ಭೀಮಾ ಕೋರೆಗಾಂವ್ ಯುದ್ಧದ 6ನೇ ವರ್ಷದ ವಿಜಯೋತ್ಸವನ್ನು ನಗರದ ಬೂದಾಳ್ ರಸ್ತೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭೀಮಾ ಕೋರೆಗಾಂವ್ ಯುದ್ಧದ 6ನೇ ವರ್ಷದ ವಿಜಯೋತ್ಸವನ್ನು ನಗರದ ಬೂದಾಳ್ ರಸ್ತೆಯ ಭೀಮಾ ಕೋರೆಗಾಂವ್ ವಿಜಯೋತ್ಸವ ಸಮಿತಿಯಿಂದ ಆಚರಿಸಲಾಯಿತು.

ಇಲ್ಲಿನ ಬೂದಾಳ್ ರಸ್ತೆಯ ರಿಂಗ್ ರೋಡ್‌ನಲ್ಲಿ ಭೀಮಾ ಕೋರೆಗಾಂವ್‌ ವಿಜಯೋತ್ಸವ ಸಮಿತಿ ನೇತೃತ್ವದಲ್ಲಿ ಜಯಘೋಷಗಳನ್ನು ಮೊಳಗಿಸುವ ಮೂಲಕ ಪದಾಧಿಕಾರಿಗಳು, ಸದಸ್ಯರು ವಿಜಯೋತ್ಸವ ಸ್ಮರಿಸಿದರು.

ಇದೇ ವೇಳೆ ಮಾತನಾಡಿದ ಸಮಿತಿ ಮುಖಂಡರು, 1818ರ ಜ.1ರಂದು ಪುಣೆ ಪಕ್ಕದಲ್ಲಿ ಹರಿಯುವ ಭೀಮಾ ನದಿ ದಂಡೆಯ ಮೇಲೆ ನಡೆದ ಯುದ್ಧವು ಇಂದಿಗೂ ಮನುವಾದಿಗಳ ಮತ್ತು ಶೋಷಿತ ಸಮುದಾಯಗಳ ನಡುವಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿಯೂ ಸಂಘರ್ಷ ಮುಂದುವರಿಯಲು ಪ್ರೇರಣೆಯಾಗಿದೆ. ಆ ಯುದ್ಧವು ನಮ್ಮೆಲ್ಲರ ಸ್ವಾಭಿಮಾನ, ಸಮಾನ ಹಕ್ಕುಗಳ ಬದುಕಿಗಾಗಿ ತಮ್ಮ ಪ್ರಾಣ‍ವನ್ನೇ ಅರ್ಪಿಸಿದ ಯೋಧರ ತ್ಯಾಗ, ಬಲದಾನದ ಪ್ರತೀಕವಾಗಿದೆ ಎಂದರು.

ಮಹಾರಾಷ್ಟ್ರದ 500 ಮಹರ್ ಸೇನಾನಿಗಳು ಜಾತೀಯತೆ, ವರ್ಣಾಶ್ರಮ ಪದ್ಧತಿ, ಅಸಮಾನತೆಯ ಪ್ರತಿಪಾದಕ 2ನೇ ಬಾಜಿರಾವ್‌ ಪೇಶ್ವೆಯ 28 ಸಾವಿರ ಸುಸಜ್ಜಿತ ಸೇನೆಯ ನಡೆದ ಯುದ್ಧವಾಗಿದೆ. ಯುದ್ಧದ ಹಿರಿಮೆ, ಕುರುಹುಗಳನ್ನು ಪುಣೆಯ ಪಕ್ಕದಲ್ಲಿ ಹರಿಯುವ ಭೀಮಾ ನದಿ ದಂಡೆಯ ಮೇಲೆ ನಿರ್ಮಿಸಿರುವ 72 ಅಡಿ ಸ್ತೂಪದ ಮೇಲೆ ಕೆತ್ತಲಾಗಿದೆ. ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇದು ಜಾತಿ ವ್ಯವಸ್ಥೆಯಲ್ಲಿ ನಲುಗಿ ಹೋಗಿದ್ದ ಶೋಷಿತ ಸಮುದಾಯ ಶೌರ್ಯದಿಂದ ಗೆದ್ದ ಮಹಾನ್ ಹೋರಾಟವಾಗಿದೆ ಎಂದು ತಿಳಿಸಿದರು.

ಶೋಷಿತ ಸಮುದಾಯ ಶೌರ್ಯದಿಂದ ಗೆದ್ದ ಮಹಾನ್ ಹೋರಾಟವದ ಫಲವಾಗಿ ಮುಂದುವರಿದು 1935ರಲ್ಲಿ ಭಾರತದಲ್ಲಿ ಮೆಕಾಲೆಯವರ ಸಾರ್ವತ್ರಿಕ ಶಿಕ್ಷಣ ನೀತಿ ಜಾರಿಗೆ ಬಂದಿತು. ಕೇವಲ ಸಂಸ್ಕೃತದಲ್ಲಿ ನೀಡುತ್ತಿದ್ದ ಶಿಕ್ಷಣವನ್ನು ಧಿಕ್ಕರಿಸಿ, ಮೊದಲ ಬಾರಿಗೆ ಮಹಾತ್ಮ ಜ್ಯೋತಿ ಬಾಫುಲೆ ಮೆಟ್ರಿಕ್ಯುಲೇಷನ್‌ನಲ್ಲಿ ಉತ್ತೀರ್ಣರಾದ ಮೊದಲಿಗರಾದರು. ನಂತರ ಸಾವಿತ್ರಿ ಬಾಫುಲೆ ಸಾರಥ್ಯದಲ್ಲಿ ಮಹಿಳೆಯರಿಗಾಗಿ ಶಾಲೆಗಳನ್ನು ಆರಂಭಿಸಿದರು. ಅಂಬೇಡ್ಕರ್‌ ಹೇಳಿದ ಮಾತನ್ನು ನಾವ್ಯಾರೂ ಮರೆಯಬಾರದು, ಮರೆತು, ಮಲಗಬಾರದು ಎಂದು ಹೇಳಿದರು.

ಬಾಬಾ ಸಾಹೇಬ್ ಅಂಬೇಡ್ಕರ್‌ರಿಗೆ ಬಾಲ್ಯದಲ್ಲಿ ಶಿಕ್ಷಣ ದೊರೆಯಲು ಸಹ ಸಾರ್ವತ್ರಿಕ ಶಿಕ್ಷಣ ವ್ಯವಸ್ಥೆ ಪ್ರೇರಣೆಯಾಯಿತು. ಅಂಬೇಡ್ಕರ್ ಅತ್ಯಂತ ಉನ್ನತ ಶಿಕ್ಷಣ ಪಡೆಯಲು ಇದು ಕಾರಣವೂ ಆಯಿತು. ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಗ್ರಂಥಾಲಯದ ಒಂದು ಪುಸ್ತಕದಲ್ಲಿ 1818ರ ಕೋರೆಗಾಂವ್ ಯುದ್ಧದ ಕುರುಹು ಸಿಕ್ಕಿತು. ಅಂದಿನಿಂದ ಇಂದಿನವರೆಗೂ ಭೀಮಾ ಕೋರೆಗಾಂವ್ ಅವಿಸ್ಮರಣೀಯ ದಿನ ಎಂದು ತಿಳಿಸಿದರು.

ಸಮಿತಿ ಮುಖಂಡರಾದ ಅಷ್ಫಾಕ್‌, ಸತೀಶ ಅರವಿಂದ ಆದಿಲ್ ಖಾನ್, ಜಾಫರ್, ಚಂದ್ರು, ಬಸಣ್ಣ, ಸಮೀರ್‌, ಯಲ್ಲಪ್ಪ, ಶಿವು, ಶಿವಕುಮಾರ, ಹನುಮಂತಪ್ಪ, ರಾಮಾಂಜನೇಯ, ಬಾಷಾ, ಮಲ್ಲಪ್ಪ ಇತರರು ಇದ್ದರು.