ಸಾರಾಂಶ
ಭಟ್ಕಳ:ಜಾಲಿಯ ದೇವಿನಗರದಲ್ಲಿ ನಾಮಫಲಕ ಹಾಕಬೇಕೆಂದು ಮಂಗಳವಾರವೂ ಸಹ ಹಿಂದೂ ಕಾರ್ಯಕರ್ತರು ಪಟ್ಟು ಹಿಡಿದು ಪ್ರತಿಭಟಿಸಿದರು. ಆದರೆ ಅಧಿಕಾರಿಗಳು ಅವಕಾಶ ನೀಡಲು ನಿರಾಕರಿಸಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆ ಕೈಬಿಟ್ಟು ಎರಡು ದಿನಗಳ ಗಡುವು ನೀಡಿದ್ದಾರೆ.ಜಾಲಿಯ ದೇವಿನಗರದಲ್ಲಿ ನಾಮಫಲಕ ಅಳವಡಿಸಲು ಭಾನುವಾರ ಸ್ಥಳೀಯರು ಕಂಬ ನೆಟ್ಟಿದ್ದರು. ಆದರೆ ಜಾಲಿ ಪಪಂ ಅಧಿಕಾರಿಗಳು ಪರವಾನಗಿ ಪಡೆಯದ ಹಿನ್ನೆಲೆ ಸೋಮವಾರ ಬೆಳಗ್ಗೆ ಕಂಬ ಕಿತ್ತು ಹಾಕಿದ್ದರು. ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ಪಪಂ ವಿರುದ್ಧ ಪ್ರತಿಭಟನೆ ನಡೆಸಿ ಕಂಬ ಮರುಸ್ಥಾಪನೆಗೆ ಪಟ್ಟು ಹಿಡಿದಿದ್ದರು. ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಸಭೆ ನಡೆಸಿ ಮಂಗಳವಾರ ಬೆಳಗ್ಗೆ ನಿಲುವು ತಿಳಿಸುವುದಾಗಿ ಹೇಳಿದ್ದರು. ಅದರಂತೆ ಮಂಗಳವಾರ ಬೆಳಗ್ಗೆ ಜಾಲಿ ದೇವಿನಗರದಲ್ಲಿ ನಾಮಫಲಕದೊಂದಿಗೆ ನೂರಾರು ಸಂಖ್ಯೆಯಲ್ಲಿ ಸೇರಿದ ಹಿಂದೂ ಕಾರ್ಯಕರ್ತರು ನಾಮಫಲಕ ಹಾಕಲು ಅವಕಾಶ ನೀಡಬೇಕೆಂದು ಪಟ್ಟು ಹಿಡಿದು ಧರಣಿಗೆ ಕುಳಿತರು.ಸ್ಥಳಕ್ಕಾಗಮಿಸಿದ ಜಿಲ್ಲಾ ಹೆಚ್ಚುವರಿ ಎಸ್ಪಿ ಸಿ.ಟಿ. ಜಯಕುಮಾರ, ಹೊಸ ನಾಮಫಲಕ ಹಾಕಲು ಸ್ಥಳೀಯ ಸಂಸ್ಥೆಯಿಂದ ಪರವಾನಗಿ ಅಗತ್ಯ ಎಂದಾಗ, ಹಿಂದೂ ಜಾಗರಣಾ ವೇದಿಕೆಯ ರಾಘು ನಾಯ್ಕ, ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ, ಜಾಲಿ ಪಪಂ ಸದಸ್ಯ ದಯಾನಂದ ನಾಯ್ಕ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ ಸಭೆ ನಡೆಸಿ ನಿಲುವು ಹೇಳುತ್ತೇವೆ ಎಂದಿದ್ದ ಅಧಿಕಾರಿಗಳು ಈ ವರೆಗೂ ಬಂದಿಲ್ಲ. ನಾವು ನಾಮಫಲಕ ಹಾಕಿಯೇ ಹೋಗುತ್ತೇವೆಂದು ಪಟ್ಟು ಹಿಡಿದರು. ಆಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದವೂ ನಡೆಯಿತು.ಸ್ಥಳಕ್ಕೆ ತಹಸೀಲ್ದಾರ್ ತಿಪ್ಪೇಸ್ವಾಮಿ ಆಗಮಿಸಿ ಸಭೆಯಲ್ಲಿ ಹೊಸದಾಗಿ ಯಾವುದೇ ನಾಮಫಲಕ ಹಾಕಬಾರದು ಮತ್ತು ಹಳೇ ನಾಮಫಲಕ ತೆರವುಗೊಳಿಸಬಾರದು ಎಂದು ನಿರ್ಧರಿಸಲಾಗಿದೆ. ಹೀಗಾಗಿ ದೇವಿನಗರದಲ್ಲಿ ಯಾವುದೇ ಹೊಸ ನಾಮಫಲಕ ಹಾಕಲು ಅವಕಾಶ ಇಲ್ಲ ಎಂದಾಗ ಮತ್ತಷ್ಟು ಆಕ್ರೋಶಗೊಂಡ ಹಿಂದೂ ಕಾರ್ಯಕರ್ತರು ನೀವು ನಿನ್ನೆ ಒಂದು ರೀತಿ ಹೇಳಿದ್ದೀರಿ, ಇದೀಗ ಯಾರದ್ದೋ ಒತ್ತಡಕ್ಕೆ ಒಳಗಾಗಿ ಇನ್ನೊಂದು ರೀತಿ ಹೇಳುತ್ತಿದ್ದೀರಿ ಎಂದು ಧಿಕ್ಕಾರ ಕೂಗಿದರು.ನಿವೃತ್ತ ಸೈನಿಕ ಶ್ರೀಕಾಂತ ನಾಯ್ಕ, ರಾಘು ನಾಯ್ಕ ಮುಂತಾದವರು ಕಳೆದ 12 ವರ್ಷಗಳ ಹಿಂದೆ ಜಾಲಿ ಪಪಂ ವ್ಯಾಪ್ತಿಯಲ್ಲಿ ಅನಧಿಕೃತ ನಾಮಫಲಕ ಮತ್ತು ಕಟ್ಟಡ ತೆರವುಗೊಳಿಸಲು ಮನವಿ ಕೊಡಲಾಗಿತ್ತು. ಇದಕ್ಕೆ ಅಧಿಕಾರಿಗಳು ಏನು ಕ್ರಮ ಕೈಗೊಂಡಿದ್ದೀರಿ. ಇದೀಗ ದೇವಿನಗರದಲ್ಲಿ ವಿವಾದ ರಹಿತವಾದ ನಾಮಫಲಕ ಹಾಕಲು ಮುಂದಾದರೆ ಅದನ್ನು ಯಾರದ್ದೋ ಒತ್ತಡಕ್ಕೆ ಮಣಿದು ತಡೆಯುತ್ತಿದ್ದೀರಿ. ಈ ಬಗ್ಗೆ ಯಾರಿಂದಲೂ ದೂರು ದಾಖಲಾಗದೇ ಇದ್ದರೂ ನಾಮಫಲಕ ಹಾಕಲು ಬಿಡುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.ಇಷ್ಟಾದರೂ ಪೊಲೀಸರು, ತಹಸೀಲ್ದಾರ್ ಹೊಸ ನಾಮಫಲಕ ಹಾಕಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಕೊನೆಗೆ ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಎರಡು ದಿನಗಳಲ್ಲಿ ನಾಮಫಲಕ ಹಾಕಲು ಅವಕಾಶ ಕೊಡಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು, ಬಳಿಕ ಪಟ್ಟಣ ಪಂಚಾಯಿತಿಗೆ ಪಪಂ ವ್ಯಾಪ್ತಿಯಲ್ಲಿರುವ ಅನಧಿಕೃತ ನಾಮಫಲಕ ಮತ್ತು ಅನಧಿಕೃತ ಕಟ್ಟಡ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು. ಪ್ರತಿಭಟನೆ ವೇಳೆ ಕಾರವಾರ, ಶಿರಸಿ ಡಿವೈಎಸ್ಪಿ, ವಿವಿಧ ತಾಲೂಕಿನ ಸಿಪಿಐ ಸೇರಿದಂತೆ ಪೊಲೀಸರು, ಕೆಎಸ್‌ಆರ್‌ಪಿಪೊಲೀಸರು ಬಂದೋಬಸ್ತ್‌ಗೆ ಆಗಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಬೀಗಿ ಬಂದೋಬಸ್ತ್ ಹಾಕಲಾಗಿದೆ.