ಸಾರಾಂಶ
ಕಡೂರಿನಲ್ಲಿ 852ನೇ ಸಿದ್ದರಾಮೇಶ್ವರ ಜಯಂತಿ
ಕನ್ನಡಪ್ರಭ ವಾರ್ತೆ,ಕಡೂರುಕಠಿಣವಾದ ಕಲ್ಲು ಒಡೆಯುವ ಕಾಯಕವನ್ನೇ ನಂಬಿಕೊಂಡಿರುವ ಭೋವಿ ಸಮುದಾಯಕ್ಕೆ ಯಾವುದೇ ರೀತಿ ತೊಂದರೆ ಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂದು ಶಾಸಕ ಕೆ.ಎಸ್.ಆನಂದ್ ಭರವಸೆ ನೀಡಿದರು. ಸೋಮವಾರ ಕಡೂರಿನಲ್ಲಿ ತಾಲೂಕು ಬೋವಿ ಸಮಾಜ ಮತ್ತು ತಾಲೂಕು ಆಡಳಿತದಿಂದ ಆಯೋಜಿಸಿದ್ದ 852ನೇ ಸಿದ್ದರಾಮೇಶ್ವರ ಜಯಂತಿ ಅಧ್ಯಕ್ಷತೆವಹಿಸಿ ಮಾತನಾಡಿದರು. ಮಹಾಪುರುಷರು ಜನಿಸಿದ ಈ ನೆಲದಲ್ಲೆ ಹುಟ್ಟಿದ ಕಾಯಕ ಯೋಗಿ ಗುರು ಸಿದ್ದರಾಮೇಶ್ವರರು ಮನುಕುಲದ ಒಳಿತಿಗೆ ಶ್ರಮಿಸಿದರು. ಬಸವಣ್ಣನಿಂದ ಪ್ರಭಾವಿತರಾಗಿ ಅವರ ಅನುಭವ ಮಂಟಪದಲ್ಲಿ ಪ್ರಮುಖರಾಗಿದ್ದರು. ಅವರ ಸಿದ್ದಾಂತ ಕೇವಲ ಭೋವಿ ಜನಾಂಗ ಮಾತ್ರವಲ್ಲ ಎಲ್ಲ ಸಮುದಾಯಗಳಿಗೂ ಅನ್ವಯ ಎಂದರು. ಶ್ರೀಮಂತರಿಗೆ ಯಾವುದೇ ಆಕ್ಷೇಪವಿಲ್ಲದೆ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತಿದೆ. ಕೈಯ್ಯಲ್ಲಿ ಕಲ್ಲು ಒಡೆಯು ವ ವರನ್ನು ಒಕ್ಕಲೆಬ್ಬಿಸಲಾಗುತ್ತಿದೆ. ಇವರಿಗೆ ತೊಂದರೆ ಅಗದಂತೆ ಗಮನ ಹರಿಸುತ್ತೇನೆ. ಪಟ್ಟಣದ ಭೋವಿ ವಿದ್ಯಾರ್ಥಿ ನಿಲಯದ ಜಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲ ರೀತಿ ಸಹಕಾರ ನೀಡುತ್ತೇನೆ. ಭೋವಿ ಕಾಲೋನಿಗೆ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸಿ ಜನಾಂಗದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಭೋವಿ ಸಮಾಜದ ಜಿಲ್ಲಾಧ್ಯಕ್ಷ ಕೊಲ್ಲಾಭೋವಿ ಮಾತನಾಡಿ, ಕಲ್ಲು ಕೆಲಸವನ್ನೆ ನಂಬಿ ಜೀವನ ಸಾಗಿಸುತ್ತಿದ್ದ ಭೋವಿ ಜನಾಂಗ ಆಧುನಿಕ ಯಂತ್ರಗಳ ಭರಾಟೆಯಿಂದ ಜೀವನ ನಡೆಸಲು ಕಷ್ಟವಾಗಿದೆ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಾಗಿ ಹೋರಾಡಬೇಕು. ಸಾಮಾಜಿಕ ಮತ್ತು ರಾಜಕೀಯವಾಗಿ ಪ್ರಾತಿನಿಧ್ಯ ದೊರೆಯಬೇಕಿದೆ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಅನೇಕ ದಶಕಗಳಿಂದ ಕಲ್ಲು ಒಡೆಯುವ ಕಾರ್ಯವನ್ನೆ ನಂಬಿ ಕೊಂಡು ಜೀವಿಸುತ್ತಿದ್ದ ಭೋವಿ ಜನಾಂಗದವರಿಗೆ ಉಳ್ಳವರು ಯಂತ್ರಗಳ ಸಹಾಯದಿಂದ ಕಲ್ಲು ಒಡೆಯುವ ಕಾರ್ಯ ಮಾಡುತ್ತಿರುವುದರಿಂದ ಕೈ ಕೆಲಸವಿಲ್ಲದೆ ಕೂರುವಂತಾಗಿದೆ. ಅವರ ಸಮಸ್ಯೆಗಳಿಗೆ ಶಾಸಕರು ಧ್ವನಿ ಯಾಗಬೇಕು ಎಂದು ಕೋರಿದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಚಿಕ್ಕನಾಯಕನಹಳ್ಳಿ ಸ.ಪ್ರ.ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಎಸ್.ಡಿ.ಚಂದ್ರಶೇಖರ್ ಸಿದ್ದರಾಮೇಶ್ವರರ ಕುರಿತು ಉಪನ್ಯಾಸ ನೀಡಿದರು. ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಎಚ್.ಡಿ.ರೇವಣ್ಣ ಸಿದ್ಧರಾಮರ ಭಾವಚಿತ್ರ ಅನಾವರಣಗೊಳಿಸಿ ಪುಷ್ಪಾರ್ಚನೆ ಮಾಡಿದರು.ತಾಲೂಕು ಅಧ್ಯಕ್ಷ ನಾಗರಾಜ್, ಕಾರ್ಯದರ್ಶಿ ಎಂ.ಡಿ.ಜಯಣ್ಣ, ಜಿಪಂ ಮಾಜಿ ಸದಸ್ಯ ಷಣ್ಮುಖ ಭೋವಿ, ತಾಪಂ ಮಾಜಿ ಅಧ್ಯಕ್ಷ ಆರ್. ಶಿವಕುಮಾರ್, ವಕೀಲರ ಸಂಘದ ಮಾಜಿ ಅಧ್ಯಕ್ಷ ಎಚ್.ತಿಪ್ಪೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಚನ್ನವೀರಪ್ಪ, ಕಸಾಪ ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಗ್ರಾಪಂ ಸದಸ್ಯೆ ನಾಗಮ್ಮ ಮಲ್ಲಾಭೋವಿ, ಮಂಜು ನಾಥ್, ಮುಖಂಡರಾದ ದೇವರಾಜ್, ಕುಮಾರ್ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.
---ಬಾಕ್ಸ್ ಸುದ್ದಿಗೆ---ಹಿಂದಿನಿಂದಲೂ ಕಲ್ಲು ಕೆಲಸ ಮಾಡಿಕೊಂಡು ಜೀವನ ಮಾಡುವ ಬೋವಿ ಸಮುದಾಯಕ್ಕೆ ಇತ್ತೀಚೆಗೆ ಬಂಡೆಯಲ್ಲಿ ಕೆಲಸ ಮಾಡಲು ಬಿಡುತ್ತಿಲ್ಲ. ಸ. ನಂ 12 ಮತ್ತು 13 ರಲ್ಲಿ ಕಲ್ಲು ಹೊಡೆಯಲು ಬಿಡುತ್ತಿಲ್ಲ. ಶಾಸಕ ರಾದ ಕೆ ಎಸ್ ಆನಂದ್ ರವರು ಭೋವಿ ಸಮುದಾಯವರು ಜೀವನ ನಡೆಸಲು ಅನುಕೂಲ ಮಾಡಿಕೊಡಬೇಕು ಎಂದು ಸಮಾಜದ ಪರವಾಗಿ ಮನವಿ ಮಾಡುತ್ತೇನೆ.
- ಭಂಡಾರಿ ಶ್ರೀನಿವಾಸ್,ಪುರಸಭೆ ಮಾಜಿ ಅಧ್ಯಕ್ಷರು.15ಕೆಕೆಡಿಯು1.ಕಡೂರಿನಲ್ಲಿ ತಾಲೂಕು ಬೋವಿ ಸಮಾಜ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ 852ನೇ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯಿತು
15ಕೆಕೆಡಿಯು1ಎ.ಕಡೂರಿನಲ್ಲಿ ತಾಲ್ಲೂಕು ಬೋವಿ ಸಮಾಜ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಆಯೋಜಿಸಿದ್ದ 852ನೇ ಸಿದ್ದರಾಮೇಶ್ವರ ಜಯಂತಿಯಲ್ಲಿ ಶಾಸಕ ಕೆ ಎಸ್ . ಆನಂದ್ ರವರನ್ನು ಸನ್ಮಾನಿಸಲಾಯಿತು.