ಯಕ್ಷಧ್ರುವ ಪಟ್ಲಾಶ್ರಯದ 20 ಮನೆಗಳ ಗೃಹಸಮುಚ್ಚಯಕ್ಕೆ ಭೂಮಿ ಪೂಜೆ

| Published : Apr 20 2025, 01:56 AM IST

ಸಾರಾಂಶ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ‘ಯಕ್ಷಧ್ರುವ ಪಟ್ಲಾಶ್ರಯ’ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಮನೆಗಳ ಪೈಕಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗರು ದಾನವಾಗಿ ನೀಡಿದ ಕೊಡವೂರಿನ ಲಕ್ಷ್ಮೀನಗರ ಗರ್ಡೆ ಬಳಿಯ 50 ಸೆಂಟ್ಸ್ ಜಾಗದಲ್ಲಿ 20 ಮನೆಗಳ ಗೃಹಸಮುಚ್ಚಯಕ್ಕೆ ಶನಿವಾರ ಶೃಂಗೇರಿ ಶ್ರೀ ಶಾರದಾ ಪೀಠಧೀಶ್ವರ ಶ್ರೀ ವಿಧುಶೇಖರಭಾರತೀಸ್ವಾಮಿಗಳು ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ‘ಯಕ್ಷಧ್ರುವ ಪಟ್ಲಾಶ್ರಯ’ ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಮನೆಗಳ ಪೈಕಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗರು ದಾನವಾಗಿ ನೀಡಿದ ಕೊಡವೂರಿನ ಲಕ್ಷ್ಮೀನಗರ ಗರ್ಡೆ ಬಳಿಯ 50 ಸೆಂಟ್ಸ್ ಜಾಗದಲ್ಲಿ 20 ಮನೆಗಳ ಗೃಹಸಮುಚ್ಚಯಕ್ಕೆ ಶನಿವಾರ ಶೃಂಗೇರಿ ಶ್ರೀ ಶಾರದಾ ಪೀಠಧೀಶ್ವರ ಶ್ರೀ ವಿಧುಶೇಖರಭಾರತೀಸ್ವಾಮಿಗಳು ಭೂಮಿ ಪೂಜೆ ನೆರವೇರಿಸಿದರು.ನಂತರ ಆರ್ಶೀವಚನ ನೀಡಿದ ಅವರು, ಯಕ್ಷಗಾನಕ್ಕೆ ಭವ್ಯವಾದ ಇತಿಹಾಸವಿದೆ. ಅದರಿಂದ ಸುಸ್ಕೃತ ಸಮಾಜ ನಿರ್ಮಾಣಗೊಳ್ಳಲು ಸಾಧ್ಯವಿದೆ. ಯಕ್ಷ ಕಲಾವಿದರ ಏಳಿಗೆಗಾಗಿ ಇಂತಹ ಕಾರ್ಯ ಮಾಡುತ್ತಿರುವುದು ಅಭಿನಂದನಾರ್ಹ. ಪರರಿಗೆ ಉಪಕಾರ ಮಾಡುವುದೇ ಮನುಷ್ಯ ಧರ್ಮ. ಆ ನಿಟ್ಟಿನಲ್ಲಿ ಪಟ್ಲ ಫೌಂಡೇಷನ್‌ನ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಇದೊಂದು ಮಾದರಿ ಕಾರ್ಯವಾಗಿದೆ. ಪಟ್ಲ ಫೌಂಡೇಷನ್‌ನ ಎಲ್ಲ ಸಮಾಜಮುಖಿ ಕೆಲಸಗಳಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.ಗೃಹ ಸಮುಚ್ಚಯಕ್ಕೆ ಜಾಗ ದಾನ ಮಾಡಿದ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್‌. ಸಾಮಗ ದಂಪತಿಯನ್ನು ಸನ್ಮಾನಿಸಲಾಯಿತು.ಫೌಂಡೇಷನ್‌ನ ಕೋಶಾಧಿಕಾರಿ ಸಿಎ ಸುಧೇಶಕುಮಾರ ರೈ, ಧಾರ್ಮಿಕ ಮುಖಂಡ ಕೆ.ಕೆ. ಶೆಟ್ಟಿ ಮಧೂರು, ಉಡುಪಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಗೌರವಾಧ್ಯಕ್ಷ ಪುರುಷೋತ್ತಮ ಪಿ. ಶೆಟ್ಟಿ, ದಿವಾಕರ ಶೆಟ್ಟಿ ತೋಟದಮನೆ, ಮಹಿಳಾ ವಿಭಾಗದ ಅಧ್ಯೆ ನಿರುಪಮಾ ಪ್ರಸಾದ ಶೆಟ್ಟಿ, ಸುಧಾಕರ ಆಚಾರ್ಯ ಇತರರು ಉಪಸ್ಥಿತರಿದ್ದರು. ಶಾಸಕ ಯಶ್‌ಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ ಮಧ್ವರಾಜ್ ಪಾಲ್ಗೊಂಡಿದ್ದರು.ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ವಿದ್ವಾನ್ ದಾಮೋದರ ಶರ್ಮಾ ಬಾರ್ಕೂರು ಕಾರ್ಯಕ್ರಮ ನಿರ್ವಹಿಸಿದರು.

------------------

ಟ್ರಸ್ಟ್ ಆರಂಭಗೊಂಡು 10 ವರ್ಷ ಆಗಿದೆ. ಯಕ್ಷಧ್ರುವ ಪಟ್ಠಾಶ್ರಯ ಯೋಜನೆಯಡಿ ಕಲಾವಿದರಿಗಾಗಿ 100 ಮನೆ ನಿರ್ಮಿಸುವ ಯೋಜನೆ ಹಮ್ಮಿಕೊಂಡಿದ್ದೇವೆ. ಅದರಲ್ಲಿ 20 ಮನೆಗಳಿರುವ ಗೃಹಸಮುಚ್ಚಯಕ್ಕೆ ಭೂಮಿಪೂಜೆ ಮಾಡಲಾಗುತ್ತಿದೆ. ಆರಂಭದ ಕಾರ್ಯ ಶೃಂಗೇರಿ ಶ್ರೀಗಳಿಂದ ಆಗುತ್ತಿರುವುದು ನಮ್ಮೆಲ್ಲರ ಭಾಗ್ಯ.। ಪಟ್ಲ ಸತೀಶ್ ಶೆಟ್ಟಿ, ಯಕ್ಷಧ್ರುವ ಪಟ್ಲ ಫೌಂಡೇಷನ್‌ನ ಸ್ಥಾಪಕಾಧ್ಯಕ್ಷ