ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮೀಸಲಾತಿ ಅನಾನುಕೂಲತೆಯಿಂದ ಘಟಾನುಘಟಿಗಳು ಅನಿವಾರ್ಯವಾಗಿ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತಾಗಿದೆ.
ರಾಘವೇಂದ್ರ ಹೆಬ್ಬಾರ್
ಭಟ್ಕಳ: ಇಲ್ಲಿನ ತಾಲೂಕು ಪಂಚಾಯಿತಿ ಕ್ಷೇತ್ರವನ್ನು ಪುನರ್ ವಿಂಗಡನೆಯ ಬಳಿಕ 12 ಇದ್ದಿದ್ದನ್ನು 9ಕ್ಕೆ ಇಳಿಕೆ ಮಾಡಲಾಗಿದೆ. 9 ಕ್ಷೇತ್ರದಲ್ಲಿ 5 ಮಹಿಳಾ ಮೀಸಲಾತಿ ಕ್ಷೇತ್ರವಾದರೆ, 4 ಕ್ಷೇತ್ರ ಮಾತ್ರ ಪುರುಷರು ಸ್ಪರ್ಧೆ ಮಾಡಬಹುದಾಗಿದೆ.ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮೀಸಲಾತಿ ಅನಾನುಕೂಲತೆಯಿಂದ ಘಟಾನುಘಟಿಗಳು ಅನಿವಾರ್ಯವಾಗಿ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವಂತಾಗಿದೆ. ತಾಲೂಕಿನ ಬೈಲೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗ ಅ, ಮಾವಳ್ಳಿ 1 ಕ್ಷೇತ್ರದಿಂದ ಸಾಮಾನ್ಯ ಮಹಿಳೆ, ಮಾವಳ್ಳಿ 2 ಕ್ಷೇತ್ರದಿಂದ ಅನುಸೂಚಿತ ಪಂಗಡ ಮಹಿಳೆ, ಕಾಯ್ಕಿಣಿಯಿಂದ ಹಿಂದುಳಿದ ಅ ವರ್ಗ ಮಹಿಳೆ, ಬೇಂಗ್ರೆಯಿಂದ ಸಾಮಾನ್ಯ ಮಹಿಳೆ, ಶಿರಾಲಿ, ಮುಟ್ಟಳ್ಳಿ, ಮಾರುಕೇರಿಯಲ್ಲಿ ಸಾಮಾನ್ಯ ಹಾಗೂ ಬೆಳಕೆಯಲ್ಲಿ ಅನುಸೂಚಿತ ಜಾತಿ ಮಹಿಳಾ ಮೀಸಲಾತಿ ಬಂದಿದೆ.
ಶಿರಾಲಿ, ಮುಟ್ಟಳ್ಳಿ,ಮಾರುಕೇರಿ ಮತ್ತು ಬೈಲೂರಿನಲ್ಲಿ ಪುರುಷರಿಗೆ ಸ್ಪರ್ಧಿಸಲು ಅವವಕಾಶ ಸಿಕ್ಕಿರುವುದರಿಂದ ಈ ಕ್ಷೇತ್ರಗಳಲ್ಲಿ ಘಟಾನುಘಟಿಗಳು ಸ್ಪರ್ಧಿಸಿ ಚುನಾವಣೆ ಜಿದ್ದಾಜಿದ್ದಿಯಾಗುವ ಸಾಧ್ಯತೆ ಇದೆ. ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮೀಸಲಾತಿ ಬಂದು ಸ್ಪರ್ಧಿಸಬಹುದು ಎನ್ನುವ ಕನಸು ಕಂಡಿದ್ದ ಆಕಾಂಕ್ಷಿಗಳಿಗೆ ಮೀಸಲಾತಿ ಅವಕೃಪೆಯಿಂದ ನಿರಾಸೆ ಆದ ಹಿನ್ನೆಲೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ತಾಲೂಕು ಪಂಚಾಯಿತಿ ಕ್ಷೇತ್ರಗಳಲ್ಲೇ ಸ್ಪರ್ಧಿಸಲು ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.ಕೆಲವರು ಜಿಪಂ ಕ್ಷೇತ್ರದಲ್ಲಿ ತಮಗೆ ಸ್ಪರ್ಧಿಸಲು ಮೀಸಲಾತಿ ಅನಾನುಕೂಲ ಆಗಿದ್ದರಿಂದ ತಮ್ಮ ಪತ್ನಿಯನ್ನೋ ಅಥವಾ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡಿಸುವ ತಯಾರಿ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ತಾಲೂಕು ಪಂಚಾಯಿತಿಗೆ ಸರ್ಕಾರದ ಅನುದಾನ ಕಡಿಮೆ ಬರುತ್ತಿರುವುದರಿಂದ ಇಲ್ಲಿ ಸ್ಪರ್ಧಿಸಿ ಹಣ ಕಳೆದುಕೊಳ್ಳುವುದಕ್ಕಿಂತ ಸುಮ್ಮನಿರುವುದೇ ಒಳಿತು ಎಂದು ಕೆಲವು ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಾರೆ ಮೀಸಲಾತಿ ಅವಕೃಪೆ ಮುಖಂಡರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಏಳೆಂಟು ವರ್ಷಗಳ ಬಳಿಕ ಜಿಪಂ, ತಾಪಂ ಚುನಾವಣೆಗೆ ಸರ್ಕಾರ ಮುಂದಾಗಿದೆ. ಇದು ಬಿಟ್ಟರೆ ಮತ್ತೆ ಐದು ವರ್ಷ ಕಾಯುವುದಕ್ಕಿಂತ ತಾಲೂಕು ಪಂಚಾಯಿತಿಗೆ ಸ್ಪರ್ಧಿಸಿ ಸ್ಥಳೀಯ ಜನಪ್ರತಿನಿಧಿಗಳಾಗಬೇಕು ಎನ್ನುವುದು ಕೆಲ ಮುಖಂಡರ ವಾದವಾಗಿದೆ.ಮಹಿಳಾ ಮೀಸಲಾತಿ ಬಂದಿರುವ ಕ್ಷೇತ್ರದಲ್ಲಿ ಸ್ಪರ್ಧಿಸುವ ಮಹಿಳಾ ಅಕಾಂಕ್ಷಿಗಳ ಪಟ್ಟಿಯೂ ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದೆ. ಮೀಸಲಾತಿ ಪ್ರಕಟವಾಗಿರುವುದರಿಂದ ಹಳ್ಳಿಗಳಲ್ಲಿ ರಾಜಕೀಯ ಚರ್ಚೆ ಜೋರಾಗಿ ನಡೆಯುತ್ತಿದೆ. ಸರ್ಕಾರ ಡಿಸೆಂಬರಿನಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದಾಗಿ ಹೇಳಿದ್ದರಿಂದ ಇತ್ತ ಆಯಾ ಪಕ್ಷಗಳ ಆಕಾಂಕ್ಷಿಗಳು ಸ್ಪರ್ಧಿಸಲು ಈಗಿಂದಲೇ ರೆಡಿ ಆಗುತ್ತಿದ್ದಾರೆ. ಪಕ್ಷದ ಟಿಕೆಟ್ಗಾಗಿ ತಮ್ಮ ಮುಖಂಡರ ಮೂಲಕ ಒತ್ತಡ ಹೇರುವ ಕೆಲಸವೂ ನಡೆಯುತ್ತಿದೆ.
