ಶೃಂಗೇರಿಯಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ

| Published : Oct 18 2024, 12:01 AM IST / Updated: Oct 18 2024, 12:02 AM IST

ಶೃಂಗೇರಿಯಲ್ಲಿ ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಗುರುವಾರ ಭೂಮಿಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಹೊಲಗದ್ದೆಗಳಲ್ಲಿ ರೈತರು ಪೂಜಾ ಸಾಮಗ್ರಿಗಳನ್ನಿಟ್ಟು, ಶಂಖ, ಜಾಗಟೆ ಭಾರಿಸಿ ಪೂಜೆ ಮಂಗಳಾರತಿ ನೆರವೇರಿಸಿದ್ದು ವಿಶೇಷವಾಗಿತ್ತು.

, ಹೊಲಗೆದ್ದೆಗಳಲ್ಲಿ ಝೇಂಕರಿಸಿದ ಶಂಖ, ಜಾಗಟೆ ಶಬ್ದ

ಕನ್ನಡಪ್ರಭ ವಾರ್ತೆ ಶೃಂಗೇರಿ

ತಾಲೂಕಿನಾದ್ಯಂತ ಗುರುವಾರ ಭೂಮಿಹುಣ್ಣಿಮೆ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಹೊಲಗದ್ದೆಗಳಲ್ಲಿ ರೈತರು ಪೂಜಾ ಸಾಮಗ್ರಿಗಳನ್ನಿಟ್ಟು, ಶಂಖ, ಜಾಗಟೆ ಭಾರಿಸಿ ಪೂಜೆ ಮಂಗಳಾರತಿ ನೆರವೇರಿಸಿದ್ದು ವಿಶೇಷವಾಗಿತ್ತು.

ಭೂಮಿ ಹುಣ್ಣಿಮೆ ಹಿಂದಿನ ದಿನ ಮಹಿಳೆಯರು ಮನೆಗಳನ್ನು ಶುಭ್ರಗೊಳಿಸಿ ಪೂಜೆಗೆ ಅಡುಗೆ ವಸ್ತುಗಳನ್ನು ಸಿದ್ಧಪಡಿಸಲು ತಯಾರಿ ನಡೆಸಿದ್ದರೆ. ಪುರುಷರು ಗದ್ದೆಗಳಿಗೆ ಹೋಗಿ ಅಲ್ಲಿ ಹೊಡೆ ತುಂಬಿ ನಿಂತಿರುವ ಪೈರಿನ ಹತ್ತಿರ ಬಾಳೆ ಕಂಬಗಳನ್ನು ನೆಟ್ಟು ಕಬ್ಬು, ಮಾವಿನ ತೋರಣ ಕಟ್ಟಿ, ಎಲ್ಲಾ ಜಾತಿಯ ಸೊಪ್ಪು, ತರಕಾರಿಗಳಿಂದ ಪಲ್ಯ ತಯಾರಿಸಿ, ಕೋಸಂಬರಿ, ಅಂಬಲಿ, ಅನ್ನ ತಯಾರಿಸಿ, ತಯಾರಿಸಿ ಅಡುಗೆಗಳನ್ನೆಲ್ಲ ಒಂದು ಗೆರಸಿಗೆ ಸುರವಿ, ಎಲ್ಲಾ ಅನ್ನ ಕಲಸಿ ಬುಟ್ಟಿಗಳಲ್ಲಿ ತುಂಬಿ ಗದ್ದೆಗೆ ಹೋಗಿ ಪೂಜೆಗೆ ಇಡಲಾಗಿತ್ತು. ಅಡಕೆ ಹಿಂಗಾರದ ಹೂ, ಮಾವಿನ ಎಲೆ ಇಟ್ಟು ಕಳಶ ಮಾಡಿ,ಇದಕ್ಕೆಮನೆಯಲ್ಲಿರುವ ಬಂಗಾರದ ಸರ, ಬಳೆ ಎಲ್ಲಾ ಹಾಕಿ ಶೃಂಗಾರ ಮಾಡಿ 3-4 ಜನ ಸೇರಿ ಒಬ್ಬರು ಕಳಶವಿದ್ದ ಮಣೆ, ಕಲಸಿದ ಅನ್ನದ ಪಾತ್ರೆ ಅಥವಾ ಬುಟ್ಟಿಯನ್ನು ಹೊತ್ತು ಬೆಳಕಿನ ದೊಂದಿ ಹಿಡಿದು ಗದ್ದೆಗಳಿಗೆ ತೆರಳಿ, ಪೂಜಾ ಸ್ಥಳದಲ್ಲಿಟ್ಟು ಹೊಡೆ ಬಂದ ಬತ್ತದ ಎರಡು ಮೂರು ನೆಟ್ಟಿಯ ಬುಡಕ್ಕೂ, ಕಳಶಕ್ಕೂ, ಮಣ್ಣಿನ ಮುದ್ದೆಗಳಿಗೂ ಕುಂಕುಮ, ಗಂಧ, ಚಂದನ ಹಚ್ಚಿ, ಹೂಮುಡಿಸಿ, ಬಳೆ ಬಿಚ್ಚೋಲೆಗಳನ್ನೆಲ್ಲ ಅರ್ಪಿಸಿ ಶಂಖ ಜಾಗಟೆ ಭಾರಿಸಿ, ದೂಪಾರತಿ ಮಾಡಿ ಕಲಸನ್ನದ ಖಾದ್ಯ, ಬಾಳೆಹಣ್ಣು, ತೆಂಗಿನ ಕಾಯಿ ಒಡೆದು ಪೈರಿಗೆ ನೈವೈದ್ಯ ಮಾಡಲಾಯಿತು.ನಂತರ ಹಿಡಿ ಅನ್ನವನ್ನು ಗದ್ದೆಗೆ ಬೀಸಿ ಒಗೆಯ ಲಾಯಿತು.

ಸೂರ್ಯೋದಯಕ್ಕೂ ಒಂದೆರೆಡು ಗಂಟೆಗಳ ಮೊದಲು ತಾಲೂಕಿನ ಹೊಲಗದ್ದೆಗಳಲ್ಲಿ ದೊಂದಿ ಬೆಳಕು, ಬೆಂಕಿಯ ಪಂಜುಗಳು ಕಂಡು ಬಂದವು. ಶಂಖ, ಜಾಗಟೆ ಶಬ್ದಗಳು ಝೇಂಕರಿಸಿ ಕಿವಿಗಪ್ಪಳಿಸುತ್ತಿತ್ತು.

17 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಕುಂಚೇಬೈಲು ಗ್ರಾಮದಲ್ಲಿ ಗೆದ್ದೆಯೊಂದರಲ್ಲಿ ಪೂಜಾ ಸಾಮಗ್ರಿ,ತಳಿರು ತೋರಣಗಳಿಂದ ಸಿಂಗರಿಸಿ ಭೂಮಿ ಹುಣ್ಣಿಮೆ ಹಬ್ಬದ ಸಂಭ್ರಮ.