ಭಟ್ಕಳದ ಸೋಡಿಗದ್ದೆ ಮಹಾಸತಿ ಜಾತ್ರೆ ಆರಂಭ

| Published : Jan 24 2025, 12:45 AM IST

ಸಾರಾಂಶ

ಜಾತ್ರೆಯ ಪ್ರಯುಕ್ತ ಗುರುವಾರ ಬೆಳಗ್ಗೆ ದೇವಸ್ಥಾನದಲ್ಲಿ ಹೋಮ- ಹವನಗಳು ಜರುಗಿದವು. ಆನಂತರ ಮಹಾಸತಿ ದೇವಿಗೆ ಪ್ರಥಮ ಪೂಜೆ ಸಲ್ಲಿಸಿ, ದೇವಿಯ ದರ್ಶನ ಮತ್ತು ಪೂಜೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.

ಭಟ್ಕಳ: ಇಲ್ಲಿನ ಸುಪ್ರಸಿದ್ಧ ಸೋಡಿಗದ್ದೆ ಮಹಾಸತಿ ದೇವಿ ಜಾತ್ರೆ ಗುರುವಾರ ಹಾಲಹಬ್ಬದ ಸೇವೆಯೊಂದಿಗೆ ವಿಜೃಂಭಣೆಯಿಂದ ಆರಂಭಗೊಂಡಿತು.

ಜಾತ್ರೆಯ ಪ್ರಯುಕ್ತ ಗುರುವಾರ ಬೆಳಗ್ಗೆ ದೇವಸ್ಥಾನದಲ್ಲಿ ಹೋಮ- ಹವನಗಳು ಜರುಗಿದವು. ಆನಂತರ ಮಹಾಸತಿ ದೇವಿಗೆ ಪ್ರಥಮ ಪೂಜೆ ಸಲ್ಲಿಸಿ, ದೇವಿಯ ದರ್ಶನ ಮತ್ತು ಪೂಜೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತಾಧಿಕಾರಿಯೂ ಆಗಿರುವ ತಹಸೀಲ್ದಾರ್‌ ನಾಗೇಂದ್ರ ಕೋಳಶೆಟ್ಟಿ, ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ದೇವಿದಾಸ ಮೊಗೇರ ಹಾಗೂ ಪದಾಧಿಕಾರಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.

ಮಧ್ಯಾಹ್ನ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಪ್ರಸಾದ ಭೋಜನ ಸ್ವೀಕರಿಸಿದರು. ಸೋಡಿಗದ್ದೆ ಜಾತ್ರೆಯಲ್ಲಿ ಶುಕ್ರವಾರ ಬೆಳಗ್ಗೆಯಿಂದ ಮಧ್ಯಾಹ್ನದ ವರೆಗೆ ಕೆಂಡಸೇವೆ ಇರಲಿದ್ದು, ಸಾವಿರಾರು ಭಕ್ತರು ಕೆಂಡ ಸೇವೆಯಲ್ಲಿ ಪಾಲ್ಗೊಂಡು ಮಹಾಸತಿ ದೇವಿಗೆ ಕಷ್ಟ ಕಾರ್ಪಣ್ಯದ ಸಂದರ್ಭದಲ್ಲಿ ಹೇಳಿಕೊಂಡ ಹರಕೆಯನ್ನು ಸಲ್ಲಿಸುತ್ತಾರೆ. ಕೆಂಡ ಸೇವೆಯಲ್ಲಿ ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರೂ ಪಾಲ್ಗೊಳ್ಳುತ್ತಾರೆ.

ಜಾತ್ರೆಯಲ್ಲಿ ನೂಕುನುಗ್ಗಲು ಉಂಟಾಗದಂತೆ ತಡೆಯಲು ಮತ್ತು ಜಾತ್ರೆಗೆ ಆಗಮಿಸಿದ ಭಕ್ತರಿಗೆ ತ್ವರಿತವಾಗಿ ದೇವಿಯ ದರ್ಶನ ಮತ್ತು ಪೂಜೆಗೆ ಅಭಿವೃದ್ಧಿ ಸಮಿತಿ ಮತ್ತು ಕಂದಾಯ ಇಲಾಖೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ. ಸೋಡಿಗದ್ದೆ ಮಹಾಸತಿ ದೇವಸ್ಥಾನ ಭಕ್ತರ ಪಾಲಿನ ನಂಬಿಕೆಯ ದೇವಸ್ಥಾನ ಆಗಿದ್ದು, ಇಲ್ಲಿಗೆ ಸ್ಥಳೀಯರು ಹಾಗೂ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಯಿಂದಲೂ ಭಕ್ತರು ಆಗಮಿಸಿ, ದೇವಿಗೆ ಪೂಜೆ- ಪುನಸ್ಕಾರ ಸಲ್ಲಿಸುತ್ತಾರೆ. ಸೋಡಿಗದ್ದೆ ಜಾತ್ರೆಯಲ್ಲಿ ತುಲಾಭಾರ ಸೇವೆಯೂ ನಡೆಯಲಿದ್ದು, ಜಾತ್ರೆ ಜ. 31ರ ವರೆಗೂ ಅದ್ಧೂರಿಯಾಗಿ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ. ಸಂಜೆ ಮತ್ತು ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ಮತ್ತು ಯಕ್ಷಗಾನ ಮುಂತಾದವು ನಡೆಯಲಿದೆ.

ರಾಮಲಲ್ಲಾ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಗೋಕರ್ಣ: ಅಯೋಧ್ಯಾದಲ್ಲಿ ಶ್ರೀರಾಮಲಲ್ಲಾ(ಬಾಲರಾಮ) ಪ್ರಾಣ ಪ್ರತಿಷ್ಠೆಯಾಗಿ ಒಂದು ವರ್ಷವಾದ ಹಿನ್ನೆಲೆ ವರ್ಧಂತಿಯ ಪ್ರಯುಕ್ತ ಇಲ್ಲಿನ ಗಂಗೆಕೊಳ್ಳದ ಮಾರುತಿ ದೇವಸ್ಥಾನ ಸಮಿತಿ ವತಿಯಿಂದ ವಿಶೇಷ ಕಾರ್ಯಕ್ರಮ, ಆಕರ್ಷಕ ಭಜನಾ ಜಾಥಾ ಬುಧವಾರ ನಡೆಯಿತು.ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ ಮಹಾಮಮಂಗಳಾರತಿ ಪ್ರಸಾದ ವಿತರಣೆ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಸಂಜೆ ದೇವಾಲಯದ ಸಮಿತಿ ಹಾಗೂ ಸಾರ್ವಜನಿಕರು ಒಳಗೊಂಡ ಭಜನಾ ಜಾಥಾ ದೇವಸ್ಥಾನದಿಂದ ಹೊರಟು ಹಾರುಮಾಸ್ಕೇರಿಯ ಮಹಾಗಣಪತಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಗ್ರಾಮದೇವಿಯಾದ ಗಂಗಾವಳಿಯ ಶಾಂತಿಕಾ ಪರಮೇಶ್ವರಿ ಮಂದಿರಕ್ಕೆ ಆಗಮಿಸಿ ದೇವಿಗೆ ಪೂಜೆ ನೆರವವೇರಿಸಿದ ಬಳಿಕ ಪುನಃ ಮಂದಿರಕ್ಕೆ ತೆರಳಿ ಕೊನೆಗೊಂಡಿತು.