ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಅಕಾಲಿಕ ಮರಣದಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಕ್ಕೆ ಪ್ರಥಮ ಬಾರಿಗೆ ಸ್ಪರ್ಧಿಸಿರುವ ಕಾಂಗ್ರೆಸ್ ಕಟ್ಟಾಳು, ದಿ.ರಾಜಾ ವೆಂಕಟಪ್ಪ ನಾಯಕ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಶುಕ್ರವಾರ ಬೃಹತ್ ರೋಡ್ ಶೋ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು.ತಹಸೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುವುದರೊಂದಿಗೆ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಶಕ್ತಿ ಪ್ರದರ್ಶನ ನಡೆಸಿದೆ. ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ನೇತೃತ್ವದಲ್ಲಿ ನಡೆದ ಬೃಹತ್ ಶಕ್ತಿ ಪ್ರದರ್ಶನದಲ್ಲಿ ರಾಯಚೂರು ಲೋಕಸಭಾ ಅಭ್ಯರ್ಥಿ ಜಿ.ಕುಮಾರನಾಯಕ ಸೇರಿದಂತೆ ಸ್ಥಳೀಯ ಎಲ್ಲ ಮುಖಂಡರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಕಚೇರಿ ವಸಂತ ಮಹಲ್‌ನಿಂದ ಸೈನಿಕ ದಿ.ಶರಣಬಸಪ್ಪ ಕೆಂಗೇರಿ ವೃತ್ತದವರೆಗೂ ನಡೆದ ಬೃಹತ್ ರ‍್ಯಾಲಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾವಣೆಗೊಂಡಿದ್ದ ಕಾರ್ಯಕರ್ತರೊಂದಿಗೆ ವೇಣುಗೋಪಾಲ ಆಗಮಿಸಿದರು.ತೆರದ ವಾಹನದಲ್ಲಿ ರೋಡ್ ಶೋ ನಡೆಯಿತು. ಅಪಾರ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳಿಂದ ಜಯಘೋಷ, ಕೇಕೆ, ಸಿಳ್ಳೆಯೊಂದಿಗೆ ಮೆರವಣಿಗೆ ಕಳೆಕಟ್ಟಿತ್ತು. ಇದಕ್ಕೂ ಮೊದಲು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಶಾಸಕರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಈ ಭಾಗದ ಜನತೆ ಅವರ ಋಣ ತೀರಿಸಲು ಉಪಚುನಾವಣೆಯಲ್ಲಿ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕರಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು. ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ ನಾಯಕ ಮಾತನಾಡಿ, ನಮ್ಮ ತಂದೆ ರಾಜಾ ವೆಂಕಟಪ್ಪ ನಾಯಕರ ನಿಧನದ ನೋವು ಮನದಲ್ಲಿದೆ. ಜನರ ಪ್ರೀತಿ, ವಿಶ್ವಾಸದಿಂದ ಮತ್ತು ತಂದೆಯ ಆಶೀರ್ವಾದದಿಂದ ನಾನು ನಿಮಗಾಗಿ ದುಡಿಯುತ್ತೇನೆ. ತಂದೆಯವರ ಅನೇಕ ಕನಸುಗಳು ಬಾಕಿ ಉಳಿದಿದ್ದು, ಅದನ್ನು ನನಸಾಗಿಸಲು ಈ ಬಾರಿ ನನಗೆ ಆಶೀರ್ವದಿಸಬೇಕು ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಶರಣಬಸಪ್ಪ ದರ್ಶನಾಪುರ ಅವರ ನೇತೃತ್ವದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿ ರಾಜ್ಯದಲ್ಲಿ ಸುಭದ್ರ ಆಡಳಿತ ನೀಡುತ್ತಿದೆ. ಬೇಸಿಗೆಯಲ್ಲಿ ಬೆಳೆಗೆ ನೀರು ಬಿಟ್ಟಿಲ್ಲ ಎನ್ನವುದಕ್ಕೆ ಗೆಲುವಿನ ಉತ್ತರ ನೀಡುತ್ತೇನೆ ಎಂದರು. ಈ ವೇಳೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ರಾಯಚೂರು ಲೋಕಸಭಾ ಅಭ್ಯರ್ಥಿ ಜಿ.ಕುಮಾರ್ ನಾಯಕ, ಮರಿಗೌಡ ಹುಲಿಕಲ್, ವೀಣಾ ಹಿರೇಮಠ್, ಮರಿಲಿಂಗಪ್ಪ ಕರ್ನಾಳ, ನಿಂಗರಾಜ್ ಬಾಚಿಮಟ್ಟಿ ಸೇರಿದಂತೆ ಇತರರು ಮಾತನಾಡಿದರು. ಸುರಪುರ ಸಂಸ್ಥಾನದ ಅರಸ ರಾಜಾ ಕೃಷ್ಣಪ್ಪ ನಾಯಕ, ರಾಜಶೇಖರ ಗೌಡ ವಜ್ಜಲ್, ಚಂದ್ರಶೇಖರ್ ದಂಡಿನ, ಭೀಮರಾಯ ಮೂಲಿಮನಿ, ರಾಜಾ ಕುಮಾರ ನಾಯಕ, ರಾಜಾ ಸಂತೋಷ್ ನಾಯಕ ರವಿಚಂದ್ರ ಹುದ್ದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಉಪಚುನಾವಣೆಯನ್ನು ನಾವು ನಿರೀಕ್ಷಿಸಿರಲಿಲ್ಲಅನಿವಾರ್ಯವಾಗಿ ಉಪಚುನಾವಣೆ ಎದುರುಸುವ ಪರಿಸ್ಥಿತಿ ಎದುರಾಗಿದೆ. ರಾಜಾ ವೆಂಕಟಪ್ಪ ನಾಯಕ ಅವರು ಕಾಂಗ್ರೆಸ್ ಪಕ್ಷದ ಶಕ್ತಿಯಾಗಿದ್ದರು. ಈ ಭಾಗದಲ್ಲಿ ಅವರ ಆಡಳಿತ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಮುಂದಿನ ದಿನಗಳಲ್ಲಿ ಅವರ ಸುಪುತ್ರ ವೇಣುಗೋಪಾಲ್ ನಾಯಕ ನಿಮ್ಮ ಭರವಸೆಯನ್ನು ಉಳಿಸಿಕೊಳ್ಳುತ್ತಾರೆ. ಬಿಜೆಪಿಗರ ಪೊಳ್ಳು ಭರವಸೆಗಳಿಗೆ ಸುಳ್ಳು ಮಾತುಗಳಿಗೆ ಬಲಿಯಾಗದೆ ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮನವಿ ಮಾಡಿದರು.
ವಿಜೃಂಭಿಸಿದ ರಾಜಾ ವೆಂಕಟಪ್ಪ ನಾಯಕ ಭಾವಚಿತ್ರನಗರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ರ‍್ಯಾಲಿಯಲ್ಲಿ ದಿ.ರಾಜಾ ವೆಂಕಟಪ್ಪ ನಾಯಕರ ಭಾವಚಿತ್ರ ಹಿಡಿದು ಕಾರ್ಯಕರ್ತರು ಪಾಲ್ಗೊಂಡಿದ್ದರು. ಮೆರವಣಿಗೆ ಉದ್ದಕ್ಕೂ ರಾಜಾ ವೆಂಕಟಪ್ಪ ನಾಯಕ ಭಾವಚಿತ್ರಗಳನ್ನ ಹಿಡಿದು ಕಾರ್ಯಕರ್ತರು ಅಭಿಮಾನ ಮೆರೆದರು.