ಸಾರಾಂಶ
ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮಖೋಲದಲ್ಲಿರುವ ಕೆರೆಯನ್ನು ಜಿಲ್ಲೆಯ ಪ್ರಮುಖ ಪ್ರವಾಸಿತಾಣವನ್ನಾಗಿ ಅಭಿವೃಧ್ದಿಗೊಳಿಸಲಾಗುವುದು
ಕಾರವಾರ: ಹಣಕೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೀಮಖೋಲದಲ್ಲಿರುವ ಕೆರೆಯನ್ನು ಜಿಲ್ಲೆಯ ಪ್ರಮುಖ ಪ್ರವಾಸಿತಾಣವನ್ನಾಗಿ ಅಭಿವೃಧ್ದಿಗೊಳಿಸಲಾಗುವುದು ಎಂದು ಎಂಸಿಎ ಅಧ್ಯಕ್ಷ ಹಾಗೂ ಶಾಸಕ ಸತೀಶ್ ಸೈಲ್ ಹೇಳಿದರು.
ಅವರು ಬುಧವಾರ, ಭೀಮಕೋಲದ ಕೆರೆಯಲ್ಲಿ ಜಲಸಾಹಸ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು.ಭೀಮಖೋಲದ ಕೆರೆಯನ್ನು ಜಿಪಂ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಮತ್ತು ಸಣ್ಣ ನೀರಾವರಿ ಇಲಾಖೆಗಳ ಮೂಲಕ ₹37 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೆರೆಯಲ್ಲಿ ಕಯಾಕಿಂಗ್, ಬೋಟಿಂಗ್ ಹಾಗೂ ತೂಗು ಸೇತುವೆ ನಿರ್ಮಾಣ ಮಾಡುವ ಮೂಲಕ ಪ್ರಮುಖ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಗೊಳಿಸಲಾಗುವುದು ಹಾಗೂ ಪ್ರವಾಸಿಗರು ಇಲ್ಲಿಗೆ ಆಗಮಿಸಲು ಉತ್ತಮ ರಸ್ತೆ ಸಂಪರ್ಕ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು.
ಭೀಮಖೋಲ ಕರೆಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಉದ್ದೇಶದಿಂದ ಕೆರೆಯ ಆಳವನ್ನು ವಿಸ್ತರಿಸುವ ಮೂಲಕ ಹೆಚ್ಚು ನೀರು ಸಂಗ್ರಹ ಮಾಡಲು ನಿರ್ಧರಿಸಲಿದೆ. ನಾಲ್ಕು ಕಡೆ ಬೆಟ್ಟದಿಂದ ಆವೃತ್ತವಾದ ಈ ಕೆರೆಯ ದೃಶ್ಯವು ರಮಣೀಯವಾಗಿದೆ. ಪ್ರವಾಸಿಗರ ನೆಚ್ಚಿನ ತಾಣವಾಗಲಿದೆ. ಈ ಕರೆಯಲ್ಲಿ ಪೆಡಲ್ ಬೋಟಿಂಗ್ ಮತ್ತು ಬೋಟಿಂಗ್ ಕೂಡ ಆರಂಭಿಸಲಾಗುವುದು. ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡಿ, ತಮ್ಮ ಪ್ರವಾಸವನ್ನು ಇನ್ನೂ ಹೆಚ್ಚು ಸ್ಮರಣೀಯವನ್ನಾಗಿ ಮಾಡಿಕೊಳ್ಳಬೇಕು ಎಂದರು.ಸಾಮಾಜಿಕ ಅರಣ್ಯ ವಿಭಾಗದ ಡಿಸಿಎಫ್ ಹಾಗೂ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಂಜುನಾಥ ನಾವಿ, ತಾಪಂ ಇಒ ವೀರನಗೌಡ ಏಗನಗೌಡರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಡಿ. ನಾಯ್ಕ್, ಹಣಕೋಣ ಗ್ರಾಪಂ ಅಧ್ಯಕ್ಷ ಶಾಂತಾರಾಮ್ ತಾಮ್ಸೆ ಇತರರು ಇದ್ದರು.