ಅಮೇರಿಕಾದ ಪ್ರತಿಭೆ ತಾಯ್ನೆಲದಲ್ಲಿ ಭರತನಾಟ್ಯ ರಂಗಪ್ರವೇಶ

| Published : Aug 07 2024, 01:08 AM IST

ಸಾರಾಂಶ

ನಾಟ್ಯಗುರು ಶೀಲಾ ರಾಮನಾಥ್ ಅವರ ಶಿಷ್ಯೆ ಕುಮಾರಿ ಮಾನ್ಯ ಮಹೇಶ್ ಆ.೧೦ ರ ಶನಿವಾರ ಸಂಜೆ ೫ ಗಂಟೆಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಯ‍ಳಂದೂರು

ನಾಟ್ಯಗುರು ಶೀಲಾ ರಾಮನಾಥ್ ಅವರ ಶಿಷ್ಯೆ ಕುಮಾರಿ ಮಾನ್ಯ ಮಹೇಶ್ ಆ.೧೦ ರ ಶನಿವಾರ ಸಂಜೆ ೫ ಗಂಟೆಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.

ಗೌರವ ಅತಿಥಿಗಳಾಗಿ ಅಯೋಧ್ಯಾ ಶ್ರೀ ರಾಮ ವಿಗ್ರಹ ಶಿಲ್ಪಿ ಡಾ.ಅರುಣ್ ಯೋಗಿರಾಜ್ ಮತ್ತು ಸುಪ್ರಸಿದ್ಧ ನಾಟ್ಯಾಚಾರ್ಯ, ದೇಶ ವಿದೇಶಗಳ ಗೌರವ ಪುರಸ್ಕೃತ, ಆಪ್ತಮಿತ್ರ ಚಲನಚಿತ್ರದ ಹೆಸರಾಂತ ನಟ ವಿದ್ವಾನ್ ಶ್ರೀಧರ್ ಜೈನ್ ಅವರು ಆಗಮಿಸಲಿದ್ದಾರೆ. ಬಹುಮುಖ ಪ್ರತಿಭೆಯಾದ ಮಾನ್ಯ ಮಹೇಶ್ ಅಮೇರಿಕಾದಲ್ಲಿ ಹುಟ್ಟಿದ್ದರೂ ಕೂಡ ಕನ್ನಡವನ್ನು ಓದಿ ಬರೆಯಲು ಕಲಿತಿದ್ದು, ಆರು ವರ್ಷದಿಂದಲೇ ಭರತನಾಟ್ಯ ಕಲಿಯಲು ಶುರು ಮಾಡಿ, ೧೨ ವರ್ಷಗಳ ನಿರಂತರ ಪರಿಶ್ರಮದಿಂದ ಪ್ರಸ್ತುತ ತಾಯ್ನಾಡಿನಲ್ಲಿ ರಂಗಪ್ರವೇಶ ಮಾಡಲಿದ್ದಾರೆ. ಇದಲ್ಲದೆ ಅಮೇರಿಕಾದಲ್ಲಿ ನಡೆದ ಬಾಲಿವುಡ್ ನೃತ್ಯ ಪ್ರದರ್ಶನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದು, ಅಮೆರಿಕಾದ ಫ್ರೀಡಂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ, ಶಾಲೆಯಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್, ಅಮೇರಿಕನ್ ಕ್ಯಾನ್ಸರ್ ಸೊಸೈಟಿ, ಅಮೇರಿಕನ್ ರೆಡ್‌ಕ್ರಾಸ್ ಚಾಪ್ಟರ್ಸ್‌ ಸಂಸ್ಥೆಗಳ ಸ್ಥಾಪಕಿ ಮತ್ತು ಅಧ್ಯಕ್ಷೆಯೂ ಆಗಿದ್ದಾರೆ. ಡಿಇಸಿಎ ಬ್ಯುಸಿನೆಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಇದರ ಮೂಲಕ ತಾನು ಓದಿದ ಶಾಲೆಗೆ ಗೌರವ ತಂದು ಕೊಟ್ಟಿದ್ದಾರೆ. ವಾಷಿಂಗ್ಟನ್ ಡಿಸಿ, ಮೇರಿಲ್ಯಾಂಡ್ ಮತ್ತು ವರ್ಜೀನಿಯಾ ಈ ಮೂರು ರಾಜ್ಯಗಳ ಟೀನ್ ಮಿಸ್ ಇಂಡಿಯಾ ಡಿಎವಿ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತಳಾಗಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈಗ ವರ್ಜೀನಿಯ ಕಾಮನ್‌ವೆಲ್ತ್ ಯೂನಿವೆರ್ಸಿಟಿಯ ಪ್ರಿ-ಮೆಡಿಸಿನ್ ಟ್ರ್ಯಾಕ್ ನಲ್ಲಿ ಬಯೋಕೆಮಿಸ್ಟ್ರಿಯನ್ನು ವ್ಯಾಸಂಗ ಮಾಡುವ ಅರ್ಹತೆಯನ್ನು ಪಡೆದಿದ್ದು, ಮುಂದೆ ಕ್ಯಾನ್ಸರ್ ಗುಣಪಡಿಸುವ ವೈದ್ಯೆಯಾಗುವ ಕನಸು ಹೊಂದಿದ್ದಾಳೆ. ಮಾನ್ಯಳ ತಂದೆ ಮಹೇಶ್ ಮಹಾದೇವ ಅವರು ಯಳಂದೂರಿನವರು. ತಮ್ಮ ಎಂಜಿನಿಯರಿಂಗ್ ವಿಧ್ಯಾಭ್ಯಾಸದ ನಂತರ ಅಮೇರಿಕಾದಲ್ಲಿ ಉದ್ಯೋಗ ಪಡೆದು ೨೪ ವರ್ಷಗಳಿಂದ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ. ಕಾವೇರಿ ಕನ್ನಡ ಸಂಘದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಇದರ ಅಧ್ಯಕ್ಷರೂ ಆಗಿದ್ದರು. ಮಾನ್ಯಳ ತಾಯಿ ಭಾಗ್ಯ ಅವರು ಭರತನಾಟ್ಯ ಭಾರತೀಯರ ಸನಾತನ ಸಂಸ್ಕೃತಿ, ಈ ಪುರಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸದುದ್ದೇಶದಿಂದ ತಮ್ಮ ಇಬ್ಬರೂ ಮಕ್ಕಳನ್ನು ಭರತನಾಟ್ಯ ಕಲಾವಿದರನ್ನಾಗಿಸುವ ಕನಸು ಹೊತ್ತು ಕಾರ್ಯಪ್ರವೃತ್ತರಾದರು. ಇದಕ್ಕೆ ಅಮೇರಿಕಾದಲ್ಲಿ ಹೆಚ್ಚಿನ ಉತ್ತೇಜನ ಮತ್ತು ಅವಕಾಶಗಳು ದೊರೆಕಿದ್ದು, ಆ. 10ರಂದು ಮಾನ್ಯ ಭರತನಾಟ್ಯ ರಂಗಪ್ರವೇಶ ಮಾಡಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಬೇಕೆಂದು ಅವರು ಪೋಷಕರು ಮನವಿ ಮಾಡಿದ್ದಾರೆ.