ಮುರುಡೇಶ್ವರಕ್ಕೆ ಹರಿದು ಬಂದ ಭಕ್ತಸಾಗರ

| Published : Feb 27 2025, 12:34 AM IST

ಸಾರಾಂಶ

ಬಿಲ್ವಾಅರ್ಚನೆ, ಸರ್ವ ದೇವರ ಪೂಜೆ ಹಾಗೂ ಮಹಾಪೂಜೆ ನೆರವೇರಿಸಲಾಯಿತು.

ಭಟ್ಕಳ: ತಾಲೂಕಿನಾದ್ಯಂತ ಬುಧವಾರ ಶಿವಾಲಯ ಹಾಗೂ ಇನ್ನಿತರ ದೇವಸ್ಥಾನಗಳಲ್ಲಿ ಶ್ರದ್ಧಾಭಕ್ತಿಯಿಂದ ಮಹಾಶಿವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪಂಚ ಶಿವಕ್ಷೇತ್ರಗಳಲ್ಲೊಂದಾದ ಮುರುಡೇಶ್ವರದಲ್ಲಿ ಶಿವರಾತ್ರಿಯ ಪ್ರಯುಕ್ತ ಬುಧವಾರ ಬೆಳಗಿನ ಜಾವದಿಂದ ರಾತ್ರಿವರೆಗೂ ಭಕ್ತಸಾಗರವೇ ಹರಿದು ಬಂದಿದೆ. ಎಲ್ಲರೂ ಮುರುಡೇಶ್ವರ ದೇವರ ದರ್ನನ ಪಡೆದು ಪೂಜೆ ಸಲ್ಲಿಸಿದರು. ಶಿವರಾತ್ರಿಯ ಅಂಗವಾಗಿ ದೇವರಿಗೆ ರುದ್ರಾಭಿಷೇಕ, ಬಿಲ್ವಾಅರ್ಚನೆ, ಸರ್ವ ದೇವರ ಪೂಜೆ ಹಾಗೂ ಮಹಾಪೂಜೆ ನೆರವೇರಿಸಲಾಯಿತು.

ಸಂಜೆ ದೇವರ ಸ್ವರ್ಣ ರಥೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ನೂಕು ನುಗ್ಗಲು ಆಗದಂತೆ ಮತ್ತು ತ್ವರಿತವಾಗಿ ದೇವರ ದರ್ಶನ ಮತ್ತು ಪೂಜೆ ಸಲ್ಲಿಸಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿತ್ತು. ಶಿವರಾತ್ರಿ ಅಂಗವಾಗಿ ಮುರುಡೇಶ್ವರ ದೇವಸ್ಥಾನದಿಂದ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ಶಿವರಾತ್ರಿಯ ಅಂಗವಾಗಿ ಮುರುಡೇಶ್ವರಕ್ಕೆ ಸ್ಥಳೀಯರು ಹಾಗೂ ಪ್ರವಾಸಿಗರ ದಂಡೇ ಹರಿದು ಬಂದಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ಸಂಜೆ ಮುರುಡೇಶ್ವರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನೇತೃತ್ವದಲ್ಲಿ ಜಿಲ್ಲಾಡಳಿತದ ವತಿಯಿಂದ ಮಹಾಶಿವರಾತ್ರಿಯ ಅಂಗವಾಗಿ ನಡೆದ ಜಾಗರಣೋತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಮತ್ತು ಸ್ಥಳೀಯ ಕಲಾವಿದರು ವಿವಿಧ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಮನರಂಜಿಸಿದರು.

ಜಾಗರಣೋತ್ಸವದಲ್ಲಿ ಸಾವಿರಾರು ಜನರು ವೀಕ್ಷಿಸಿ ಆನಂದ ಪಟ್ಟರು. ಭಟ್ಕಳ ಮಾವಿನಕುರ್ವೆ ಬಂದರದ ಗುಡ್ಡದ ಮೇಲಿರುವ ಪುರಾಣ ಪ್ರಸಿದ್ಧ ಶ್ರೀ ಕುಟುಮೇಶ್ವರ ದೇವಸ್ಥಾನದಲ್ಲೂ ಕೂಡ ಶಿವರಾತ್ರಿ ಪ್ರಯುಕ್ತ ಸಹಸ್ರ ಬಿಲ್ವಾರ್ಚನೆ ಮುಂತಾದವು ನಡೆದವು. ಪಟ್ಟಣದ ಪುರಾತನ ಚೋಳೇಶ್ವರ ದೇವಸ್ಥಾನ, ಲಕ್ಷ್ಮೀನಾರಾಯಣ ರಾಮನಾಥ ಶಾಂತೇರಿ ಕಾಮಾಕ್ಷಿ ಬೇತಾಳ ದೇವಸ್ಥಾನ, ಆಸರಕೇರಿಯ ವಿರೂಪಾಕ್ಷ ದೇವಸ್ಥಾನ, ಪಶುಪತಿ ದೇವಸ್ಥಾನ, ಮೂಡಭಟ್ಕಳದ ಈಶ್ವರ ದೇವಸ್ಥಾನ, ಬೈಲೂರಿನ ಮಾರ್ಕಾಂಡೇಶ್ವರ, ಮಾರುಕೇರಿಯ ಕೊಡಕಿಯ ಶಂಭುಲಿಂಗೇಶ್ವರ ದೇವಸ್ಥಾನ ಸೇರಿದಂತೆ ತಾಲ್ಲೂಕಿನ ಎಲ್ಲಾ ಶಿವಾಲಯಕ್ಕೂ ಕೂಡಾ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ಶಿವರಾತ್ರಿ ಪ್ರಯುಕ್ತ ರುದ್ರಾಅಭಿಷೇಕ, ಅರ್ಚನೆಗಳನ್ನು ಮಾಡಿಸಿದರು. ಶಿವರಾತ್ರಿಯ ಪ್ರಯುಕ್ತ ತಾಲೂಕಿನ ಶಿವತಾಣವಷ್ಟೇ ಅಲ್ಲದೇ ಬೇರೆ ದೇವಸ್ಥಾನಗಳಿಗೂ ಕೂಡ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಭಕ್ತಿ ಭಾವದಿಂದ ಪೂಜಿಸಿದರು. ವರ್ಷಂಪ್ರತಿಯಂತೆ ಭಟ್ಕಳದಿಂದ ನೂರಾರು ಜನರು ಸಾಗರ ತಾಲೂಕಿನ ಭೀಮೇಶ್ವರದ ಅತಿ ಪುರಾತನ ದೇವಾಲಯವಾದ ಭೀಮೇಶ್ವರಕ್ಕೆ ತೆರಳಿ ತೀರ್ಥ ಸ್ನಾನ, ಪೂಜೆ ಸಲ್ಲಿಸಿದರು.

ನಾಗವಳ್ಳಿ ಸಮೀಪದ ಘಾಟೇಶ್ವರದ ದೇವ ದೇವೇಶ್ವರ ದೇವಸ್ಥಾನದಲ್ಲೂ ಮಹಾಶಿವರಾತ್ರಿ ಉತ್ಸವ ವಿಜ್ರಂಭಣೆಯಿಂದ ನಡೆಯಿತು.

ತಾಲೂಕಿನಲ್ಲಿ ಶಿವರಾತ್ರಿಯ ಉತ್ಸವಗಳು ಶಾಂತಿಯುತವಾಗಿ ನಡೆದಿವೆ. ಹಲವೆಡೆ ರಾತ್ರಿ ಅಖಂಡ ಭಜನೆ, ಧಾರ್ಮಿಕ ಕಾರ್ಯಕ್ರಮಗಳು, ಜಾಗರಣೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಗೊಂಡ ಸಮುದಾಯದವರು ತಲೆತಲಾಂತರದಿಂದ ಬಂದ ತಮ್ಮ ಪದ್ಧತಿಯಂತೆ ಮೂರು ದಿನಗಳ ಕಾಲ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಡೆಕ್ಕೆ ಕುಣಿತ ಮಾಡುವ ಸಂಪ್ರದಾಯ ಹೊಂದಿದ್ದು, ಈ ಸಲವೂ ಸಹ ಡೆಕ್ಕೆ ಕುಣಿತಕ್ಕೆ ಬುಧವಾರ ರಾತ್ರಿ ಗೊಂಡರು ಗ್ರಾಮದ ದೇವರಿಗೆ ಪೂಜೆ ಸಲ್ಲಿಸುವುದರ ಮೂಲಕ ಆರಂಭಿಸಿದ್ದಾರೆ.