ಸಾರಾಂಶ
ಭಟ್ಕಳ: ಇಲ್ಲಿನ ಜನತಾ ಪತ್ತಿನ ಸಹಕಾರಿ ಸೊಸೈಟಿಗೆ ₹3.07 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಈ ಸಲ ಷೇರುದಾರ ಸದಸ್ಯರಿಗೆ ಶೇ. ೧೦ರಷ್ಟು ಲಾಭಾಂಶ ಹಂಚಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ತಿಳಿಸಿದರು.ಸಂಘದ ೩೯ನೇ ವಾರ್ಷಿಕ ಮಹಾಸಭೆಯಲ್ಲಿ ಷೇರುದಾರರನ್ನುದ್ದೇಶಿಸಿ ಮಾತನಾಡಿ, ಸಂಘದಲ್ಲಿ ಠೇವುಗಳು ₹೧೮೬ ಕೋಟಿ ಇದ್ದು, ಇವುಗಳಲ್ಲಿ ಏರಿಕೆ ಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಒಟ್ಟೂ ಸದಸ್ಯರ ಸಂಖ್ಯೆ ೩೨೮೭೬ ಇದೆ. ಸಂಘದ ಷೇರು ಬಂಡವಾಳ ₹೧೧.೩೦ ಕೋಟಿಯಷ್ಟಿದೆ. ಸಂಘದ ಸದಸ್ಯರಿಂದ ₹೨೨೪ ಕೋಟಿ ಸಾಲ ಬರಬೇಕಿದೆ.
ಸಾಲದ ವ್ಯವಹಾರದಲ್ಲಿ ಶೇ. ೧೨.೭೮ರಷ್ಟು ವೃದ್ಧಿಯಾಗಿದೆ. ಸಂಘದ ಒಟ್ಟೂ ವ್ಯವಹಾರ ₹೫೦೦ ಕೋಟಿಯಷ್ಟಿದೆ. ಸಂಘ ಈ ಪ್ರಮಾಣದಲ್ಲಿ ಲಾಭ ಗಳಿಸಲು ಸದಸ್ಯರ ಮತ್ತು ಠೇವುದಾರರ ಪ್ರೋತ್ಸಾಹ ಹಾಗೂ ನಮ್ಮ ಸಂಘದ ಮೇಲಿರುವ ದೃಢ ವಿಶ್ವಾಸವೇ ಕಾರಣವಾಗಿದೆ ಎಂದರು.ಬ್ಯಾಂಕಿನ ಉಪಾಧ್ಯಕ್ಷ ಪರಮೇಶ್ವರ ದೇವಾಡಿಗ, ನಿರ್ದೇಶಕರಾದ ನಾಗಪ್ಪ ನಾಯ್ಕ, ಕೃಷ್ಣಾ ನಾಯ್ಕ, ಕೃಷ್ಣಾನಂದ ಪೈ, ಪರಮೇಶ್ವರ ನಾಯ್ಕ, ವೆಂಕಟ್ರಮಣ ಮೊಗೇರ, ತಿಮ್ಮಪ್ಪ ನಾಯ್ಕ, ರಾಮಚಂದ್ರ ಕಿಣಿ, ಗೊಯ್ದಗೊಂಡ, ಅಲ್ಬರ್ಟ್ ಡಿಕೋಸ್ತಾ, ಲಕ್ಷ್ಮೀ ಮಾದೇವ ನಾಯ್ಕ ಉಪಸ್ಥಿತರಿದ್ದರು. ಪ್ರಭಾರ ಪ್ರಧಾನ ವ್ಯವಸ್ಥಾಪಕ ನಾಗೇಶ ದೇವಡಿಗ ವರದಿ ಮಂಡಿಸಿ, ವಂದಿಸಿದರು. ಮಂಕಿ ಶಾಖೆಯ ವ್ಯವಸ್ಥಾಪಕ ಮಂಜುನಾಥ ಮೊಗೇರ ನಿರೂಪಿಸಿದರು.ಮಲೆನಾಡು ಅಭಿವೃದ್ಧಿ ಸೇವಾ ಸಹಕಾರ ಸಂಘಕ್ಕೆ ₹47.85 ಲಕ್ಷ ಲಾಭ
ಯಲ್ಲಾಪುರ: ಯಲ್ಲಾಪುರದ ಕೃಷಿಕರ ಜೀವನಾಡಿಯಾಗಿರುವ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘವು ಯಶಸ್ವಿಯಾಗಿ ೨೬ ವರ್ಷಗಳನ್ನು ಪೂರ್ಣಗೊಳಿಸಿ, ೨೭ನೇ ವರ್ಷಕ್ಕೆ ಕಾಲಿಟ್ಟಿದೆ. ಸಂಘವು ಮಾರ್ಚ್ ಅಂತ್ಯಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ₹೪೭,೮೫,೪೪೦ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಎಂ.ಆರ್. ಹೆಗಡೆ ಕುಂಬ್ರಿಗುಡ್ಡೆ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಸಂಘದ ಈ ಅಪೂರ್ವ ಬೆಳವಣಿಗೆಗೆ ಗ್ರಾಹಕ ರೈತರ ಸಂಪೂರ್ಣ ಸಹಕಾರ ಮತ್ತು ಸಂಘದ ಸಿಬ್ಬಂದಿಯ ಪ್ರಾಮಾಣಿಕ ಕಾರ್ಯತತ್ಪರತೆ ಕಾರಣವಾಗಿದೆ ಎಂದರು.ಸೆ. ೧೩ರಂದು ಮಧ್ಯಾಹ್ನ ೩.೩೦ಕ್ಕೆ ಪಟ್ಟಣದ ಅಡಿಕೆ ಭವನದಲ್ಲಿ ೨೦೨೩- ೨೪ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ೧೪ ಯುವ ಪ್ರತಿಭಾವಂತ ಕೃಷಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಸಂಘವು ಒಟ್ಟೂ ೧೦೯೯ ಸದಸ್ಯರನ್ನು ಹೊಂದಿದ್ದು,₹ ೬,೨೮,೦೦೦ ಷೇರು ಬಂಡವಾಳವನ್ನು ಹೊಂದಿದೆ. ಕಳೆದ ಬಾರಿ ಸಂಘದಲ್ಲಿ ₹೬,೭೬,೮೩,೫೬೫ ವಿಕ್ರಿ ನಡೆಸಲಾಗಿದ್ದು, ₹೫,೯೦,೫೭,೧೭೧ ಖರೀದಿ ಮಾಡಲಾಗಿದೆ. ಆಡಿಟ್ ವರ್ಗೀಕರಣದಲ್ಲಿ ಅ ವರ್ಗವನ್ನು ಪಡೆದಿದೆ ಎಂದರು.
ಸಂಘದ ಉಪಾಧ್ಯಕ್ಷ ಎಂ.ಜಿ. ಭಟ್ಟ ಶೀಗೇಪಾಲ, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ, ನಿರ್ದೇಶಕರಾದ ಮಧುಕೇಶ್ವರ ಭಟ್ಟ ಕರಡಿಗೆಮನೆ, ದತ್ತಾತ್ರೇಯ ಬೋಳಗುಡ್ಡೆ, ಎಂ.ಆರ್. ಹೆಗಡೆ ತಾರೇಹಳ್ಳಿ ಉಪಸ್ಥಿತರಿದ್ದರು.