ಸಾರಾಂಶ
ಕಲೆ, ಜ್ಞಾನ, ಶಿಲ್ಪ, ವಿದ್ಯೆ, ಯೋಗ, ಕರ್ಮ ಮುಂತಾಗಿ ಸರ್ವ ವ್ಯಾಪಾರವೂ ಒಳಗೊಂಡಿರುವ ನಾಟ್ಯಶಾಸ್ತ್ರವು ತಾತ್ವಿಕವಾಗಿಯೂ ಭಾರತೀಯರ ಸಾಂಸ್ಕೃತಿಕ ಸಂಪದ್ಭರಿತ ಮಾಧ್ಯಮವಾಗಿದೆ ಎಂದು ಪತ್ರಕರ್ತ ಅಶೋಕ ಹಾಸ್ಯಗಾರ ಹೇಳಿದರು.
ಶಿರಸಿ: ಭಾರತೀಯ ಪ್ರದರ್ಶನ ಕಲೆಗಳಿಗೆ, ಭರತನ ನಾಟ್ಯ ಶಾಸ್ತ್ರವೇ ಆಧಾರವಾದುದಲ್ಲದೇ ಪ್ರಪಂಚದಲ್ಲಿಯೇ ಅತ್ಯಂತ ಪ್ರಾಚೀನ ಕಲಾ ಸಂವಿಧಾನವಾಗಿದೆ ಎಂದು ವಿಶ್ರಾಂತ ಸಂಪಾದಕ ಅಶೋಕ ಹಾಸ್ಯಗಾರ ಹೇಳಿದರು.
ಅವರು ನಗರದ ಟಿಎಂಎಸ್ ಸಭಾಭವನದಲ್ಲಿ ಅಮೆರಿಕದ ನಾಟ್ಯ ಥಿಯೇಟರ್ ಸಂಸ್ಥಾಪಕರಾದ ವಿದುಷಿ ಹೇಮಾ ರಾಜಗೋಪಾಲನ್ ಮತ್ತು ವಿದುಷಿ ಕೃತಿಕಾ ರಾಜಗೋಪಾಲನ್ ಶಿಷ್ಯೆ ಹಾಗೂ ಶಿರಸಿಯ ಆರ್.ಎಸ್. ಭಟ್ ಚಿತ್ರಗಿ ಮತ್ತು ಸೀತಾ ದಂಪತಿ ಮೊಮ್ಮಗಳು ಪೂರ್ಣಾ ಭಟ್ ಅವರ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲೆ, ಜ್ಞಾನ, ಶಿಲ್ಪ, ವಿದ್ಯೆ, ಯೋಗ, ಕರ್ಮ ಮುಂತಾಗಿ ಸರ್ವ ವ್ಯಾಪಾರವೂ ಒಳಗೊಂಡಿರುವ ನಾಟ್ಯಶಾಸ್ತ್ರವು ತಾತ್ವಿಕವಾಗಿಯೂ ಭಾರತೀಯರ ಸಾಂಸ್ಕೃತಿಕ ಸಂಪದ್ಭರಿತ ಮಾಧ್ಯಮವಾಗಿದೆ. ಭಾರತೀಯರಿಗೆ ಕಲಾಪ್ರಕಾರಗಳೆಲ್ಲವೂ ಪಾವಿತ್ರಿಕವೂ ದೈವಿಕವೂ ಆಗಿರುವುದಕ್ಕೆ ಇದೇ ಕಾರಣವಾಗಿದೆ ಎಂದರು. ಭರತನಾಟ್ಯವು ನೃತ್ಯ, ನೃತ್ಯ ಹಾಗೂ ನಾಟ್ಯ ಈ ಮೂರು ಪ್ರಕಾರಗೊಳನ್ನೊಳಗೊಂಡ ಪರಿಪೂರ್ಣ ಕಲೆಯಾಗಿದೆ. ಇದನ್ನು ಶೈಕ್ಷಣಿಕ ಪಠ್ಯದಲ್ಲಿಯೇ ಅಳವಡಿಸುವುದು ಅವಶ್ಯಕವೆಂದು ಅಭಿಪ್ರಾಯಪಟ್ಟರು.ಅಭ್ಯಾಗತರಾಗಿ ಆಗಮಿಸಿದ್ದ ಪತ್ರಕರ್ತ ನಾಗರಾಜ ಮತ್ತಿಗಾರ ಮಾತನಾಡಿ, ಮನುಷ್ಯನ ಬದುಕೇ ಕಲಾತ್ಮಕವಾದದ್ದು, ಕಲೆಯು ಮನುಷ್ಯನನ್ನು ಸುಸಂಸ್ಕೃತನನ್ನಾಗಿ ಮಾಡುತ್ತದೆ, ಅಲ್ಲದೇ ಬೇರೆಲ್ಲ ಪ್ರಾಣಿಗಳಿಗಿಂತ ಭಿನ್ನನಾಗಿ ಗುರುತಿಸಿಕೊಳ್ಳಲು ಕಲೆಯು ಕಾರಣವಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಶಂಭು ಭಟ್ಟ ಮಾತನಾಡಿ, ಪೂರ್ಣಾ ಭಟ್ಟ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಭಾರತೀಯ ಕಲೆಯನ್ನು ಅಮೆರಿಕದಲ್ಲಿ ಕಲಿತು ವಿಶ್ವ ಮಟ್ಟಕ್ಕೊಯ್ಯಲು ಪ್ರಯತ್ನಿಸುವುದು ಶ್ಲಾಘನೀಯ ಎಂದರು. ಪೂರ್ಣಾ ಭಟ್ ಅವರ ತಾಯಿ ಸುವರ್ಣಾ ಭಟ್ಟ ಉಪಸ್ಥಿತರಿದ್ದರು.ಆಮೇಲೆ ಸುವರ್ಣಾ ಅವರು ಸ್ವರ, ಲಯಮ್, ತ್ರಿಪುರ ಸುಂದರಿ, ದಶಾವತಾರಮ್, ಅಭಯಂಕರಮ್ ಹಾಗೂ ಕೊನೆಯಲ್ಲಿ ಶಂಭೋ ಹರ ಹರ ಶಂಭೋ ನಾಟ್ಯವನ್ನು ಪ್ರಸ್ತುತ ಪಡಿಸಿದರು. ತಂಜಾವೂರು ಶೈಲಿಯ ಈ ನಾಟ್ಯವು ಸಹೃದಯರ ಮನಸೊರೆಗೊಂಡಿತು.
ಈ ಮಧ್ಯೆ ಪೃಥ್ವಿ ಹೆಗಡೆ ಬೊಮ್ನಳ್ಳಿ ಅವರ ಗಾನಸುಧೆ ಗಮನ ಸೆಳೆಯಿತು. ವಿದುಷಿ ರೇಖಾ ದಿನೇಶ್ ಅವರ ಶಿಷ್ಯೆಯಾಗಿರುವ ಇವರು ದಾಸರ ಪದ, ಮರಾಠಿ ಅಭಂಗಗಳ ಮೂಲಕ ಭರವಸೆಯ ಗಾಯಕಿಯಾಗಿ ತೋರಿಸಿಕೊಂಡರು. ಇವರಿಗೆ ಹಾರ್ಮೋನಿಯಂನಲ್ಲಿ ಅಂಜನಾ ಹೆಗಡೆ ಶಿರಸಿ, ತಬಲಾದಲ್ಲಿ ವಿಜಯೇಂದ್ರ ಹೆಗಡೆ ಅಜ್ಜೀಬಳ ಸಾಥ್ ನೀಡಿದರು. ಗಿರಿಧರ ಕಬ್ನಳ್ಳಿ ಕಾರ‍್ಯಕ್ರಮ ನಿರೂಪಿಸಿ, ವಂದಿಸಿದರು.