ಬೀದರ್‌ನಲ್ಲಿ ಬಸವ ಭವನಕ್ಕೆ ಭೂಮಿ ಪೂಜೆ

| Published : May 13 2024, 12:05 AM IST

ಬೀದರ್‌ನಲ್ಲಿ ಬಸವ ಭವನಕ್ಕೆ ಭೂಮಿ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಬಸವ ಭವನಕ್ಕೆ ಒಂದು ಎಕರೆ ಹತ್ತು ಗುಂಟೆ ಜಮೀನು ಬಸವ ಭವನ ನಿರ್ಮಾಣಕ್ಕೆ ಮಂಜೂರು ಮಾಡಿದ್ದು, ಶುಕ್ರವಾರ ಬಸವ ಪರ ಸಂಘಟನೆ ಪ್ರಮುಖರು ಸೇರಿ ಭೂಮಿ ಪೂಜೆ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಬಸವಣ್ಣನವರು ಒಂದು ಮತ, ಪಂಥಕ್ಕೆ ಸೀಮತವಾದವರಲ್ಲ. ಅವರ ತತ್ವ ಸಿದ್ಧಾಂತ ಇಡೀ ಮಾನವ ಕುಲಕೋಟಿಗೆ ಒಳಿತನ್ನು ಮಾಡಬಲ್ಲವಾಗಿವೆ. ಅವರ ವಿಚಾರ ಅಂದಿಗಿಂತ ಇಂದು ಪ್ರಸ್ತುತವಾಗಿದ್ದು, ಅವುಗಳನ್ನು ಅನುಷ್ಠಾನಕ್ಕೆ ತರಲು ಪ್ರಸ್ತಾವಿತ ಬಸವ ಭವನ ಕಾರ್ಯ ಮಾಡಲಿದೆ ಎಂದು ಹಿರಿಯ ಪತ್ರಕರ್ತರು ಹಾಗೂ ಸಮಾಜ ಬಂಧುಗಳಾದ ಶಿವಶರಣಪ್ಪ ವಾಲಿ ಬಸವ ಧ್ವಜ ನೆರವೇರಿಸಿ ಮಾತನಾಡಿದರು.

ನಗರದ ಗುರುನಾನಕನಿಂದ ನಾವದಗೇರೆ ಹೋಗುವ ಬಲ ಭಾಗದ ಸರ್ವೇ ನಂ.60ರಲ್ಲಿ ಜಿಲ್ಲಾಡಳಿತ ಬಸವ ಭವನಕ್ಕೆ ಒಂದು ಎಕರೆ ಹತ್ತು ಗುಂಟೆ ಜಮೀನು ಬಸವ ಭವನ ನಿರ್ಮಾಣಕ್ಕೆ ಮಂಜೂರು ಮಾಡಿದ್ದು, ಶುಕ್ರವಾರ ಬಸವ ಪರ ಸಂಘಟನೆ ಪ್ರಮುಖರು ಸೇರಿ ಭೂಮಿ ಪೂಜೆ ನೆರವೇರಿಸಿದರು.

ಬಸವ ಪೂಜೆ ನೆರವೇರಿಸಿ ಮಾತನಾಡಿದ ಜಾಗತಿಕ ಲಿಂಗಾಯತ ಮಹಾ ಸಭೆ ಜಿಲ್ಲಾಧ್ಯಕ್ಷರಾದ ಬಸವರಾಜ ಧನ್ನೂರ, ಅನೇಕ ವರ್ಷಗಳ ಬಸವ ಭಕ್ತರ ಕನಸು ಇಂದು ಈಡೇರುವ ಕಾಲ ಸನ್ನಿಹಿತವಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು, ಸರ್ಕಾರದ ಅನುಮತಿ ಮೇರೆಗೆ ಇಂದಿನ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಬಸವ ಭವನಕ್ಕೆ ಸ.ನಂ. 60ರಲ್ಲಿ ಒಂದು ಎಕರೆ- ಹತ್ತು ಗುಂಟೆ ಜಮೀನ ಮಂಜೂರು ಮಾಡಿ ಆದೇಶ ಹೊರಡಿಸಿದ್ದು ನಮ್ಮೆಲ್ಲರಿಗೆ ಹರ್ಷವನ್ನುಂಟು ಮಾಡಿದೆ. ಎಲ್ಲರ ಸಹಕಾರ ಪಡೆದು ಇಲ್ಲಿ ಐತಿಹಾಸಿಕ ಬಸವ ಭವನ ನಿರ್ಮಿಸಲು ನಾವೆಲ್ಲರೂ ಕಂಕಣಬದ್ಧರಾಗೋಣ ಎಂದು ತಮ್ಮ ವಿಚಾರ ವ್ಯಕ್ತಪಡಿಸಿದರು.

ಬಸವ ಜಯಂತಿ ಉತ್ಸವ ಸಮಿತಿ ಅಧ್ಯಕ್ಷರು ಹಾಗೂ ಕಸಾಪ ಜಿಲ್ಲಾಧ್ಯಕ್ಷರಾದ ಸುರೇಶ್ ಚನ್ನಶಟ್ಟಿ ಮಾತನಾಡಿ, ಇಂದು ಎಲ್ಲರನ್ನು ಒಂದೆಡೆ ಸೇರುವ ಕಾಲ ಕೂಡಿ ಬಂದಿದೆ. ಇದು ಯಾವುದೇ ಒಂದು ಧರ್ಮ, ಜಾತಿ, ಮತ, ಪಂಥದ ಭವನವಾಗದೇ ಇದು ಸಮ ಸಮಾಜ ನಿರ್ಮಾಣ ಮಾಡಿದ ಕಾಯಕ ಜೀವಿಗಳ ಬಸವ ಭವನವಾಗಲಿದೆ. ಇನ್ನೇನು ಬರುವ ದಿನಗಳಲ್ಲಿ ಎಲ್ಲ ಬಸವ ಭಕ್ತರ ಸಭೆ ಕರೆದು ಭವನದ ರೂಪರೇಷೆ ನೀಲನಕ್ಷೆ ತಯಾರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುದಾನ ಪಡೆಯೋಣ. ಈಗಾಗಲೇ ಬಸವ ಜಯಂತಿ ಸಮಾರಂಭದಲ್ಲಿ ಸಚಿವ ಈಶ್ವರ ಖಂಡ್ರೆ ಕಟ್ಟಡಕ್ಕೆ ಅನುದಾನ ಕಲ್ಪಿಸುವುದಾಗಿ ಭರವಸೆ ನೀಡಿರುವುದು ನಮ್ಮೆಲ್ಲರ ಆಸೆಗೆ ಚಿಗುರೊಡೆದಿದೆ ಎಂದು ಹೇಳಿದರು.

ಐತಿಹಾಸಿಕ ಭೂಮಿ ಪೂಜೆಯಲ್ಲಿ ಸರ್ಕಾರಿ ನೌಕರರ ಸಂಘಧ ಜಿಲ್ಲಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಸರ್ವರನ್ನು ಸ್ವಾಗತಿಸಿ, ರಾಷ್ಟ್ರೀಯ ಬಸವ ದಳದ ಪ್ರಧಾನ ಕಾರ್ಯದರ್ಶಿ ಸುರೇಶ ಸ್ವಾಮಿ ನಿರೂಪಣೆ ಮಾಡಿ ಶರಣಪ್ಪ ಮಿಠಾರೆ ಅಧ್ಯಕ್ಷರು ಬಸವ ಕೇಂದ್ರ ವಂದಿಸಿದರು.

ಸಮಾರಂಭದಲ್ಲಿ ವಿರುಪಾಕ್ಷ ಗಾದಗಿ ಪ್ರಧಾನ ಕಾರ್ಯದರ್ಶಿ ಬಸವ ಜಯಂತಿ ಉತ್ಸವ ಸಮಿತಿ, ಡಾ. ರಜನೀಶ ವಾಲಿ ಕೋಶಾಧ್ಯಕ್ಷರು ಬಸವ ಉತ್ಸವ ಸಮಿತಿ, ಕುಶಾಲರಾವ್‌ ಪಾಟೀಲ್‌, ಅಧ್ಯಕ್ಷರು ಲಿಂಗಾಯತ ಮಹಾಸಭಾ, ಶಿವರಾಜ ಪಾಟೀಲ್‌ ಅತಿವಾಳ ಉಪಾಧ್ಯಕ್ಷ ರು ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳದ ಜಿಲ್ಲಾಧ್ಯಕ್ಷರಾದ ಸೋಮಶೇಖರ ಪಾಟೀಲ್‌ ಗಾದಗಿ, ದೀಪಕ ವಾಲಿ, ಚಂದ್ರಕಾಂತ ಹೆಬ್ಬಾಳೆ, ಜೈರಾಜ ಖಂಡ್ರೆ, ರಾಜೇಂದ್ರ ಜೊನ್ನಿಕೇರಿ, ಶಿವಶಂಕರ ಟೋಕರೆ, ವಿವೇಕ ಪಟ್ನೆ, ಬಾಬು ದಾನಿ, ಕಂಟೆಪ್ಪ ಗಂಧಿಗುಡಿ, ಗಣೇಶ ಶೀಲವಂತ, ಸಿದ್ಧಾರೂಢ ಭಾಲ್ಕೆ, ಆಶೋಕ ದಿಡಗೆ, ರವಿಕಾಂತ ಬಿರಾದಾರ, ರವಿ ಪಾಪಡೆ, ಸಂಜೀವಕುಮಾರ ಪಾಟೀಲ, ಚಂದ್ರಕಾಂತ ಮಿರ್ಚೆ ಇನ್ನೂ ಅನೇಕ ಯುವಕರು, ಸಮಾಜದ ಧುರೀಣರು ಪಾಲ್ಗೊಂಡು ಸಿಹಿ ಹಂಚಿಕೊಂಡು ಸಂತಸದ ಕ್ಷಣ ಸಂಭ್ರಮಿಸಿದರು.