ಭಾರತಿ ಕಲ್ಚರಲ್ ಫೌಂಡೇಶನ್ ಸ್ಥಾಪಿಸುವ ಮೂಲಕ ಕಲಾಸಕ್ತಿ ಹೊಂದಿರುವ ನೂರಾರು ಮಂದಿಗೆ ಕಲೆಯನ್ನು ಧಾರೆ ಎರೆಯುತ್ತಾ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಅವರ ಕಾರ್ಯ ಮೆಚ್ಚು ವಂತದ್ದು. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಕಲೆಯನ್ನು ಮತ್ತಷ್ಟು ಜನರಿಗೆ ಧಾರೆ ಎರೆಯಲಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಭವ್ಯ ಕಲಾ ಪರಂಪರೆ ಹೊಂದಿರುವ ಭರತನಾಟ್ಯ ಕಲೆ ದೇಹಾರೋಗ್ಯಕ್ಕೂ ಉತ್ತಮವಾಗಿದ್ದು, ಪ್ರತಿಯೊಬ್ಬರೂ ಕರಗತ ಮಾಡಿಕೊಳ್ಳುವುದು ಪ್ರಸ್ತುತ ದಿನಗಳಲ್ಲಿ ಅತ್ಯವಶ್ಯಕ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅಭಿಪ್ರಾಯಿಸಿದರು.

ನಗರದ ಕಲಾ ಮಂದಿರದಲ್ಲಿ ಭಾರತಿ ಕಲ್ಚರಲ್ ಫೌಂಡೇಶನ್‌ ವತಿಯಿಂದ ನಡೆದ ಭಾರತಿ ನೃತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಹೆಚ್ಚು ಜನಪ್ರಿಯತೆ ಗಳಿಸಿರುವ ನೃತ್ಯ ಪ್ರಾಕಾರವಾಗಿರುವ ಭರತನಾಟ್ಯ ಕಲೆಯನ್ನು ಕರಗತ ಮಾಡಿಕೊಂಡು ಕಲಾಕ್ಷೇತ್ರದಲ್ಲಿ ತಮ್ಮದೇ ಆದ ಹೆಜ್ಜೆಗುರುತು ಮೂಡಿಸಿರುವ ವಿದುಷಿ ಎಂ.ಎನ್.ಸುಶ್ಮಿತಾ ಅವರು ವಿದ್ಯಾಭ್ಯಾಸದ ಜೊತೆಗೆ ಕಲೆಯನ್ನು ಮೈಗೂಡಿಸಿಕೊಂಡು ಮಕ್ಕಳಿಗೆ ನೃತ್ಯ ಕಲಿಸುತ್ತಿರುವುದನ್ನು ಶ್ಲಾಘಿಸಿದರು. ಭಾರತಿ ಕಲ್ಚರಲ್ ಫೌಂಡೇಶನ್ ಸ್ಥಾಪಿಸುವ ಮೂಲಕ ಕಲಾಸಕ್ತಿ ಹೊಂದಿರುವ ನೂರಾರು ಮಂದಿಗೆ ಕಲೆಯನ್ನು ಧಾರೆ ಎರೆಯುತ್ತಾ ಕಲೆಯನ್ನೇ ಉಸಿರಾಗಿಸಿಕೊಂಡಿರುವ ಅವರ ಕಾರ್ಯ ಮೆಚ್ಚು ವಂತದ್ದು. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆದು ಕಲೆಯನ್ನು ಮತ್ತಷ್ಟು ಜನರಿಗೆ ಧಾರೆ ಎರೆಯಲಿ ಎಂದು ಹಾರೈಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್ ಮಾತನಾಡಿ, ಭರತನಾಟ್ಯವು ವಿಶಿಷ್ಟ ನೃತ್ಯ ಭಂಗಿ, ಭಾವಾಭಿವ್ಯಕ್ತಿ ಹಾಗೂ ಸುಂದರ ಪೋಷಾಕಿನಿಂದ ಕೂಡಿದ ಭಾರತೀಯ ಸಂಸ್ಕೃತಿಯ ಪ್ರಾಚೀನ ಕಲೆಯಾಗಿದೆ ಎಂದು ಪ್ರತಿಪಾದಿಸಿದರು.

ಭರತನಾಟ್ಯ ಶಾಸ್ತ್ರವು ನಾಟಕಕ್ಕೆ ಸಂಬಂಧಿಸಿದ್ದರೂ ನೃತ್ಯ ಮತ್ತು ಸಂಗೀತಕ್ಕೆ ಅಗತ್ಯವಾದ ಮೌಲಿಕ ಹಾಗೂ ಮಹತ್ವದ ಮಾಹಿತಿಗಳನ್ನು ಒಳಗೊಂಡ ಆಧಾರ ಗ್ರಂಥವಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಪ್ರತಿಭೆ ಗುರುತಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಧನಾತ್ಮಕ ಚಿಂತನೆ ಬೆಳೆಸಲು ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ಆಸಕ್ತಿಯಿರುವ ವಿಷಯಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಪೋಷಕರ ಕರ್ತವ್ಯ. ಇತರರಿಗಿಂತ ತಮ್ಮ ಮಕ್ಕಳು ವಿಭಿನ್ನವಾಗಿ ಗುರುತಿಸಿಕೊಳ್ಳಬೇಕೆಂಬ ಇಂದಿನ ಪೋಷಕರ ಆಶಯಕ್ಕೆ ಮಕ್ಕಳ ಆಸಕ್ತಿ ಮತ್ತು ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸುವುದು ಮುಖ್ಯ ಎಂದರು.

ಈ ವೇಳೆ ಸಂತ ಜೋಸೆಫ್ ಶಾಲೆ ನಿವೃತ್ತ ಕನ್ನಡ ಪ್ರಾಧ್ಯಾಪಕಿ ವೆರೋನಿಕಾ ಅವರು ಗುರು ವಂದನೆ ಸ್ವೀಕರಿಸಿದರು. ಸಮಾರಂಭದಲ್ಲಿ ಮೈಸೂರು ನ್ಯಾಯಾಲಯದ ವಕೀಲೆ ಹಾಗೂ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ವಿಸಿ ಫಾರಂನ ಬೇಸಾಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಬಿ.ಯೋಗಾನಂದ, ಭಾರತಿ ಕಲ್ಚರಲ್ ಫೌಂಡೇಶನ್ ಸಂಸ್ಥಾಪಕಿ ಹಾಗೂ ನಾಟ್ಯ ವಿದುಷಿ ಎಂ.ಎನ್.ಸುಶ್ಮಿತಾ ಮತ್ತು ಇಂಟೆಗ್ರಾ ಮೈಕ್ರೋ ಸಿಸ್ಟಮ್‌ನ ಪ್ರಾದೇಶಿಕ ವ್ಯವಹಾರ ವ್ಯವಸ್ಥಾಪಕ ಎಂ.ಜೆ. ಮೋಹನ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಭಾರತಿ ಕಲ್ಚರಲ್ ಫೌಂಡೇಶನ್‌ನ ವಿದ್ಯಾರ್ಥಿನಿಯರು ಭರತನಾಟ್ಯ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.