ವೀರಾಪುರ ಓಣಿಯಲ್ಲಿ ಸಂಚರಿಸಿದ ಭಾವೈಕ್ಯತಾ ರಥಯಾತ್ರೆ

| Published : Jan 12 2024, 01:46 AM IST

ಸಾರಾಂಶ

ಶಿರಹಟ್ಟಿ ಸಂಸ್ಥಾನಮಠದ ಶ್ರೀಫಕ್ಕಿರ ಸಿದ್ದರಾಮ ಸ್ವಾಮೀಜಿ ಹಾಗೂ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ವಾಹನದಲ್ಲಿ ವಿರಾಜಮಾನವಾಗಿ ರಥಯಾತ್ರೆ

ಹುಬ್ಬಳ್ಳಿ: ಶಿರಹಟ್ಟಿ ಸಂಸ್ಥಾನಮಠದ ಶ್ರೀ ಫಕ್ಕೀರ ಸಿದ್ಧರಾಮ ಶ್ರೀಗಳ ಅಮೃತ ಮಹೋತ್ಸವದ ನಿಮಿತ್ತ ಗುರುವಾರ ಭಾವೈಕ್ಯತಾ ರಥಯಾತ್ರೆ ಗುರುವಾರ ಇಲ್ಲಿನ ವೀರಾಪೂರ ಓಣಿಯ ಎರಡೆತ್ತಿನ ಮಠದಿಂದ ಆರಂಭಗೊಂಡಿತು.

ಶಿರಹಟ್ಟಿ ಸಂಸ್ಥಾನಮಠದ ಶ್ರೀಫಕ್ಕಿರ ಸಿದ್ದರಾಮ ಸ್ವಾಮೀಜಿ ಹಾಗೂ ಫಕ್ಕೀರ ದಿಂಗಾಲೇಶ್ವರ ಸ್ವಾಮೀಜಿ ವಾಹನದಲ್ಲಿ ವಿರಾಜಮಾನವಾಗಿ ರಥಯಾತ್ರೆಯಲ್ಲಿ ಸಂಚರಿಸಿದರು.

ರಥಯಾತ್ರೆಯ ಮಾರ್ಗಗಳಲ್ಲಿ ಮಹಿಳೆಯರು, ಯುವತಿಯರು ವಿವಿಧ ಬಣ್ಣ-ಬಣ್ಣದ ರಂಗೋಲಿಯ ಚಿತ್ತಾರ ಬಿಡಿಸಿ, ಪುಷ್ಪಗಳನ್ನು ಸುರಿದು ರಥಯಾತ್ರೆಯನ್ನು ಅದ್ಧೂರಿಯಾಗಿ ಬರಮಾಡಿಕೊಂಡರು. ರಥಯಾತ್ರೆ ಮನೆ ಬಾಗಿಲಿಗೆ ಆಗಮಿಸಿದ ಸಂದರ್ಭದಲ್ಲಿ ಮಹಿಳೆಯರು ಉಭಯ ಶ್ರೀಗಳಿಂದ ಆಶೀರ್ವಾದ ಪಡೆದುಕೊಳ್ಳುವ ಮೂಲಕ ಪುನೀತರಾದರು.

ಮೆರವಣಿಗೆ ನಂತರ ನಡೆದ ಜಾಗೃತಿ ಸಭೆಯನ್ನುದ್ದೇಶಿಸಿ ಶಿರಹಟ್ಟಿ ಸಂಸ್ಥಾನಮಠದ ಫಕ್ಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿ, ಶಿರಹಟ್ಟಿ ಫಕ್ಕೀರ ಜಗದ್ಗುರುಗಳು ಜನನ ಹಾಗೂ ಅವರ ಪವಾಡಗಳು ಹಾಗೂ ಶಿರಹಟ್ಟಿ ಸಂಸ್ಥಾನಮಠದ ಇತಿಹಾಸದ ಕುರಿತು ಜನರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಚನ್ನಮಲ್ಲ ಸ್ವಾಮೀಜಿ, ಮಲ್ಲಿಕಾರ್ಜುನ ಸಾವುಕಾರ, ಮಹಾಂತೇಶ ಗಿರಿಮಠ, ಚಂದ್ರಶೇಖರ ಗೋಕಾಕ, ಮಲ್ಲಿಕಾರ್ಜುನ ಶಿರಗುಪ್ಪಿ ಸೇರಿದಂತೆ ಸುತ್ತಮುತ್ತಲಿನ ಜನರು ಪಾಲ್ಗೊಂಡರು.