ಸಾರಾಂಶ
ಮೇಲ್ಮನೆ ಸದಸ್ಯ ಕೆ.ಎಸ್.ನವೀನ್ ಮಾಹಿತಿ । ಹಿರಿಯೂರು, ಚಿತ್ರದುರ್ಗ, ಭರಮಸಾಗರದಲ್ಲಿ ಸಭೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಡಾ.ಬಿ.ಆರ್.ಅಂಬೇಡ್ಕರ್ ಅವರು 1925ರ ಏ.10 ಮತ್ತು 11ರಂದು ದಲಿತರ ಉದ್ಧಾರಕ್ಕಾಗಿ ಹಮ್ಮಿಕೊಂಡಿದ್ದ ಬಹಿಷ್ಕೃತ ಹಿತ ಕಾರ್ಯಕಾರಿಣಿ ಸಭೆಗೆ ನೂರು ವರ್ಷ ಸಂದ ಹಿನ್ನಲೆಯಲ್ಲಿ ಅದರ ಸವಿ ನೆನಪಿಗಾಗಿ ಬಿಜೆಪಿ ವತಿಯಿಂದ ಭೀಮನ ಹೆಜ್ಜೆ ನೂರರ ಸಂಭ್ರಮ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಏ.11 ರಿಂದ 15ರವರೆಗೆ ರಾಜ್ಯದಲ್ಲಿ ಸಂಚಾರ ಮಾಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ದಲಿತರ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದ ನಿಪ್ಪಾಣಿಯಲ್ಲಿ 1925ರಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಈ ಕಾರ್ಯಕ್ರಮದ ನಿಮಿತ್ತ ಕರ್ನಾಟಕದ 10 ಜಿಲ್ಲೆಗಳಲ್ಲಿ ಅಂಬೇಡ್ಕರ್ ಅವರು ಸಂಚಾರ ನಡೆಸಿದರು.ಸವಿ ನೆನಪಿಗಾಗಿ ಬಿಜೆಪಿ ವತಿಯಿಂದ ಅಂಬೇಡ್ಕರ್ ಅವರ ಸ್ಮಾರಕಗಳನ್ನು ನಿರ್ಮಿಸಿ ಅವರ ತತ್ವಗಳನ್ನು ಇಂದಿನ ಯುವ ಪೀಳಿಗೆಗೆ ಸಾರಲು ತೀರ್ಮಾನಿಸಲಾಗಿದೆ. ಇದೇ ತಿಂಗಳ 11ರಂದು ವಿಧಾನ ಸೌಧದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರಥಯಾತ್ರೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದರು.
ಅಂದು ಮಧ್ಯಾಹ್ನ 2:30 ಸುಮಾರಿಗೆ ಹಿರಿಯೂರಿನ ಜವನನಗೊಂಡನಹಳ್ಳಿಗೆ ರಥಯಾತ್ರೆ ಆಗಮಿಸಲಿದ್ದು ಬಿಜೆಪಿ ಜಿಲ್ಲಾ ಘಟಕದವತಿಯಿಂದ ಅದ್ದೂರಿಯಾಗಿ ಬರಮಾಡಿಕೊಳ್ಳಲಾಗುವುದು. ಹಿರಿಯೂರು, ಚಿತ್ರದುರ್ಗ, ಭರಮಸಾಗರದಲ್ಲಿ ಸಭೆಗಳನ್ನು ಆಯೋಜಿಸಿದ್ದು ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಮಾಡಿರುವ ಅವಮಾನಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲಾಗುತ್ತದೆ ಎಂದರು.ಬೆಂಗಳೂರಿನ ವಿಧಾನಸೌಧ ಮುಂಭಾಗದಿಂದ ಹೊರಡುವ ರಥಯಾತ್ರೆ ನೆಲಮಂಗಲ, ಮಧುಗಿರಿ, ತುಮಕೂರು, ಚಿತ್ರದುರ್ಗ ದಾವಣಗೆರೆ ಹಾವೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮಾರ್ಗವಾಗಿ ನಿಪ್ಪಾಣಿಯನ್ನು ಏಪ್ರಿಲ್ 15ರಂದು ತಲುಪಲಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷ ನಾಯಕರು, ಈ ಶಾಸಕರು, ಮುಖಂಡರು, ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿ ಲಕ್ಷಾಂತರ ಜನರನ್ನು ಸೇರಿಸಿ, ಬಾಬಾಸಾಹೇಬ್ ಅಂಬೇಡ್ಕರ್ ಸಮಾವೇಶ ಮಾಡುವ ಮೂಲಕ ಅವರ ವಿಚಾರಧಾರೆ, ಆದರ್ಶಗಳನ್ನು ಇಂದಿನ ಜನಾಂಗಕ್ಕೆ ತಲುಪಿಸಲು ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ನೂರು ವರ್ಷಗಳ ಹಿಂದೆ ನಿಪ್ಪಾಣಿಯಲ್ಲಿ ನಡೆದ ಸಮಾವೇಶದಲ್ಲಿ ಅಂಬೇಡ್ಕರ್ ಅಸ್ಪೃಶ್ಯತೆ ನಿವಾರಣೆಗೆ ಶಿಕ್ಷಣದ ಅವಶ್ಯಕತೆ ಪ್ರತಿಪಾದಿಸಿ, ಹಾಸ್ಟೆಲ್‍ಗಳು ಮತ್ತು ವಸತಿ ಶಾಲೆಗಳಿಗೆ ಆದ್ಯತೆ ನೀಡಲು ತಿಳಿಸಿದ್ದರು. ದೇಶ, ರಾಜ್ಯದಲ್ಲಿ ಅತಿ ಹೆಚ್ಚಿನ ಅವಧಿಗೆ ಕಾಂಗ್ರೆಸ್ ಅಧಿಕಾರ ಚಲಾಯಿಸಿದೆ. ರಾಜ್ಯದಲ್ಲಿ 200 ಹಾಸ್ಟೆಲ್‍ಗಳು ಹಾಗೂ 100 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ. ಬೆಳಗಾವಿಯಲ್ಲಿ ಮಹಾತ್ಮಗಾಂಧಿ ಅಧ್ಯಕ್ಷತೆಯಲ್ಲಿ ಎಐಸಿಸಿ ಅಧಿವೇಶನ ನಡೆದು 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಮಾವೇಶ ಏರ್ಪಡಿಸಿತ್ತು. ಇದರಲ್ಲಿ ಅಂಬೇಡ್ಕರ್ ರವರ ಬಗ್ಗೆ ಯಾವ ಮಾತನ್ನು ಸಹಾ ಕಾಂಗ್ರೆಸ್ ಆಡಿಲ್ಲ, ಅಂಬೇಡ್ಕರ್ ರವರನ್ನು ಕಾಂಗ್ರೆಸ್ ಬರಿೀ ಮತ ಬ್ಯಾಂಕಿಗಾಗಿ ಉಪಯೋಗ ಮಾಡಿಕೊಳ್ಳುತ್ತಿದೆ. ಅವರ ವಿಚಾರವನ್ನು ಜನತೆಗ ಮುಟ್ಟಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತಿಲ್ಲ ಎಂದು ದೂರಿದರು.ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‍ಕುಮಾರ್, ಮುಖಂಡರಾದ ಮೋಹನ್, ರಘುಮೂರ್ತಿ, ವಕ್ತರರಾದ ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶಂಭು, ರವಿ, ಮಹಾಂತಣ್ಣ, ಇದ್ದರು.