ರೈತರ ಕಷ್ಟ, ಸಮಸ್ಯೆಯನ್ನು ಅರಿಯಬೇಕಾದರೆ ಕಿಸಾನ್ ಸಂಘವನ್ನು ಪ್ರತಿ ಗ್ರಾಮದಲ್ಲಿ ಸ್ಥಾಪಿಸಬೇಕು. ಜೊತೆಗೆ ಸಂಘ ಮತ್ತು ಗ್ರಾಮವನ್ನು ಬಲಗೊಳಿಸಬೇಕು.
ಕನ್ನಡಪ್ರಭ ವಾರ್ತೆ ಯಲ್ಲಾಪುರ
ರೈತರ ಕಷ್ಟ, ಸಮಸ್ಯೆಯನ್ನು ಅರಿಯಬೇಕಾದರೆ ಕಿಸಾನ್ ಸಂಘವನ್ನು ಪ್ರತಿ ಗ್ರಾಮದಲ್ಲಿ ಸ್ಥಾಪಿಸಬೇಕು. ಜೊತೆಗೆ ಸಂಘ ಮತ್ತು ಗ್ರಾಮವನ್ನು ಬಲಗೊಳಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ದಿನೇಶ ಕುಲಕರ್ಣಿ ಹೇಳಿದರು.ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆನೆರಾ ಫೆಬ್ರಿಕೇಟರ್ಸ್ ಸಭಾಂಗಣದಲ್ಲಿ ಭಾ.ಕಿ.ಸಂಘ ಜಿಲ್ಲಾ ಸಮಿತಿಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಜಿಲ್ಲೆಯಲ್ಲಿ ಕಿಸಾನ್ ಸಂಘದ ಚಟುವಟಿಕೆಗಳ ಬಗ್ಗೆ ಅವಲೋಕನ ನಡೆಸಿದ ಅವರು, ಗ್ರಾಮ ಸಮಿತಿಗಳನ್ನು ಹೆಚ್ಚೆಚ್ಚು ಮಾಡಿ, ಬಲಗೊಳಿಸಬೇಕು. ಪ್ರತಿಯೊಬ್ಬ ಪದಾಧಿಕಾರಿಯೂ ರೈತರ ಸಮಸ್ಯೆಗಳಾದ ವಿದ್ಯುತ್, ಸಾವಯವ, ಕಂದಾಯ, ಪರ್ಯಾವರಣ, ಹೋರಾಟ ಹೀಗೆ ವಿವಿಧ ಆಯಾಮಗಳ ಜವಾಬ್ದಾರಿ ನಿರ್ವಹಿಸಿದಾಗ ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಕಿಸಾನ್ ಮಿಲನ್‌ಗಳ ಮೂಲಕ ಪದೇ ಪದೇ ಸಭೆ ಸೇರಿ ಸಮಸ್ಯೆಗಳ ಬಗ್ಗೆ ಅವಲೋಕಿಸಬೇಕು ಎಂದು ತಿಳಿಸಿದರು.ಸಂಘಟನೆ ತಳಮಟ್ಟದಿಂದ ಗಟ್ಟಿಗೊಳ್ಳಬೇಕು. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಮ್ಮ ಕಾರ್ಯಯೋಜನೆ ರೂಪುಗೊಳ್ಳಬೇಕು. ಜಿಲ್ಲೆಯ ಪ್ರಾಕೃತಿಕ ಸಂಪತ್ತು ಉಳಿಸುವದಕ್ಕೂ ಬೆಳೆಸುವದಕ್ಕೂ ಪ್ರಯತ್ನಗಳು ನಡೆಯಲಿ. ದೇಶಾದ್ಯಂತ ಸಂಘಟನೆ ಬಲಪಡಿಸಲು ಕೈಗೊಳ್ಳಬೇಕಾದ ಸಂಗತಿಗಳ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಸಮಿತಿಯ ಮತ್ತು ವಿವಿಧ ತಾಲೂಕು ಸಮಿತಿಗಳಿಂದ ಬಂದಿದ್ದ ಪದಾಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಜಿಲ್ಲಾಧ್ಯಕ್ಷ ಶಿವರಾಮ ಗಾಂವ್ಕಾರ್ ಕನಕನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಉತ್ತರ ಪ್ರಾಂತ ಅಧ್ಯಕ್ಷ ವಿವೇಕ ಮೋರೆ, ಪ್ರಾಂತ ಸಂಘಟನಾ ಕಾರ್ಯದರ್ಶಿ ಪುಟ್ಟಸ್ವಾಮಿ, ಪ್ರದೇಶ ಕಾರ್ಯಕಾರಿಣಿ ಸದಸ್ಯ ಬಾ.ನಾ.ಮಾಧವ ಹೆಗಡೆ, ಪ್ರಾಂತ ಯುವ ಪ್ರಮುಖ ಸುನೀಲ್ ಬಂಕಾಪುರ ಉಪಸ್ಥಿತರಿದ್ದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಸ್ವಾಗತಿಸಿದರು. ಪ್ರಾಂತ ಪ್ರಧಾನ ಕಾರ್ಯದರ್ಶಿ ಜಗದೀಶ ಸಂಕನಗೌಡರ್ ಪ್ರಸ್ತಾವಿಕಗೈದರು. ಜಿಲ್ಲಾ ಕೋಶಾಧ್ಯಕ್ಷ ಗೋಪಾಲಕೃಷ್ಣ ರಾ ಭಟ್ಟ ಉಪಳೇಶ್ವರ ವಂದಿಸಿದರು. ಜಿಲ್ಲಾ, ತಾಲೂಕು ಪದಾಧಿಕಾರಿಗಳು ಉಪಸ್ಥಿತರಿದ್ದರು.