ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಭೀಮಾ ಕೋರೆಗಾಂವನಲ್ಲಿ ೫೦೦ ಮಹರ್ ಸೈನಿಕರು ಆಹಾರ, ನೀರು ಹಾಗೂ ವಿಶ್ರಾಂತಿ ಇಲ್ಲದೆ ೨೮ ಸಾವಿರ ಪೇಶ್ವೆ ಸೈನ್ಯ ಬಲದ ವಿರುದ್ದ ನಿರಂತರ ೧೨ ಗಂಟೆಗಳ ಕಾಲ ಹೋರಾಡಿದ ಸ್ಮರಣೀಯ ಕದನವಾಗಿದೆ ಎಂದು ಉಪನ್ಯಾಸಕ ನರಸಪ್ಪ ಚಿನ್ನಾಕಟ್ಟಿ ಹೇಳಿದರು.ಪಟ್ಟಣದ ಬುದ್ಧ ವಿಹಾರದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ, ಮಾಜಿ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್ ಅವರ ೫೦ನೇ ಜನ್ಮದಿನದ ನಿಮಿತ್ತ ಸಿದ್ದಾರ್ಥ್ ಬಯಲು ಗ್ರಂಥಾಲಯದ ಉದ್ಘಾಟನಾ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ೧೮೧೮ ರಲ್ಲಿ ನಡೆದ ಕೋರೆಗಾಂವ ಯುದ್ದದಲ್ಲಿ ಜಯ ತಂದುಕೊಟ್ಟು ಮಡಿದ ಮಹರ್ ಸೈನಿಕರ ಸ್ಮರಣಾರ್ಥ ೧೮೨೧ ರಲ್ಲಿ ಶಿಲಾಸ್ಮಾರಕ ನಿರ್ಮಾಣ ಮಾಡಲಾಗಿದೆ ಹೀಗಾಗಿ ಇಂದಿನ ಯುವಕರು ಭೀಮಾ ಕೋರೆಗಾಂವ್ ಯುದ್ದದ ಇತಿಹಾಸವನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಬಯಲು ಗ್ರಂಥಾಲಯದ ಉದ್ಘಾಟನೆ ನೆರವೇರಿಸಿದ ನಾಗಾವಿ ಸಾಹಿತ್ಯ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಕಾಶಿನಾಥ ಗುತ್ತೇದಾರ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಜನ್ಮದಿನದ ನೆಪದಲ್ಲಿ ಅನೇಕರು ಅನಾವಶ್ಯಕ ಹಣ ಖರ್ಚು ಮಾಡುತ್ತಾರೆ, ಆದರೆ ಬೆಣ್ಣೂರಕರ್ ಅವರು ತಮ್ಮ ಜನ್ಮ ದಿನದ ನಿಮಿತ್ತ ಬಯಲು ಗ್ರಂಥಾಲಯದ ಆರಂಭ ಮಾಡುವ ಮೂಲಕ ಜ್ಞಾನದಾಸೋಹ ಮಾಡಿದ್ದಾರೆ ಇದು ಈಡೀ ಜಿಲ್ಲೆಗೆ ಮಾದರಿ ಕಾರ್ಯ ಎಂದು ಬಣ್ಣಿಸಿದರು.ಒಂದು ದೇವಸ್ಥಾನ ಕಟ್ಟಿದರೆ ನೂರಾರು ಭೀಕ್ಷುಕರು ಹುಟ್ಟುತ್ತಾರೆ, ಒಂದು ಗ್ರಂಥಾಲಯ ಕಟ್ಟಿದರೆ ನೂರಾರು ವಿದ್ವಾಂಸರು ಹುಟ್ಟುತ್ತಾರೆ ಎಂದು ಹೇಳಿದ ಬಿ.ಆರ್.ಅಂಬೇಡ್ಕರ್ ಅವರ ಮಾತು ಪ್ರಸ್ತುತ. ಹೀಗಾಗಿ ಮೈಮೇಲೆ ಹರಕು ಬಟ್ಟೆಯಿದ್ದರೂ ಪರವಾಗಿಲ್ಲ ಕೈಯಲ್ಲೊಂದು ಪುಸ್ತಕ ಇರಬೇಕು ಈ ನಿಟ್ಟಿನಲ್ಲಿ ಹಿರಿಯರು, ಪಾಲಕರು ಮಕ್ಕಳಿಗೆ ಓದುವ ಆಸಕ್ತಿ ಮೂಡಿಸಿ ಅವರಿಗೆ ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು.
ಪುರಸಭೆ ಪ್ರತಿಪಕ್ಷ ನಾಯಕ ನಾಗರಾಜ ಭಂಕಲಗಿ ಮಾತನಾಡಿ, ಎರಡು ಪತ್ರಿಕೆಗಳಿಗೆೆ ಒಂದು ವರ್ಷಕ್ಕೆ ತಗಲುವ ಖರ್ಚು ನೀಡುತ್ತೇನೆ ಮತ್ತು ದಿಗ್ಗಾಂವ ಗ್ರಾಪಂ ಅಧ್ಯಕ್ಷ ಹರಳಯ್ಯ ಬಡಿಗೇರ್ ಮಾತನಾಡಿ, ಗ್ರಂಥಾಲಯಕ್ಕೆ ೫೦ ಕುರ್ಚಿಗಳು ಹಾಗೂ ೧೦ ಸಾವಿರ ಮೌಲ್ಯದ ಪುಸ್ತಕಗಳನ್ನು ದೇಣಿಗೆಯಾಗಿ ನೀಡುತ್ತೇನೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ ಜಿಪಂ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ್, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ಹೊಸಳ್ಳಿ, ಪತ್ರಕರ್ತ ನಾಗಯ್ಯಸ್ವಾಮಿ ಅಲ್ಲೂರ ಮಾತನಾಡಿದರು. ಈಡಿಗ ಸಮಾಜದ ತಾಲೂಕು ಅಧ್ಯಕ್ಷ ನಾಗಯ್ಯ ಗುತ್ತೇದಾರ, ಕುಂಬಾರ ಸಮಾಜದ ಅಧ್ಯಕ್ಷ ಪ್ರಭು ಕುಂಬಾರ, ಭೀಮಾಶಂಕರ ದಂಡೆ, ಮಹೇಂದ್ರ ಪೂಜಾರಿ, ವಿರೇಶ ಹಿರೇಮಠ, ನಾಗೇಂದ್ರ ಬುರ್ಲಿ, ರಾಜಪ್ಪ ಹುಂಡೇಕಾರ, ಶಿವಮೂರ್ತಿ ಯರಗಲ್, ಬಸವರಾಜ ಮೂಡಬೂಳ ಕೆಇಬಿ, ದೇಸಾಯಿ ಕದ್ದರಗಿ, ದೇವಿದಾಸ ಔರಸಂಗ್, ಚನ್ನಬಸಪ್ಪ ಭಂಗಿ, ಶರಣು ದಂಡೋತಿ, ಅಂಬರೀಶ್, ಸುನೀಲ್ ವಾಡಿ, ಸಿದ್ದಾರ್ಥ ರಾವೂರ, ಈಶ್ವರ ರಾವೂರ, ಮಲ್ಲಿಕಾರ್ಜುನ ಪೂಜಾರಿ, ಅನಂತನಾಗ ದೇಶಪಾಂಡೆ, ಸಂತೋಷಕುಮಾರ ಕಟ್ಟಿಮನಿ, ಸಂಗು ಯರಗಲ್, ಸುಭಾಷ ಕಲ್ಮರಿ, ಬಾಬು ಕರದಾಳ, ಶಾಮರಾಯ ಪಾಮನೂರ ಇತರರು ಇದ್ದರು. ಸಂದೀಪ ಕಟ್ಟಿ ವಾಡಿ ಬುದ್ಧ ವಂದನೆ ಸಲ್ಲಿಸಿದರು, ನಾಗರಾಜ ಓಂಕಾರ್ ಸ್ವಾಗತಿಸಿದರು, ಆನಂದ ಕಲ್ಲಕ್ ನಿರೂಪಿಸಿದರು, ದೇವಿಂದ್ರ ಕುಮಸಿ ವಂದಿಸಿದರು.