ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾವ್‌ಬಹುದ್ದೂರ್ ಧರ್ಮ ಪ್ರವರ್ತಕ ಗುಬ್ಬಿ ತೋಟಪ್ಪನವರ ವೀರಶೈವ ಲಿಂಗಾಯತ ಮಹಿಳಾ ಉಚಿತ ವಿದ್ಯಾರ್ಥಿನಿಲಯ ನೂತನ ಕಟ್ಟಡ ಸುಮಾರು ೩ ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಈ ಕಟ್ಟಡದ ಭೂಮಿ ಪೂಜೆ ಕಾರ್ಯಕ್ರಮ ಶನಿವಾರ ಸುತ್ತೂರುಶ್ರೀ ಹಾಗೂ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ನಡೆಯಲಿದೆ. ನಗರದ ಸಮೀಪದ ಕರಿನಂಜನಪುರದ ಪಿ.ವಿಜಯಾಂಬ ಎಚ್.ಜಿ. ಕುಮಾರಸ್ವಾಮಿ ಹಾಗೂ ರೂಪ ಎಚ್.ಜಿ. ಮಹದೇವಪ್ರಸಾದ್ ೧೭ ಗುಂಟೆ ಜಾಗವನ್ನು ಮಹಿಳಾ ವಿದ್ಯಾರ್ಥಿನಿಲಯ ನಿರ್ಮಾಣಕ್ಕಾಗಿ ಸ್ಥಳ ದಾನ ಮಾಡಿದ್ದು, ಈ ಸ್ಥಳದಲ್ಲಿ ಸುಮಾರು ೩ ಕೋಟಿ ರು. ವೆಚ್ಚದಲ್ಲಿ ೨ ಅಂತಸ್ತಿನ ಬಹು ಮಹಡಿ ಕಟ್ಟಡ ನಿರ್ಮಾಣವಾಗಲಿದೆ. ೫೦೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ವಿನ್ಯಾಸ ಮಾಡಿ, ವಿದ್ಯಾರ್ಥಿನಿಲಯದ ಅಧ್ಯಕ್ಷರು ಆದ ಕೆರೆಗಳಿಗೆ ಕುಡಿಯುವ ನೀರು ತುಂಬಿಸಿದ ರುವಾರಿ ಕಾಳನಹುಂಡಿ ಗುರುಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದೆ. ೨೦೦೬ರಲ್ಲಿ ಚಾಮರಾಜನಗರ ಕರಿನಂಜನಪುರದ ಬಾಡಿಗೆ ಕಟ್ಟಡದಲ್ಲಿ ಸಮಾಜದ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರಂಭವಾದ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಯಲವು ಬಹಳ ವ್ಯವಸ್ಥಿತವಾಗಿ ನಿರ್ವಹಣೆಯಾಗುತ್ತಿದೆ. ಚಾ.ನಗರ ಜಿಲ್ಲೆ ಹಾಗೂ ತಮಿಳುನಾಡಿನ ತಾಳವಾಡಿ ಭಾಗದಲ್ಲಿಯೂ ಜಿಲ್ಲಾ ಕೇಂದ್ರಕ್ಕೆ ವ್ಯಾಸಂಗಕ್ಕೆ ಬಹಳಷ್ಟು ಬಡ ವಿದ್ಯಾರ್ಥಿನಿಯರು ಬರುತ್ತಿದ್ದಾರೆ. ಇವರಿಗೆ ಉಚಿತವಾಗಿ ವಿದ್ಯಾರ್ಥಿನಿಲಯ ನೀಡುವ ಜೊತೆಗೆ ಗುಣಮಟ್ಟದ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಎಲ್ಲ ರೀತಿಯ ವ್ಯವಸ್ಥೆ ಸಹ ನಿಲಯದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡುತ್ತಿದ್ದಾರೆ.ಮಕ್ಕಳಲ್ಲಿ ಅತ್ಮಸ್ಥೈರ್ಯ ತುಂಬುವಂತಹ ಹಾಗೂ ವಚನ ಗಾಯನ, ಸಾಧಕಿ ಮಹಿಳೆಯರ ಪರಿಚಯ ಮತ್ತು ಅವರಿಂದ ಉಪನ್ಯಾಸ ಸೇರಿದಂತೆ ವಿದ್ಯಾರ್ಥಿನಿಯರ ಸರ್ವಾತೋಮುಖ ಬೆಳವಣಿಗೆಗೆ ಕಳೆದ ೧೯ ವರ್ಷಗಳಿಂದ ಶ್ರಮಿಸುತ್ತಿದ್ದು, ಇಲ್ಲಿ ವ್ಯಾಸಂಗ ಮಾಡಿದ ಹೆಣ್ಣು ಮಕ್ಕಳು ಉನ್ನತ ಹುದ್ದೆಯಲ್ಲಿದ್ದು, ಇಂಜಿನಿಯರಿಂಗ್, ಉಪನ್ಯಾಸಕರು, ಕಂಪನಿಗಳು, ನರ್ಸ್ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ದುಡಿಯುತ್ತಾ ತಮ್ಮ ಜೀವನವನ್ನು ಉನ್ನತ ಮಟ್ಟದಲ್ಲಿ ರೂಪಿಸಿಕೊಂಡಿದ್ದಾರೆ. ಕಾಳನಹುಂಡಿ ಗುರುಸ್ವಾಮಿ ಅವರು ಅಧ್ಯಕ್ಷರಾದ ಬಳಿಕ ಸ್ವಂತ ಕಟ್ಟಡ ನಿರ್ಮಾಣದ ಆಲೋಚನೆಯೊಂದಿಗೆ ಶರಣೆ ಅಕ್ಕಮಹದೇವಿ ವಿದ್ಯಾರ್ಥಿನಿಯರ ಹಾಗೂ ಮಹಿಳಾ ಅಭಿವೃದ್ದಿ ಟ್ರಸ್ಟ್ ರಚಿಸಿ, ದಾನಿಗಳಿಂದ ೧೭ ಗುಂಟೆ ಜಾಗ ಪಡೆದು, ಅನ್ಯಕ್ರಾಂತರ ಮಾಡಿಸಿ, ನಗರಸಭೆಯಲ್ಲಿ ಇಸ್ವತ್ತು ಪಡೆದು, ನೀಲ ನಕ್ಷೆಯನ್ನು ತಯಾರಿಸಿ, ಮೇ ೧೦ ರಂದು ಭೂಮಿ ಪೂಜೆ ವರೆಗೆ ಬಂದಿದೆ. ೨೦೨೫ರ ಜನವರಿಯಲ್ಲಿ ಶ್ರೀಮಠದಲ್ಲಿ ತಾಲೂಕಿನ ವೀರಶೈವ ಲಿಂಗಾಯತ ಬಂಧುಗಳ ಪೂರ್ವಭಾವಿ ಸಭೆ ನಡೆಸಿ, ಪ್ರತಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ, ಕಟ್ಟಡ ನಿರ್ಮಾಣಕ್ಕೆ ವಂತಿಕೆ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ೧ ಲಕ್ಷ ನೀಡುವ ದಾನಿಗಳ ಹೆಸರು ಮತ್ತು ಫೋಟೊ ಅಳವಡಿಸುವುದು, ಕಟ್ಟಡಕ್ಕೆ ಅವಶ್ಯಕ ಸಾಮಗ್ರಿಗಳನ್ನು ನೀಡುವ ದಾನಿಗಳ ಹೆಸರನ್ನು ಸಹ ಕಟ್ಟಡದ ಮುಂಭಾಗದ ನಾಮಫಲಕದಲ್ಲಿ ಅಳವಡಿಸುವ ಕುರಿತು ಅರಿವು ಮೂಡಿಸಿರುವುದು ಸ್ವಯಂ ಪ್ರೇರಣೆಯಿಂದ ದಾನಿಗಳು ಮುಂದಾಗುತ್ತಿದ್ದಾರೆ. ಅವರ ಪ್ರೇರಣೆಯ ನಮ್ಮೇಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಕಾಳನಹುಂಡಿ ಗುರುಸ್ವಾಮಿ ತಿಳಿಸಿದರು. ಇಂದು ಸುತ್ತೂರುಶ್ರೀಗಳಿಂದ ಭೂಮಿಪೂಜೆ:
ನೂತನ ಕಟ್ಟಡದ ಭೂಮಿ ಪೂಜೆ ಯು ಬೆಳಗ್ಗೆ ೧೦ ಗಂಟೆಗೆ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ದಾವಣಗೆರೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ನೆರವೇರಿಸಲಿದ್ದಾರೆ. ಮರಿಯಾಲ ಮಠದ ಶ್ರೀ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ, ನಗರ ಮಠದ ಶ್ರೀ ಚನ್ನಬಸವಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಲಿದ್ದು, ತೋಟದಪ್ಪ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಂಸದ ಸುನೀಲ್ ಬೋಸ್, ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದ ರಾಜ್ಯಾಧ್ಯಕ್ಷ ರೇವಣ್ಣ ಸಿದ್ದಯ್ಯ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎ.ಆರ್.ಕೃಷ್ಣಮೂರ್ತಿ, ಗಣೇಶ್‌ಪ್ರಸಾದ್, ಮಂಜುನಾಥ್, ಡಾ.ತಿಮ್ಮಯ್ಯ, ಮಾಜಿ ಶಾಸಕರಾದ ಪರಿಮಳಾನಾಗಪ್ಪ, ಸಿ.ಎಸ್.ನಿರಂಜನ್‌ಕುಮಾರ್, ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಅಧ್ಯಕ್ಷ ನಿಜಗುಣರಾಜು, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಉದ್ಯಮಿ ನಿಶಾಂತ್, ನಗರಸಭೆ ಅಧ್ಯಕ್ಷ ಸುರೇಶ್ ಮೊದಲಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಗಣ್ಯರು ಆಗಮಿಸಬೇಕೆಂದು ಟ್ರಸ್ಟ್ ಮನವಿ ಮಾಡಿದೆ.ಶರಣೆ ಅಕ್ಕಮಹದೇವಿ ೧೨ನೇ ಶತಮಾನದಲ್ಲಿಯೇ ವಿದ್ಯೆ ಕಲಿತು ವಚನಗಳನ್ನು ರಚನೆ ಮಾಡಿ, ಮೊದಲ ಮಹಿಳಾ ವಚನಾಕಾರ್ತಿಯಾಗಿದ್ದಾರೆ. ನಮ್ಮ ಸಮಾಜದ ಹೆಣ್ಣು ಮಕ್ಕಳು ಸಹ ವಿದ್ಯಾವಂತರಾಗಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು. ಗುಣಮಟ್ಟದ ಶಿಕ್ಷಣಕ್ಕಾಗಿ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಲಯದೊಂದಿಗೆ ಸುಸಜ್ಜಿತ ಹಾಸ್ಟೆಲ್ ಕಟ್ಟಡದ ಭೂಮಿ ಪೂಜೆ ನಡೆಯಲಿದ್ದು, ಇನ್ನು ಒಂದು ವರ್ಷದ ಅವಧಿಯಲ್ಲಿ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂಬ ವಿಶ್ವಾಸ ಇದೆ.
-ಕಾಳನಹುಂಡಿ ಗುರುಸ್ವಾಮಿ, ಅಧ್ಯಕ್ಷ, ತೋಟದಪ್ಪ ಮಹಿಳಾ ಉಚಿತ ವಿದ್ಯಾರ್ಥಿನಿಲಯ