ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಚಪ್ಪಲಿ ಹಾಕದೇ ಬದ್ಧತೆಯ ಹೋರಾಟ ನಡೆಸಿದ್ದ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಅವರಿಲ್ಲದ ಜಿಲ್ಲೆಯಲ್ಲಿ ರೈತ-ಕಾರ್ಮಿಕ ಧ್ವನಿ ಕ್ಷೀಣಿಸಿದಂತಾಗಿದೆ. ಹೋರಾಟಕ್ಕೆ ಮತ್ತೊಂದು ಹೆಸರೇ ಭೀಮಶಿ ಕಲಾದಗಿ ಎಂಬಂತಾಗಿತ್ತು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ಚಪ್ಪಲಿ ಹಾಕದೇ ಬದ್ಧತೆಯ ಹೋರಾಟ ನಡೆಸಿದ್ದ ರೈತ-ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಅವರಿಲ್ಲದ ಜಿಲ್ಲೆಯಲ್ಲಿ ರೈತ-ಕಾರ್ಮಿಕ ಧ್ವನಿ ಕ್ಷೀಣಿಸಿದಂತಾಗಿದೆ. ಹೋರಾಟಕ್ಕೆ ಮತ್ತೊಂದು ಹೆಸರೇ ಭೀಮಶಿ ಕಲಾದಗಿ ಎಂಬಂತಾಗಿತ್ತು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ಇಂಡಿ ತಾಲೂಕಿನ ಹಂಜಗಿ ಗ್ರಾಮದ ತೋಟದ ವಸ್ತಿಯಲ್ಲಿ ರೈತ ಕಾರ್ಮಿಕ ನಾಯಕ ಭೀಮಶಿ ಕಲಾದಗಿ ಪುಣ್ಯಸ್ಮರಣೆ ಸಂದರ್ಭದಲ್ಲಿ ಭೀಮಶಿ ಪುತ್ಥಳಿ ಅನಾವರಣ ಮಾಡಿ ಮಾತನಾಡಿದರು. ನನ್ನೊಂದಿಗೆ ಸುದೀರ್ಘ 35 ವರ್ಷಗಳ ಒಡನಾಟ ಹೊಂದಿದ್ದರು. ಭೀಮಶಿ ಕಲಾದಗಿ ಹಲವು ಸಮಸ್ಯೆಗಳ ಪರಿಹಾರದ ವಿಷಯವಾಗಿ ನನ್ನೊಂದಿಗೆ ಚರ್ಚಿಸುತ್ತಿದ್ದರು. ಜಿಲ್ಲೆಯ ಸಮಗ್ರ ನೀರಾವರಿ ವಿಷಯವಾಗಿ ಅವರು ಚಪ್ಪಲಿ ಹಾಕದೇ ಬರಿಗಾಲಲ್ಲಿ ನಡೆಯುವ ಶಪಥ ಮಾಡಿದ್ದರು. ನೀರಾವರಿ ಯೋಜನೆ ಅನುಷ್ಠಾನದ ಬಳಿಕ ನಾನೇ ಅವರಿಗೆ ಚಪ್ಪಲಿ ಹಾಕುವ ಕುರಿತು ಮಾತನಾಡಿದ್ದೆ ಎಂದು ನೆನಪಿಸಿಕೊಂಡರು.

ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಷಯವಾಗಿ ಸಮಾಜಮುಖಿ ಹೋರಾಟದಲ್ಲೇ ತಮ್ಮನ್ನು ಸಂಪೂರ್ಣ ಸಮರ್ಪಿಸಿಕೊಂಡಿದ್ದ ಭೀಮಶಿ, ಸಮಾಜದ ಕುರಿತು ಹೊಂದಿದ್ದ ಕಾಳಜಿ ಅನುಕರಣೀಯ. ತಮ್ಮ ಹೋರಾಟದ ಹಾದಿಯಲ್ಲಿ ಕುಟುಂಬವನ್ನೂ ಲೆಕ್ಕಿಸದೇ ಹೋದಾಗ ಅವರ ಪತ್ನಿ, ಮಕ್ಕಳು ಸಂಘರ್ಷದ ಮೂಲಕವೇ ಬದುಕು ಕಟ್ಟಿಕೊಂಡ ಬಗೆಯೂ ಬಹುದೊಡ್ಡ ಹೋರಾಟದ ಹಾದಿ ಎಂದು ಸ್ಮರಿಸಿದರು.

ಭೀಮಶಿ ಕುಟುಂಬಕ್ಕೆ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಸಚಿವ ಎಂ.ಬಿ.ಪಾಟೀಲ ಅವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಹಾಂತೇಶ ಬಿರಾದಾರ ಮಾತನಾಡಿ, ಸಾಮಾಜಿಕ ಹೋರಾಟಗಳಿಂದ ದುಡಿಯುವ ವರ್ಗದ, ಬಡವರ ಪರವಾಗಿ ಜೀವನ ತೇಯ್ದ ವ್ಯಕ್ತಿ ಭೀಮಶಿ ಕಲಾದಗಿ ವಿಜಯಪುರ ಜಿಲ್ಲೆಗೆ ನೀಡಿದ ಕೊಡುಗೆ ಸ್ಮರಣಾರ್ಹ. ನಾನು ವಿದ್ಯಾರ್ಥಿ ಮುಖಂಡನಾಗಿದ್ದ ಸಂದರ್ಭದಲ್ಲಿ ನೀಲಗುಂದ ಶ್ರೀಗಳ ನೇತೃತ್ವದಲ್ಲಿ ನಡೆದ ಮುಳವಾಡ ಏತ ನೀರಾವರಿ ಹೋರಾಟ ಒಂದು ತಿಂಗಳಿಗೂ ಅಧಿಕ ಕಾಲ ಮುಂದುವರೆದಿತ್ತು. ಹೋರಾಟ ಜನಾಂದೋಲನದ ಸ್ವರೂಪ ಪಡೆದು, ಆಮರಣ ಉಪವಾಸದ ತೀವ್ರ ಸ್ವರೂಪ ಪಡೆಯುವ ಹಂತಕ್ಕೆ ಹೋಗಿದ್ದರಲ್ಲಿ ಭೀಮಶಿ ಕಲಾದಗಿ ಅವರ ಪಾತ್ರ ಬಹುಮುಖ್ಯವಾಗಿತ್ತು. ಅಂತಿಮವಾಗಿ ಈ ಹೋರಾಟಕ್ಕೆ ಮಣಿದ ಅಂದಿನ ಸರ್ಕಾರ ಹೋರಾಟಕ್ಕೆ ನೀರಾವರಿ ಯೋಜನೆ ಜಾರಿಗೊಂಡಿತ್ತು ಎಂದು ನೆನಪಿಸಿದರು.

ರೈತ ಮುಖಂಡರಾದ ಪಂಚಪ್ಪ ಕಲಬುರಗಿ, ಅಣ್ಣರಾಯ ಈಳಗೇರ, ಶ್ರೀಧರ ಕುಲಕರ್ಣಿ, ಮುಖಂಡರಾದ ವಿ.ಜಿ.ಕೆ.ನಾಯರ, ರಿಯಾಜ್ ಫಾರೂಕಿ, ಬಿ.ಡಿ.ಪಾಟೀಲ, ಮಲ್ಲಿಕಾರ್ಜುನ ಯಂಡಿಗೇರಿ, ಭೀಮರಾಯ ಪೂಜಾರಿ, ಅಪ್ಪಸಾಬ, ಟಿ.ಯಶವಂತ, ಸುರೇಖಾ ರಜಪೂತ, ಭಾರತಿ ವಾಲಿ, ಮಧು ಕಲಾದಗಿ, ಸುರೇಶ ಕಲಾದಗಿ, ಗಂಗಾಬಾಯಿ ಕಲಾದಗಿ, ಮಾಳಪ್ಪ ಕಲಾದಗಿ, ಹನಮಂತಪ್ಪ ಕಲಾದಗಿ, ಸತೀಶ ಅಡವಿ, ಹನುಮಂತ ಚಿಂಚಲಿ, ಸೋಮನಾಥ ಕಳ್ಳಿಮನಿ, ಅನಿಲ ಹೊಸಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.