು ಚಿನ್ಮಯ ಶೇಟ್ ಪ್ರದರ್ಶಿಸಿದ ಯಕ್ಷಗಾನ ನೃತ್ಯ ಎಲ್ಲರ ಮೆಚ್ಚುಗೆ ಗಳಿಸಿತು.ಸೇವಾದಳದ ಜಿಲ್ಲಾಧ್ಯಕ್ಷ ವಿ.ಎಸ್. ನಾಯ್ಕ, ಜಿಲ್ಲಾ ಕಾರ್ಯದರ್ಶಿ ಕೆ.ಎಸ್. ಹೊಸ್ಮನಿ, ಕೆಎಂಎಫ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ, ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪ್ರಾ.ಶಾ.ಶಿ. ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಎಚ್. ನಾಯಕ, ದೈ.ಶಿ. ಸಂಘದ ಜಿಲ್ಲಾಧ್ಯಕ್ಷ ನಾರಾಯಣ ನಾಯಕ, ಪ್ರಾ.ಶಾ.ಶಿ. ಸಂಘದ ತಾಲೂಕಾಧ್ಯಕ್ಷ ಆರ್.ಆರ್. ಭಟ್ಟ, ದೈ.ಶಿ. ಸಂಘದ ತಾಲೂಕಾಧ್ಯಕ್ಷ ವಿನೋದ ನಾಯಕ, ಬಿಇಒ ಎನ್.ಆರ್. ಹೆಗಡೆ, ಶಿರಸಿಯ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎಂ.ಎಸ್. ಹೆಗಡೆ, ಭಾರತ ಸೇವಾದಳದ ತಾಲೂಕು ಕಾರ್ಯದರ್ಶಿ ರಾಘವೇಂದ್ರ ಭಟ್ಟ, ತಾಲೂಕು ಸಮಿತಿ ಸದಸ್ಯ ಪ್ರಸನ್ನ ಭಟ್ಟ ವೇದಿಕೆಯಲ್ಲಿದ್ದರು. ಕಾರ್ಯಕ್ರಮದ ಪ್ರಯುಕ್ತ ವಿವಿಧ ಮಾದರಿಯ ವ್ಯಾಯಾಮ ಪ್ರದರ್ಶನ, ಅಭಿನಯ ಗೀತೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.