ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಮೇಶ ಕೋಳಿವಾಡ ಮಾತನಾಡಿ, ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾದ ತಾಲೂಕಿನ ಮಾಗಡಿ ಕೆರೆ ಸಧ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಶಿರಹಟ್ಟಿ: ಉತ್ತರ ಕರ್ನಾಟಕದ ವಿದೇಶಿ ಹಕ್ಕಿಗಳ ತಾಣ, ತಾಲೂಕಿನ ಪಕ್ಷಿ ಸಂರಕ್ಷಣೆಯ ಖ್ಯಾತಿಯ ಮಾಗಡಿ ಕೆರೆಯು ರಾಮ್ಸರ್‌ವೆಟ್‌ಲ್ಯಾಂಡ್ ಸೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದರೂ ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ. ಕೂಡಲೇ ವಿದೇಶಿ ಹಕ್ಕಿಗಳ ತಾಣ ಮಾಗಡಿ ಕೆರೆ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಂಗನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ರಮೇಶ ಕೋಳಿವಾಡ ಮಾತನಾಡಿ, ಜೀವ ವೈವಿಧ್ಯತೆಯ ಶ್ರೀಮಂತಿಕೆಗೆ ಸಾಕ್ಷಿಯಾದ ತಾಲೂಕಿನ ಮಾಗಡಿ ಕೆರೆ ಸಧ್ಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ೧೩೪.೧೫ ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಗೆ ಪ್ರತಿವರ್ಷ ಚಳಿಗಾಲದಲ್ಲಿ ದೂರದ ಕಾಶ್ಮೀರ, ಟಿಬೆಟ್, ಮಲೇಶಿಯಾ, ಶ್ರೀಲಂಕಾ ಸೇರಿದಂತೆ ವಿವಿಧ ದೇಶಗಳಿಂದ ೧೩೦ಕ್ಕೂ ಹೆಚ್ಚು ಜಾತಿಯ ಪಕ್ಷಿಗಳು ವಲಸೆ ಬರುತ್ತಿದ್ದು, ಪಕ್ಷಿಗಳಿಗೆ ಇಲ್ಲಿ ರಕ್ಷಣೆ ಇಲ್ಲದಂತಾಗಿದೆ ಎಂದು ದೂರಿದರು.ಈ ಹಿಂದೆ ಕೋಟಿಗಟ್ಟಲೆ ಅನುದಾನ ಖರ್ಚು ಮಾಡಿ ಸಂರಕ್ಷಿತ ಕೆರೆ ಎಂದು ಗುರುತಿಸಿ ಕೆರೆಯ ಸುತ್ತ ಫೇವರ್ಸ್, ಗ್ರಿಲ್‌ಗಳನ್ನು ಅಳವಡಿಸಲಾಗಿದೆ. ಆದರೆ ಈಗ ಅರಣ್ಯ ಇಲಾಖೆಯಿಂದಾಗಲಿ, ಮಾಗಡಿ ಗ್ರಾಮ ಪಂಚಾಯಿತಿಯಿಂದಾಗಲಿ ಸರಿಯಾದ ನಿರ್ವಹಣೆ ಇಲ್ಲದೇ ಇರುವುದರಿಂದ ಕೆರೆಯ ಸುತ್ತ ಗಿಡಗಂಟಿಗಳು ಬೆಳೆದು ಎಲ್ಲೆಂದರಲ್ಲಿ ಗಲೀಜು ಮನೆ ಮಾಡಿದೆ. ಸ್ವಚ್ಛತೆಯ ನಿರ್ವಹಣೆಗೆ ಯಾರೊಬ್ಬರೂ ಗಮನ ಹರಿಸದೇ ಇರುವುದು ಬೇಸರದ ಸಂಗತಿಯಾಗಿದೆ. ವಿದೇಶಗಳಿಂದ ಬರುವ ಪಕ್ಷಿಗಳ ಜೀವ ರಕ್ಷಣೆಗೆ ಸೂಕ್ತ ಪ್ರದೇಶವಲ್ಲ ಎನ್ನುವ ಸ್ಥಿತಿ ಕಂಡುಬರುತ್ತಿದೆ ಎಂದರು.ಜಿಲ್ಲಾಧಿಕಾರಿಗಳು ಮಾಗಡಿ ಕೆರೆಗೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲನೆ ನಡೆಸಿ ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಪಕ್ಷಿಪ್ರಿಯರು ಮತ್ತು ಸ್ಥಳೀಯ ನಾಗರಿಕರ ಪರವಾಗಿ ಭಾರತೀಯ ಕಿಸಾನ್ ಸಂಘದ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದು, ಕಳೆದ ವರ್ಷ ಜನವರಿ ತಿಂಗಳಲ್ಲಿಯೂ ಲಿಖಿತ ಮನವಿ ಸಲ್ಲಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಆಸಕ್ತಿ ತೋರದೇ ಇರುವುದು ಬೇಸರದ ಸಂಗತಿಯಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಮನವಿ ಸಲ್ಲಿಸಲಾಯಿತು. ಈ ವೇಳೆ ಸಂಕನಗೌಡ್ರ ಜಗದೀಶಗೌಡ್ರ, ಉಮೇಶಗೌಡ ಪಾಟೀಲ, ಹನಮಂತ ಹಡಗಲಿ, ಲಕ್ಷ್ಮಪ್ಪ ಜಾಲಿಹಾಳ, ಮುತ್ತು ಯಲಿಗಾರ, ರಾಮನಗೌಡ್ರ ಪಾಟೀಲ, ಜಗದೀಶ ಸಂಕನಗೌಡ್ರ ಸೇರಿದಂತೆ ಇತರರು ಇದ್ದರು.
ಹೆದ್ದಾರಿ ತಡೆದು ಹೋರಾಟ: ಎಚ್ಚರಿಕೆಭಾರತೀಯ ಕಿಸಾನ್ ಸಂಘದ ವತಿಯಿಂದ ಸಲ್ಲಿಸಿದ ಮನವಿಗೆ ಸ್ಪಂದಿಸದೇ ಇದ್ದಲ್ಲಿ 15 ದಿನಗಳ ನಂತರ ಮಾಗಡಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದು, ಅದಕ್ಕೆ ಅವಕಾಶ ಮಾಡಿಕೊಡದೇ ಕೆರೆಗೆ ಭೇಟಿ ನೀಡಿ ಕೆರೆಯ ಅಭಿವೃದ್ಧಿ ಕುರಿತು ಸಂಬಂಧಿಸಿದ ಇಲಾಖೆಗಳಿಗೆ ಸೂಚನೆ ನೀಡಿ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.