ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಚನ್ನಪಟ್ಟಣ ಕಲ್ಪಶ್ರೀ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಟ್ರಸ್ಟ್ ನಿಂದ ಆಯೋಜನೆ ಹಾಗೂ ಕೇಂದ್ರ ಸಂಸ್ಕೃತಿ ಇಲಾಖೆ ಹಾಗೂ ನಾಟ್ಯಲಾಯಂ ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ನೃತ್ಯ ಸಮ್ಮೇಳನ ಆಯೋಜಿಸಿತ್ತು.ಎರಡು ದಿನಗಳ ಕಾಲ ಏರ್ಪಡಿಸಿದ್ದ ಈ ಉತ್ಸವದಲ್ಲಿ ಭಾರತಾದ್ಯಂತ 200ಕ್ಕೂ ಅಧಿಕ ನೃತ್ಯ ಕಲಾವಿದರು ಆಗಮಿಸಿ ಭರತನಾಟ್ಯ, ಕುಚಿಪುಡಿ ಹಾಗೂ ಕಥಕ್ ನೃತ್ಯವನ್ನು ಪ್ರದರ್ಶಿಸಿದರು.ಮುಖ್ಯಅತಿಥಿಯಾಗಿ ಆಗಮಿಸಿದ್ದ ಹಿರಿಯ ನೃತ್ಯ ಕಲಾವಿದೆ ಜ್ಯೋತಿ ಹೆಗ್ಡೆ ಮಾತನಾಡಿ, ಕಲ್ಪಶ್ರೀ ಸಂಸ್ಥೆ ಕಳೆದ 10 ವರ್ಷಗಳಿಂದ ಮೈಸೂರಿನಲ್ಲಿ ನೃತ್ಯ ಸಮ್ಮೇಳನವನ್ನು ಆಯೋಜಿಸುತ್ತಾ ಬಂದಿರುವುದು ಸಂತಸದ ಸಂಗತಿ. ದೇಶದ ಎಲ್ಲ ಭಾಗದ ನೃತ್ಯ ಕಲಾವಿದರನ್ನು ಒಂದೆಡೆ ಕಲೆ ಹಾಕಿ ಅವರ ನೃತ್ಯದ ಸೊಬಗನ್ನು ಇಡೀ ಮೈಸೂರು ಜನತೆಗೆ ಉಣಬಡಿಸಿದ್ದಾರೆ. ಇವರ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ತಿಳಿಸಿದರು.ಮುಖ್ಯಅತಿಥಿಯಾಗಿ ಸಮಾಜ ಸೇವಕ ಕಿಶೋರ್ ರೆಡ್ಡಿ ಮಾತನಾಡಿ, ಕಲ್ಪಶ್ರೀ ಸಂಸ್ಥೆ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದೆ. ಇವರು ಆಯೋಜನೆ ಮಾಡುವ ನೃತ್ಯ ಉತ್ಸವಗಳು ಜನಪ್ರಿಯವಾಗಿದೆ. ಸಾವಿರಾರು ಯುವ ನೃತ್ಯ ಕಲಾವಿದರಿಗೆ ತಮ್ಮ ಕಲೆ ಪ್ರದರ್ಶನ ನೀಡಿ ಅವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಿದೆ ಎಂದರು.ನಗರದ ಸಂಗೀತ ಶಿಕ್ಷಕಿ, ಸುಮಾ ಹರಿನಾಥ್ ಮಾತನಾಡಿ, ಎಲ್ಲ ನೃತ್ಯ ಕಲಾವಿದರು ಬಹಳ ಸೊಗಸಾಗಿ ನೃತ್ಯ ಪ್ರದರ್ಶನ ಪ್ರದರ್ಶಿಸಿದ್ದಾರೆ. ಅವರಿಗೆ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದರು.ಕಾರ್ಯಕ್ರಮವನ್ನು ಕಲ್ಪಶ್ರೀ ನೃತ್ಯ ಸಂಸ್ಥೆ ಕಾರ್ಯದರ್ಶಿ ಎಂ.ಸಿ. ಸುಜೇಂದ್ರ ಬಾಬು ಆಯೋಜಿಸಿದ್ದರು.