ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವಿಮೋಚನೆಗಾಗಿ ಸಂಘಟಿತ ಹೋರಾಟಕ್ಕೆ ಅಡಿಪಾಯ ಹಾಕಿದ್ದರು. ಬೀದಿಯಲ್ಲಿ ಮೊಳಗಿದ ಹೋರಾಟದ ಘೋಷಣೆಗಳು ನಂತರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಕಾನೂನುಗಳ ರೂಪದಲ್ಲಿ ಪ್ರತಿಫಲಿಸಿದ ಹಲವು ನಿದರ್ಶನಗಳಿವೆ. ಸಂಘಟನೆ ನಂತರ ವಿವಿಧ ಬಣಗಳಾಗಿ ವಿಭಜನೆಯಾದರೂ, ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟದ ಆಶಯ ಮಾತ್ರ ಮುಂದುವರಿದಿದೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಹಾಸನ
ಸಾಮಾಜಿಕ ನ್ಯಾಯದ ಹೋರಾಟದ ನೆಲದಲ್ಲಿ ಹೊಸ ತಲೆಮಾರಿನ ಧ್ವನಿಯನ್ನು ಗಟ್ಟಿಗೊಳಿಸುವ ಉದ್ದೇಶದೊಂದಿಗೆ ‘ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್’ ತನ್ನ ಮೂರನೇ ವರ್ಷದ ಸಂಸ್ಥಾಪನಾ ದಿನಾಚರಣೆಯನ್ನು ಅಕ್ಟೋಬರ್ ೯ರ ಶುಕ್ರವಾರ ಈ ಬಾರಿ ರಾಜ್ಯಮಟ್ಟದಲ್ಲಿ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಲು ನಿರ್ಧರಿಸಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಪ್ರದೀಪ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ವಿಮೋಚನೆಗಾಗಿ ಸಂಘಟಿತ ಹೋರಾಟಕ್ಕೆ ಅಡಿಪಾಯ ಹಾಕಿದ್ದರು. ಬೀದಿಯಲ್ಲಿ ಮೊಳಗಿದ ಹೋರಾಟದ ಘೋಷಣೆಗಳು ನಂತರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಕಾನೂನುಗಳ ರೂಪದಲ್ಲಿ ಪ್ರತಿಫಲಿಸಿದ ಹಲವು ನಿದರ್ಶನಗಳಿವೆ. ಸಂಘಟನೆ ನಂತರ ವಿವಿಧ ಬಣಗಳಾಗಿ ವಿಭಜನೆಯಾದರೂ, ಸಾಮಾಜಿಕ ಅನ್ಯಾಯದ ವಿರುದ್ಧದ ಹೋರಾಟದ ಆಶಯ ಮಾತ್ರ ಮುಂದುವರಿದಿದೆ ಎಂದು ಹೇಳಿದರು.
ಈ ಹೋರಾಟದ ಪರಂಪರೆಯಲ್ಲಿ ‘ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್’ ಕೂಡ ತನ್ನದೇ ಆದ ಪಾತ್ರ ನಿರ್ವಹಿಸುತ್ತಿದೆ. ರಾಜ್ಯದ ಯಾವುದೇ ಭಾಗದಲ್ಲಿ ದಲಿತರು, ಮುಸ್ಲಿಮರು ಹಾಗೂ ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ನಡೆದಾಗ ತ್ವರಿತವಾಗಿ ಸ್ಪಂದಿಸಿ, ಸಂತ್ರಸ್ತರ ಪರವಾಗಿ ಧ್ವನಿ ಎತ್ತುವುದು ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.ಈಗಾಗಲೇ ನಡೆದ ರಾಜ್ಯಮಟ್ಟದ ಸಭೆಯಲ್ಲಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮತೀನ್ ಕುಮಾರ್ ಅವರ ನೇತೃತ್ವದಲ್ಲಿ ವಿವಿಧ ಜಿಲ್ಲೆಗಳ ಯುವ ಮುಖಂಡರು ಒಂದಾಗಿ ‘ಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು’ ಎಂಬ ಸಂಕಲ್ಪದೊಂದಿಗೆ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್‌ಗೆ ಚಾಲನೆ ನೀಡಿದರು. ಕಳೆದ ಮೂರು ವರ್ಷಗಳಲ್ಲಿ ಸಂಘಟನೆಯು ಸಾಮಾಜಿಕ ನ್ಯಾಯ, ದೌರ್ಜನ್ಯ ವಿರೋಧಿ ಹೋರಾಟ ಹಾಗೂ ಸಮುದಾಯದ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಹಲವು ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದೆ ಎಂದರು. ಇದುವರೆಗೆ ಸಂಘಟನೆಯ ವಾರ್ಷಿಕೋತ್ಸವವನ್ನು ಸ್ಥಳೀಯ ಮಟ್ಟದಲ್ಲಿ ಸರಳವಾಗಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ಮೂರನೇ ವರ್ಷದ ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ಸ್ವರೂಪ ನೀಡಲಾಗಿದ್ದು, ‘ಭೀಮ್ ಆರ್ಮಿ ಸಂಸ್ಥಾಪನಾ ದಿನ’ ಎಂಬ ಪರಿಕಲ್ಪನೆಯೊಂದಿಗೆ ಹಾಸನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಇದು ಸಂಘಟನೆಯ ಮುಂದಿನ ಹೋರಾಟದ ದಿಕ್ಕನ್ನು ನಿರ್ಧರಿಸುವ ವೇದಿಕೆಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮರಿ ಮೊಮ್ಮಗ ಅಮನ್ ಆನಂದ್ ರಾಜ್ ಅಂಬೇಡ್ಕರ್ ಭಾಗವಹಿಸಲಿದ್ದಾರೆ. ಅಂಬೇಡ್ಕರ್ ಕುಟುಂಬದ ಕುಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಸಂಘಟನೆ ಹಾಗೂ ಹಾಸನ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಚಿವರು, ಶಾಸಕರು, ದಲಿತಪರ ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು, ಮುಸ್ಲಿಂ ಸಮುದಾಯದ ಮುಖಂಡರು, ರೈತಪರ ಸಂಘಟನೆಗಳ ಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಮಾನತೆಗಾಗಿ ಕೆಲಸ ಮಾಡುತ್ತಿರುವ ಎಲ್ಲ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು, ಅಂಬೇಡ್ಕರ್ ಅನುಯಾಯಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಪಾಧ್ಯಕ್ಷ ನವೀನ್ ಸಾಲಗಾಮೆ, ಜಿಲ್ಲಾ ಸಂಚಾಲಕ ಮಂಜುನಾಥ ಎಂ.ಸಿ., ಜಿಲ್ಲಾ ಕಾರ್ಯಾಧ್ಯಕ್ಷ ಜಗದೀಶ್ ನಿಡನೂರು, ಹಾಸನ ತಾಲೂಕು ಅಧ್ಯಕ್ಷ ಹೇಮಂತ್ ಡಿ.ಕೆ., ಆಲೂರು ತಾಲೂಕು ಅಧ್ಯಕ್ಷ ನವೀನ್ ಕಾರ್ಜುವಳ್ಳಿ, ಪ್ರತಾಪ್, ಉಪಾಧ್ಯಕ್ಷ ಧರ್ಮೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.