ಸಾರಾಂಶ
ಬಳ್ಳಾರಿ: ಬಳ್ಳಾರಿಯಲ್ಲಿ ಸ್ಥಾಪನೆಯಾಗಬೇಕಿರುವ ಮೆಗಾ ಡೇರಿಯನ್ನು ವಿಜಯನಗರ ಜಿಲ್ಲೆಯಲ್ಲಿ ಸ್ಥಾಪಿಸಲು ಮಾಜಿ ಶಾಸಕ ಭೀಮಾನಾಯ್ಕ ಹುನ್ನಾರ ನಡೆಸಿದ್ದು, ಎರಡು ಜಿಲ್ಲೆಗಳ ನಡುವೆ ವೈಷ್ಯಮ್ಯ ಮೂಡಿಸುವ ಕೀಳು ರಾಜಕೀಯ ಮಾಡುತ್ತಿದ್ದಾರೆ ಎಂದು ವಿಪ ಸದಸ್ಯ ವೈ.ಎಂ. ಸತೀಶ್ ಹಾಗೂ ರಾಬಕೊ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಎಚ್. ಹನುಮಂತಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮಾನಾಯ್ಕ ಸಹಕಾರ ಕ್ಷೇತ್ರದಲ್ಲೂ ರಾಜಕೀಯ ಮಾಡಲು ಹೊರಟಿದ್ದಾರೆ. ಈ ಮೂಲಕ ಎರಡು ಜಿಲ್ಲೆಗಳ ನಡುವೆ ವೈಷ್ಯಮ್ಯ ಮೂಡಿಸಲು ಅತ್ಯಂತ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ. ಮೆಗಾ ಡೇರಿ ಸ್ಥಾಪಿಸಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳಿಂದ ಹೋರಾಟ ಮಾಡಿಸಿದ್ದಾರೆ. ಭೀಮಾ ನಾಯ್ಕ ಮೆಗಾಡೇರಿ ಜತೆ ರಾಬಕೊವಿ ಹಾಲು ಒಕ್ಕೂಟವನ್ನು ಸಹ ವಿಜಯನಗರ ಜಿಲ್ಲೆಗೆ ಸ್ಥಳಾಂತರಿಸುವ ದುರುದ್ದೇಶ ಹೊಂದಿದ್ದಾರೆ. ಆದರೆ, ಅವರ ರಾಜಕೀಯ ಹುನ್ನಾರ ಸಫಲವಾಗುವುದಿಲ್ಲ. ಯಾವುದೇ ಕಾರಣಕ್ಕೂ ಮೆಗಾ ಡೇರಿ ಬಳ್ಳಾರಿಯಿಂದ ವಿಜಯನಗರ ಸ್ಥಳಾಂತರವಾಗಲು ಬಿಡುವುದಿಲ್ಲ ಎಂದು ತಿಳಿಸಿದರು.ಜಡ್ಡುಹಿಡಿದ ಆಡಳಿತದಿಂದ ನಷ್ಟ: ಜಿ. ಸೋಮಶೇಖರ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ದ ವೇಳೆ ಬಳ್ಳಾರಿ ಜಿಲ್ಲೆಯಲ್ಲಿ ಮೆಗಾಡೇರಿ ಸ್ಥಾಪನೆಯ ನಿರ್ಧಾರ ಕೈಗೊಳ್ಳಲಾಯಿತು. ಈ ಸಂಬಂಧ ಕೊಳಗಲ್ಲು ಬಳಿ ಜಮೀನು ಸಹ ಗುರುತಿಸಲಾಗಿದೆ. ಹೀಗಿರುವಾಗ ಭೀಮಾನಾಯ್ಕ ಅದ್ಹೇಗೆ ವಿಜಯನಗರ ಜಿಲ್ಲೆಯಲ್ಲಿ ಮೆಗಾಡೇರಿ ಸ್ಥಾಪಿಸುತ್ತಾರೆ? ಎಂದು ಪ್ರಶ್ನಿಸಿದ ಬಿಜೆಪಿ ನಾಯಕರು, ಅವರಿಗೆ ಬೇಕಾದರೆ ಹೊಸಪೇಟೆಯಲ್ಲಿ ಮತ್ತೊಂದು ಮೆಗಾಡೇರಿ ಸ್ಥಾಪಿಸಿಕೊಳ್ಳಲಿ ಎಂದರು.
ವಿಜಯನಗರ ಜಿಲ್ಲೆಗೆ ಹೋಲಿಸಿದರೆ ಬಳ್ಳಾರಿ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಕಡಿಮೆಯಿದೆ. ಹೀಗಾಗಿ ವಿಜಯನಗರ ಜಿಲ್ಲೆಯಲ್ಲಿ ಮೆಗಾಡೇರಿ ಸ್ಥಾಪಿಸುವುದಾಗಿ ಭೀಮಾನಾಯ್ಕ ಪ್ರತಿಪಾದಿಸುತ್ತಾರೆ. ಆದರೆ, ಈ ಜಿಲ್ಲೆಯ ಹಾಲು ಉತ್ಪಾದನೆ ಕುಂಟಿತಗೊಳ್ಳಲು ಕಾರಣ ಯಾರು? ಇಲ್ಲಿನ ಆಡಳಿತ ಮಂಡಳಿ ಕಾರ್ಯವೈಖರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯತೆಯೇ ಕಾರಣವೇ ಹೊರತು, ಈ ಭಾಗದ ಹಾಲು ಉತ್ಪಾದಕರ ಸಮಸ್ಯೆಯಲ್ಲ. ಒಕ್ಕೂಟದಲ್ಲಿನ ಜಡ್ಡುಹಿಡಿದ ಆಡಳಿತ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಒಕ್ಕೂಟ ನಷ್ಟಕ್ಕೊಳಗಾಗಿದೆ. ಕಳೆದ 2024ರ ಡಿ.18ರಂದು ಕೇಂದ್ರೀಯ ಜಾಗೃತ ದಳದ ಅಧಿಕಾರಿಗಳು ಭೇಟಿ ನೀಡಿದ ವೇಳೆ ಹಾಲು ಒಕ್ಕೂಟದ ಜಿಲ್ಲೆಗಳು, ಸಹಕಾರ ಸಂಘಗಳು, ಶಿಥಿಲೀಕರಣ ಕೇಂದ್ರಗಳು ಹಾಗೂ ಮಾರುಕಟ್ಟೆಯಲ್ಲಿ ಕಂಡು ಬಂದಿರುವ ದೋಷ ಪತ್ತೆ ಹಚ್ಚಿದ್ದಾರೆ. ಬಳ್ಳಾರಿಡೇರಿ ಸೇರಿದಂತೆ ಒಕ್ಕೂಟದಲ್ಲಿನ ಅವ್ಯವಸ್ಥೆ, ಹಾಲು ಸ್ವೀಕರಣೆ ಸಮಯದಲ್ಲಿ ಗುಣ ನಿಯಂತ್ರಣ ಇಲ್ಲದಿರುವುದು, ಒಕ್ಕೂಟದ ಜಿಲ್ಲೆಗಳಲ್ಲಿನ ಅವ್ಯವಸ್ಥೆ, ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಸುಮಾರು 50ಕ್ಕೂ ಹೆಚ್ಚಿನ ಅಂಶಗಳನ್ನು ತೆರೆದಿಟ್ಟಿದ್ದು, ಇದು ಒಕ್ಕೂಟದ ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ. ಒಕ್ಕೂಟದ ಇಡೀ ಆಡಳಿತ ವ್ಯವಸ್ಥೆಯ ಲೋಪದಿಂದ ಈ ಭಾಗದ ಹಾಲು ಉತ್ಪಾದಕರು ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಭೀಮಾನಾಯ್ಕ ಏನು ಹೇಳುತ್ತಾರೆ? ವಿಜಯನಗರ ಜಿಲ್ಲೆಗಿಂತಲೂ ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚು ಹಾಲು ಮಾರಾಟವಾಗುತ್ತಿದೆ. ಹಾಲಿನ ಜತೆಗೆ ಇತರೆ ಹಾಲು ಉತ್ಪನ್ನಗಳು ಸಹ ಬಳ್ಳಾರಿ ಜಿಲ್ಲೆಯಲ್ಲಿಯೇ ಹೆಚ್ಚಾಗಿ ಮಾರುಕಟ್ಟೆಯಿದ್ದು, ಇದನ್ನು ಭೀಮಾನಾಯ್ಕ ಅರ್ಥ ಮಾಡಿಕೊಳ್ಳಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಒಕ್ಕೂಟ ಸೂಕ್ತ ತನಿಖೆಗೆ ಆಗ್ರಹ:ಒಕ್ಕೂಟದ ಜಿಲ್ಲೆಗಳ ಹಾಲು ಉತ್ಪಾದಕರಿಂದ ಪ್ರತಿ ಲೀಟರ್‌ಗೆ ₹1.50 ರು.ಗಳಷ್ಟು ಕಡಿತ ಮಾಡಲಾಗಿದೆ. 2024ರ ಸೆ. 1ರಿಂದಲೇ ಹಾಲಿನ ದರ ಕಡಿತವಾಗಿದ್ದು, ಈ ಕುರಿತು 2024ರ ಆ. 29ರಂದು ಬೋರ್ಡ್ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಚ್ಚರಿ ಸಂಗತಿ ಎಂದರೆ 2024ರ ಮೇ 15ಕ್ಕೆ ಬೋರ್ಡ್ ಅಧಿಕಾರ ಅವಧಿ ಮುಗಿದಿತ್ತು. 2024ರ ಜೂ.5ರಂದು ರಾಜ್ಯ ಸರ್ಕಾರದ ಆದೇಶದಲ್ಲಿ ಹೊಸ ಬೋರ್ಡ್ ರಚನೆಯಾಗುವವರೆಗೆ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದು ಸೂಚಿಸಿದೆ. ಆದರೆ, ರೈತರಿಂದ ಪ್ರತಿ ಲೀಟರ್‌ಗೆ ₹1.50 ರು. ಕಡಿತಗೊಳಿಸುವುದು ಪ್ರಮುಖ ನಿರ್ಧಾರವಲ್ಲವೇ? ಎಂದು ಪ್ರಶ್ನಿಸಿದರು.
ಒಕ್ಕೂಟದಲ್ಲಿ ಭಾರೀ ಅವ್ಯವಹಾರ ನಡೆದಿರುವ ಶಂಕೆಯಿದೆ. ಹಾಲು ಉತ್ಪಾದನೆ ಇಳಿಕೆಯಾಗಲು ಅಧಿಕಾರಿಗಳ ಶಾಮೀಲಿದೆ ಎಂಬ ಗುಮಾನಿಯಿದ್ದು ಸಮಗ್ರ ತನಿಖೆಯಾಗಬೇಕು. ಈ ಸಂಬಂಧ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಭೇಟಿ ಮಾಡಿ ತನಿಖೆಗೆ ಒಳಪಡಿಸಲಾಗುವುದು. ಒಕ್ಕೂಟದಲ್ಲಾಗಿರುವ ಅವಾಂತರವನ್ನು ಹೊರ ಹಾಕಲಾಗುವುದು ಎಂದು ತಿಳಿಸಿದರು. ಪಕ್ಷದ ಮುಖಂಡರಾದ ವೀರಶೇಖರ ರೆಡ್ಡಿ, ವೆಂಕಟೇಶ್, ಕೆ.ಎಸ್.ಅಶೋಕ್ ಸುದ್ದಿಗೋಷ್ಠಿಯಲ್ಲಿದ್ದರು.