ಭೀಮಗಡ ವನ್ಯಧಾಮ ಸ್ವಾಗತ ಕಮಾನು ಲೋಕಾರ್ಪಣೆ

| Published : May 18 2025, 01:07 AM IST

ಸಾರಾಂಶ

ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೀಮಗಡ ವನ್ಯಧಾಮಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ವಿಠ್ಠಲ ಹಲಗೇಕರ ಅವರು ತಾಲೂಕಿನ ಶಿರೋಲಿ ಗ್ರಾಮದ ಬಳಿ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಾಣಗೊಂಡ ಭೀಮಗಡ ವನ್ಯಧಾಮದ ಸ್ವಾಗತ ಕಮಾನನ್ನು ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಖಾನಾಪುರ

ಅರಣ್ಯ ಇಲಾಖೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೀಮಗಡ ವನ್ಯಧಾಮಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ವಿಠ್ಠಲ ಹಲಗೇಕರ ಅವರು ತಾಲೂಕಿನ ಶಿರೋಲಿ ಗ್ರಾಮದ ಬಳಿ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿಯಲ್ಲಿ ಅರಣ್ಯ ಇಲಾಖೆಯಿಂದ ನಿರ್ಮಾಣಗೊಂಡ ಭೀಮಗಡ ವನ್ಯಧಾಮದ ಸ್ವಾಗತ ಕಮಾನನ್ನು ಲೋಕಾರ್ಪಣೆಗೊಳಿಸಿದರು. ಎಸಿಎಫ್ ಸುನೀತಾ ನಿಂಬರಗಿ ಸ್ವಾಗತ ದ್ವಾರ ನಿರ್ಮಾಣದ ಉದ್ದೇಶ ಮತ್ತು ಭೀಮಗಡ ವನ್ಯಧಾಮದ ಪ್ರಾಮುಖ್ಯತೆಯನ್ನು ಸಚಿವರು ಮತ್ತು ಶಾಸಕರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ್, ಬೆಳಗಾವಿ ಎಸಿಎಫ್ ನಾಗರಾಜ ಬಾಳೆಹೊಸೂರ, ಆರ್‌ಎಫ್‌ಒಗಳಾದ ಶ್ರೀಕಾಂತ ಪಾಟೀಲ, ಮೃತ್ಯುಂಜಯ ಗಣಾಚಾರಿ, ವೈ.ಪಿ.ತೇಜ, ಶಿವಕುಮಾರ, ಸೈಯದ್‌ ನದಾಫ, ಪ್ರಶಾಂತ ಜೈನ, ಪಿಡಿಒ ಪ್ರಭಾಕರ ಭಟ್, ಡಿಆರ್‌ಎಫ್‌ಒ ಎಂ.ಜಿ.ನಂದೆಪ್ಪಗೋಳ, ಎಂ.ಬಿ.ಮುರಗೋಡ, ಅರಣ್ಯ ರಕ್ಷಕ ಮಂಜುನಾಥ ಕಟ್ಟಿ, ಮಹಾವೀರ ನಂದಗಾವಿ, ಕ್ಲಿಫರ್ಡ್ ಸೇರಿದಂತೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯರು, ಮತ್ತಿತರರು ಇದ್ದರು. ಸಚಿವರಿಗೆ ಗೋಚರಿಸಿದ ಕಾಡುಕೋಣಗಳು

ಸ್ವಾಗತ ದ್ವಾರ ಉದ್ಘಾಟಿಸಿ ಮುಂದೆ ಸಾಗಿದ ಸಚಿವರು ಮತ್ತು ಶಾಸಕರ ವಾಹನದ ಮುಂದಿನಿಂದ ಎರಡು ದೊಡ್ಡ ಗಾತ್ರದ ಕಾಡುಕೋಣಗಳು ರಸ್ತೆ ದಾಟಿ ಅರಣ್ಯದೊಳಗೆ ಹೋಗಿದ್ದು ವಿಶೇಷವಾಗಿತ್ತು. ಸಚಿವರು ಮತ್ತು ಶಾಸಕರು ವಾಹನಗಳನ್ನು ನಿಲ್ಲಿಸಿ ತಮ್ಮೆದುರಲ್ಲೇ ನಿಧಾನವಾಗಿ ಗಾಂಭೀರ್ಯ ನಡೆಯ ಮೂಲಕ ರಸ್ತೆ ದಾಟಿ ಅರಣ್ಯದೊಳಗೆ ತೆರಳಿದ ಕಾಡುಕೋಣಗಳನ್ನು ಕುತೂಹಲದಿಂದ ವೀಕ್ಷಿಸಿದರು. ವಿಶಿಷ್ಟ ಸಾಂಪ್ರದಾಯಿಕ ಶೈಲಿಯಲ್ಲಿ ಸಚಿವರನ್ನು ಸ್ವಾಗತಿಸಿದ ಕಲಾತಂಡಗಳು

ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭೀಮಗಡ ಪ್ರಕೃತಿ ಶಿಬಿರಕ್ಕೆ ಆಗಮಿಸಿದ ಸಚಿವರಾದ ಖಂಡ್ರೆ, ಜಾರಕಿಹೊಳಿ, ಶಾಸಕ ಹಲಗೇಕರ ಸೇರಿದಂತೆ ಗಣ್ಯರು ಮತ್ತು ಆಹ್ವಾನಿತರನ್ನು ಗೌಳಿ ಜನಾಂಗದ ಕಲಾವಿದರು ತಮ್ಮ ಸಾಂಪ್ರದಾಯಿಕ ಉಡುಗೆ-ತೊಡುಗೆ ಮತ್ತು ವಿಶಿಷ್ಟವಾದ ನೃತ್ಯದ ಮೂಲಕ ಸ್ವಾಗತಿಸಿದರು. ಕಲಾತಂಡಗಳು ಮುಖ್ಯ ರಸ್ತೆಯಿಂದ ಗಣ್ಯರನ್ನು ಬರಮಾಡಿಕೊಂಡು ವೇದಿಕೆಯವರೆಗೆ ಕರೆತಂದದ್ದು ವಿಶೇಷವಾಗಿತ್ತು.