ಸಾರಾಂಶ
ಭಟ್ಕಳ: ಇಲ್ಲಿನ ಸಾಗರ ರಸ್ತೆಯ ಇಕ್ಕೆಲದಲ್ಲಿ ಕೆಲವರು ಕಸ, ತ್ಯಾಜ್ಯ ಹಾಕುತ್ತಿದ್ದು, ಸಂಚರಿಸುವವರಿಗೆ ತೊಂದರೆಯಾಗಿದೆ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಸಾಗರ ರಸ್ತೆಯಲ್ಲಿ ಪುರಸಭೆಯವರ ವಿಶಾಲವಾದ ತ್ಯಾಜ್ಯ ವಿಲೇವಾರಿ ಘಟಕ ಇದೆ. ಈ ಘಟಕದ ಎದುರಿನ ರಸ್ತೆಯ ಬದಿಯಲ್ಲೇ ಕೆಲವರು ತ್ಯಾಜ್ಯ, ಕಸ ಎಸೆದು ಹೋಗುತ್ತಿರುವುದು ವಿಪರ್ಯಾಸ. ಸಾಗರ ರಸ್ತೆಯಲ್ಲಿ ಗಿಡಮರಗಳು ಇರುವುದರಿಂದ ಉತ್ತಮ ಪರಿಸರವಿದೆ. ಈ ರಸ್ತೆಯಲ್ಲಿ ದಿನಂಪ್ರತಿ ವಿವಿಧ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಹಿರಿಯ ನಾಗರಿಕರು, ಮಹಿಳೆಯರು ವಾಯು ವಿಹಾರಕ್ಕೆ ಬರುತ್ತಾರೆ. ರಸ್ತೆ ಬದಿಯಲ್ಲಿ ಕಸ, ತ್ಯಾಜ್ಯ ಹಾಕಿದರೆ ಅದು ಕೊಳೆತು ದುರ್ವಾಸನೆ ಬೀರಿದರೆ ವಾಯು ವಿಹಾರಕ್ಕೆ ತೊಂದರೆ ಆಗುವುದಿಲ್ಲವೇ? ಈ ಹಿಂದೆ ಈ ರಸ್ತೆಯಲ್ಲಿ ಕಸ, ತ್ಯಾಜ್ಯವನ್ನು ಎಸೆಯಲಾಗುತ್ತಿತ್ತು. ಆದರೆ ಈ ಬಗ್ಗೆ ಸ್ಥಳೀಯರು ಹಾಗೂ ಸಂಚರಿಸುವವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ತ್ಯಾಜ್ಯ ಎಸೆಯುವವರಿಗೆ ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರಿಂದ ಮತ್ತು ಸಂಬಂಧಿಸಿದ ಅಧಿಕಾರಿಗಳೂ ಕ್ರಮಕ್ಕೆ ಮುಂದಾಗಿದ್ದರಿಂದ ಇದು ಕೆಲ ಕಾಲ ಸ್ಥಗಿತಗೊಂಡಿತ್ತು. ಆದರೆ ಇತ್ತೀಚೆಗೆ ಮತ್ತೆ ರಸ್ತೆ ಬದಿಗೆ ತ್ಯಾಜ್ಯ, ಕಸದ ರಾಶಿ ಹಾಕುವುದು ಮುಂದುವರಿದಿದೆ. ಯಾರ ಹೆದರಿಕೆಯೂ ಇಲ್ಲದೇ ಹಗಲು ಹೊತ್ತಿನಲ್ಲೇ ಗೂಡ್ಸ್ ವಾಹನದಲ್ಲಿ ಕಸ, ತ್ಯಾಜ್ಯ ತುಂಬಿಕೊಂಡು ಬಂದು ರಸ್ತೆ ಬದಿಯಲ್ಲೇ ಸುರಿದು ಹೋಗುತ್ತಿದ್ದಾರೆ. ರಸ್ತೆ ಬದಿಗೆ ಹಾಕಿದ ಕಸದ ರಾಶಿಯನ್ನು ನಾಯಿ, ಜಾನುವಾರುಗಳು ತಿನ್ನುತ್ತಿದ್ದು, ಇವು ಅದನ್ನು ರಸ್ತೆ ಮಧ್ಯದಲ್ಲಿ ಎಳೆದು ತಂದು ಹಾಕುವುದರಿಂದ ಸಂಚರಿಸುವವರಿಗೆ ತೊಂದರೆಯಾಗಿದೆ. ಈಗಾಗಲೇ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಿಂದ ಹತ್ತಿರದ ಕಸಲಗದ್ದೆ, ಮರಂಬಳ್ಳಿ ಗ್ರಾಮದವರು ತೊಂದರೆ ಅನುಭವಿಸುತ್ತಿದ್ದಾರೆ. ತ್ಯಾಜ್ಯಗಳ ರಾಶಿಯಿಂದ ಪರಿಸರದ ಮೇಲೂ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆ ಬದಿಗೆ ಕಸ, ತ್ಯಾಜ್ಯ ತಂದು ಹಾಕಿ ಪರಿಸರಕ್ಕೆ ಮತ್ತು ಸಂಚರಿಸುವವರಿಗೆ ತೊಂದರೆಯನ್ನುಂಟು ಮಾಡುವುದು ಸರಿಯಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ. ಸಾಗರ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದ್ದಾಗಿದೆ. ರಸ್ತೆ ಪಕ್ಕದ ಪ್ರದೇಶ ಅರಣ್ಯ ಇಲಾಖೆಯದ್ದಾಗಿದೆ. ಇಲ್ಲಿ ಕಸ, ತ್ಯಾಜ್ಯ ಎಸೆದು ಹೋದರೂ ಈ ಎರಡು ಇಲಾಖೆಗಳು ಸುಮ್ಮನಿರುವುದಕ್ಕೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೆಚ್ಚಾಗಿ ಪಟ್ಟಣಿಗರೇ ಇಲ್ಲಿಗೆ ಬಂದು ತ್ಯಾಜ್ಯ, ಕಸದ ರಾಶಿ ಎಸೆಯುತ್ತಿದ್ದಾರೆನ್ನುವ ಆರೋಪ ಕೇಳಿ ಬಂದಿದೆ. ತ್ಯಾಜ್ಯದಿಂದ ಮತ್ತಷ್ಟು ಸಮಸ್ಯೆ ಎದುರಾಗುವ ಪೂರ್ವದಲ್ಲಿ ರಸ್ತೆ ಬದಿಗೆ ತ್ಯಾಜ್ಯ, ಕಸದ ರಾಶಿ ಎಸೆಯುವವರಿಗೆ ಸೂಕ್ತ ಎಚ್ಚರಿಕೆ ನೀಡಬೇಕಾಗಿದೆ. ಅಗತ್ಯ ಬಿದ್ದರೆ ದಂಡವನ್ನೂ ವಿಧಿಸಬೇಕು. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಬೇಕು ಎನ್ನುವ ಆಗ್ರಹ ಜನರಿಂದ ಕೇಳಿ ಬಂದಿದೆ.