ಭಟ್ಕಳದ 4 ಚೆಕ್‌ಪೋಸ್ಟ್ ತೆರವಿನಿಂದ ಹೆಚ್ಚಿದ ಅಕ್ರಮ: ಚಟುವಟಿಕೆ

| Published : Jun 01 2024, 12:46 AM IST

ಭಟ್ಕಳದ 4 ಚೆಕ್‌ಪೋಸ್ಟ್ ತೆರವಿನಿಂದ ಹೆಚ್ಚಿದ ಅಕ್ರಮ: ಚಟುವಟಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚೆಕ್ ಪೋಸ್ಟ್‌ಗಳನ್ನು ಸಚಿವ ಮಂಕಾಳು ವೈದ್ಯರ ಸೂಚನೆಯಂತೆ ತೆಗೆದು ಹಾಕಲಾಗಿದ್ದು, ಅಕ್ರಮ ಚಟುವಟಿಕೆ ಮಾಡುವವರಿಗೆ ಸಚಿವರ ಬೆಂಬಲ ಇದೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಗಂಭೀರ ಆರೋಪ ಮಾಡಿದರು.

ಭಟ್ಕಳ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಟ್ಕಳದಲ್ಲಿದ್ದ 4 ಚೆಕ್ ಪೋಸ್ಟ್‌ಗಳನ್ನು ತೆಗೆದು ಹಾಕಿದ್ದು, ಇದರಿಂದ ಅಕ್ರಮ ಚಟುವಟಿಕೆ ಹೆಚ್ಚಿವೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಕ್ ಪೋಸ್ಟ್‌ಗಳನ್ನು ಸಚಿವ ಮಂಕಾಳು ವೈದ್ಯರ ಸೂಚನೆಯಂತೆ ತೆಗೆದು ಹಾಕಲಾಗಿದ್ದು, ಅಕ್ರಮ ಚಟುವಟಿಕೆ ಮಾಡುವವರಿಗೆ ಸಚಿವರ ಬೆಂಬಲ ಇದೆ ಎಂದು ಗಂಭೀರ ಆರೋಪ ಮಾಡಿದರು.

ತಾಲೂಕಿನಲ್ಲಿ ಭೂ ಮಾಫಿಯದವರಿಗೆ ಅರಣ್ಯಭೂಮಿ ಅತಿಕ್ರಮಣ ಮಾಡಲು ಸಚಿವರು ಕುಮ್ಮಕ್ಕು ನೀಡುತ್ತಿದ್ದಾರೆ. ಭೂ ಮಾಫಿಯಾದವರು ಅರಣ್ಯ ಪ್ರದೇಶದಲ್ಲಿ ಹಾಗೂ ಕಂದಾಯ ಇಲಾಖೆಯ ಜಾಗವನ್ನು ಅತಿಕ್ರಮಣ ಮಾಡಿ ಆ ಜಾಗದಲ್ಲಿ ದಾರಿಯನ್ನು ಮಾಡಿಕೊಂಡಿದ್ದಾರೆ ಎಂದರು.

ನಾನು ಶಾಸಕನಾಗಿದ್ದಾಗ ಬಡ ಹಳೆಯ ಅತಿಕ್ರಮಣದಾರರ ಬೆಂಬಲಕ್ಕೆ ನಿಂತಿದ್ದೇನೆಯೇ ಹೊರತು ಭೂ ಮಾಫಿಯಾದವರ ಬೆಂಬಲಕ್ಕೆ ಎಂದೂ ನಿಲ್ಲಲಿಲ್ಲ ಎಂದ ಅವರು, ಸಚಿವರು ತಮ್ಮ ಮಾಲೀಕತ್ವದ ಬೀನಾ ವೈದ್ಯ ಶಾಲೆಯ ಪಕ್ಕದಲ್ಲಿ ಅರಣ್ಯ ಭೂಮಿ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಅದೇ ಬಡವರು ಅತಿಕ್ರಮಣ ಮಾಡಿದ ಮನೆಯ ರಿಪೇರಿ ಮಾಡಲು ಹೋದರೆ ಅದನ್ನು ಕೆಡವಲು ಹೋಗುವ ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರು ಎಕರೆಗಟ್ಟಲೆ ಒತ್ತುವರಿ ಮಾಡಿರುವುದು ಕಣ್ಣೀಗೆ ಕಾಣುವುದಿಲ್ಲದೇ ಎಂದು ಪ್ರಶ್ನಿಸಿದರು.

ಇನ್ನು ೧೫ ದಿನಗಳ ಒಳಗೆ ಅರಣ್ಯ ಇಲಾಖೆ ಆಧಿಕಾರಿಗಳು ಸಚಿವರು ತಮ್ಮ ಶಾಲೆಯ ಪಕ್ಕ ಒತ್ತುವರಿ ಮಾಡಿಕೊಂಡ ಜಾಗವನ್ನು ಪುನಃ ವಶಕ್ಕೆ ಪಡೆದು ಬೇಲಿ ಹಾಕಿ ಇಲಾಖೆಯ ವಶಕ್ಕೆ ಪಡೆಯಬೇಕು. ಒಂದೊಮ್ಮೆ ಈ ಕೆಲಸ ಮಾಡದಿದ್ದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಮಾಡುವುದು ಅನಿವಾರ್ಯವಾದೀತು ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಟ್ಕಳದಲ್ಲಿ ಅಕ್ರಮ ಗೋಸಾಗಾಟ ವ್ಯವಸ್ಥಿತ ರೀತಿಯಲ್ಲಿ ನಡೆಯುತ್ತಿದೆ. ಗೋಸಾಗಾಟ, ಅಕ್ರಮ ಚಟುವಟಿಕೆ ನಡೆಸಲೆಂದೇ ಚೆಕ್‌ಪೋಸ್ಟ್‌ಗಳನ್ನು ತೆರವುಗೊಳಿಸಲಾಗಿದೆ ಎಂದ ಅವರು, ಭಟ್ಕಳದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಹಲವಾರು ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಸಂಚಾಲಕ ಗೋವಿಂದ ನಾಯ್ಕ, ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಈಶ್ವರ ಎನ್. ನಾಯ್ಕ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಪ್ರಮುಖರಾದ ರಾಜೇಶ ನಾಯ್ಕ, ಮೋಹನ ನಾಯ್ಕ, ರಾಘವೇಂದ್ರ ನಾಯ್ಕ, ಸುರೇಶ ನಾಯ್ಕ, ಶ್ರೀನಿವಾಸ ನಾಯ್ಕ ಮುಂತಾದವರಿದ್ದರು.