ಸಾರಾಂಶ
ಪ್ರಸ್ತುತ ಮಲ್ಲಿಗೆಗೆ ಇಷ್ಟೊಂದು ದರ ಏರಿಕೆಯಾದರೂ ಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರೀ ಹೊಡೆತ ಬಿದ್ದಿದೆ.
ಭಟ್ಕಳ: ಭಾರೀ ಮಳೆಗೆ ಘಮಘಮಿಸುವ ಭಟ್ಕಳ ಮಲ್ಲಿಗೆ ಹೂವಿನ ಬೆಳೆ ಹಾನಿಯಾಗಿದ್ದು, ಮಾರುಕಟ್ಟೆಗೆ ಹೆಚ್ಚಿನ ಹೂವು ಪೂರೈಕೆ ಆಗದೇ ಇರುವುದರಿಂದ ಮಲ್ಲಿಗೆ ದರ ಮೊಳವೊಂದಕ್ಕೆ ₹೨೦೦ ಗಡಿ ದಾಟುವಂತಾಗಿದೆ.
ಭಟ್ಕಳ ಮಲ್ಲಿಗೆಗೆ ಸದಾ ಬೇಡಿಕೆ ಇರುತ್ತದೆ. ಇದು ಘಮಿಘಮಿಸುವ ಸುವಾಸನೆಯಿಂದ ತನ್ನದೇ ಆದ ವಿಶೇಷತೆ ಹೊಂದಿದೆ. ದೇಶ, ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ಕಳೆದ ನಾಲ್ಕೈದು ದಿನಗಳಿಂದ ಭಟ್ಕಳ ಮಲ್ಲಿಗೆಯ 10 ಮೊಳ ಇರುವ ಒಂದು ಅಟ್ಟೆಗೆ ₹2100ರ ವರೆಗೂ ದರ ನಿಗದಿಯಾಗಿದೆ.ಪ್ರಸ್ತುತ ಮಲ್ಲಿಗೆಗೆ ಇಷ್ಟೊಂದು ದರ ಏರಿಕೆಯಾದರೂ ಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಾಗಿಲ್ಲ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಮಲ್ಲಿಗೆ ಬೆಳೆಗೆ ಭಾರೀ ಹೊಡೆತ ಬಿದ್ದಿದೆ. ಬೆಳೆಗಾರರು ಮಲ್ಲಿಗೆ ಗಿಡಕ್ಕೆ ಸಾವಿರಾರು ರುಪಾಯಿ ಖರ್ಚು ಮಾಡಿ ಹಾಕಿದ ಗೊಬ್ಬರ, ಪೋಷಕಾಂಶ, ಔಷಧಿ ಎಲ್ಲವೂ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ.
ಈ ಸಲವೂ ಕಳೆದ ವರ್ಷದಂತೆ ಇಳುವರಿಯೂ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಮಲ್ಲಿಗೆಗೆ ಉತ್ತಮ ಬೆಲೆ ಇದ್ದಾಗ ಬೆಳೆ ಇಲ್ಲ ಎನ್ನುವಂತಾಗಿದೆ. ತಾಲೂಕಿನಲ್ಲಿ ಸಾವಿರಾರು ಕುಟುಂಬ ಮಲ್ಲಿಗೆ ಬೆಳೆಯನ್ನು ಬೆಳೆಯುತ್ತಿದ್ದು, ಹೆಚ್ಚಿನವರು ಇದನ್ನೇ ನಂಬಿ ಜೀವನ ನಿರ್ವಹಿಸುತ್ತಿದ್ದಾರೆ.ಸರ್ಕಾರದಿಂದ ಅತಿವೃಷ್ಟಿಯಿಂದಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಸಿಕ್ಕೀತೆ ಎನ್ನುವ ನಿರೀಕ್ಷೆಯಲ್ಲಿ ಬೆಳೆಗಾರರಿದ್ದಾರೆ. ಗಿಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೂವು ಬಿಡದೇ ಇರುವುದರಿಂದ ಸಹಜವಾಗಿ ಮಾರುಕಟ್ಟೆಗೆ ಮೊದಲಿನ ಪ್ರಮಾಣದಲ್ಲಿ ಮಲ್ಲಿಗೆ ಬರುತ್ತಿಲ್ಲ. ಹೀಗಾಗಿಯೇ ಮಲ್ಲಿಗೆಗೆ ದಿಢೀರ್ ದರ ಏರಿಕೆಗೆ ಕಾರಣವಾಗಿದೆ.
ಮಾರುಕಟ್ಟೆಗೆ ಬಂದ ಮಲ್ಲಿಗೆ ಹೂವು ಸ್ಥಳೀಯವಾಗಿ ನಡೆಯುತ್ತಿರುವ ಮದುವೆ, ಧಾರ್ಮಿಕ ಮತ್ತಿತರ ಕಾರ್ಯಕ್ರಮಗಳಿಗೆ ಮತ್ತು ದೇವಸ್ಥಾನಗಳಿಗೆ ಪೂರೈಕೆ ಆಗುತ್ತಿದ್ದರೆ, ಉಡುಪಿ, ದಕ್ಷಿಣಕನ್ನಡ, ಬೆಂಗಳೂರಿಗೂ ಇಲ್ಲಿನ ಹೂವು ರವಾನೆ ಆಗುತ್ತಿದೆ. ಮಾರುಕಟ್ಟೆಗೆ ಮಲ್ಲಿಗೆ ಹೆಚ್ಚು ಬರದೇ ಇರುವುದರಿಂದ ಪ್ರಸ್ತುತ ಇಷ್ಟೊಂದು ದರ ಏರಿಕೆಗೆ ಕಾರಣವಾಗಿದ್ದು, ಸರಿಯಾಗಿ ಹೂವು ಪೂರೈಕೆಯಾದರೆ ಹೆಚ್ಚಾಗಿರುವ ದರವೂ ಕಡಿಮೆ ಆಗಲಿದೆ ಎಂದು ಮಲ್ಲಿಗೆ ವ್ಯಾಪಾರಸ್ಥರು ತಿಳಿಸಿದ್ದಾರೆ.