ಭೋವಿ ಕುಟುಂಬ ಆದಿ ಕರ್ನಾಟಕವೆಂದು ದಾಖಲು, ಆರೋಪ

| Published : May 11 2025, 01:26 AM IST

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಕೈಗೊಂಡ ಮನೆ ಮನೆ ಸಮೀಕ್ಷೆಯ ಗಣತಿದಾರರು ಭೋವಿ ಅಥವಾ ವಡ್ಡರ್ ಸಮಾಜವನ್ನು ಆದಿ ಕರ್ನಾಟಕ ಎಂಬುದಾಗಿ ದಾಖಲಿಸಿಕೊಳ್ಳುತ್ತಿದ್ದು, ಈ ಬಗ್ಗೆ ನ್ಯಾ.ನಾಗಮೋಹನ್ ದಾಸ್ ಆಯೋಗ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಗಣತಿದಾರರಿಗೆ ಸೂಕ್ತ ತರಬೇತಿ, ನಿರ್ದೇಶನ ನೀಡಬೇಕು

ವಕೀಲ ಹನುಮಂತಪ್ಪ ದೂರು । ಪರಿಶಿಷ್ಟ ಜಾತಿ ಜನಗಣತಿಗೆ ತರಬೇತಿ, ಮಾಹಿತಿ ಕೊರತೆ । ಕ್ರಮಕ್ಕೆ ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ಕೈಗೊಂಡ ಮನೆ ಮನೆ ಸಮೀಕ್ಷೆಯ ಗಣತಿದಾರರು ಭೋವಿ ಅಥವಾ ವಡ್ಡರ್ ಸಮಾಜವನ್ನು ಆದಿ ಕರ್ನಾಟಕ ಎಂಬುದಾಗಿ ದಾಖಲಿಸಿಕೊಳ್ಳುತ್ತಿದ್ದು, ಈ ಬಗ್ಗೆ ನ್ಯಾ.ನಾಗಮೋಹನ್ ದಾಸ್ ಆಯೋಗ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಗಣತಿದಾರರಿಗೆ ಸೂಕ್ತ ತರಬೇತಿ, ನಿರ್ದೇಶನ ನೀಡಬೇಕು ಎಂದು ಭೋವಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯುವ ವಕೀಲ ಹನುಮಂತಪ್ಪ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗಳೂರು ತಾ. ಮುಷ್ಟೂರು ಗ್ರಾಮದಲ್ಲಿ ಪರಿಶಿಷ್ಟ ಜಾತಿ ಸಮೀಕ್ಷೆಗೆ ಬಂದಿದ್ದ ಗಣತಿದಾರರು ಭೋವಿ ಅಥವಾ ವಡ್ಡರ್ ಸಮಾಜದ ಅನಕ್ಷರಸ್ಥರಲ್ಲಿ ನೀವು ಕರ್ನಾಟಕ, ತಮಿಳುನಾಡು, ಆಂಧ್ರದವರಾ ಎಂದು ಕೇಳಿದಾಗ ಕರ್ನಾಟಕವೆಂದು ಹೇಳಿದರೆ, ಆದಿ ಕರ್ನಾಟಕ ಎಂಬುದಾಗಿ ದಾಖಲಿಸಿಕೊಳ್ಳುತ್ತಿದ್ದಾರೆ ಎಂದರು.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆ ನ್ಯಾ.ನಾಗಮೋಹನ ದಾಸ್ ಆಯೋಗವನ್ನು ರಾಜ್ಯ ಸರ್ಕಾರ ನೇಮಿಸಿದ್ದು, ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಯು ಮೇ 5ರಿಂದ ಆರಂಭವಾಗಿದೆ. ಮೂರು ಹಂತದಲ್ಲಿ ಗಣತಿ ನಡೆಯುತ್ತಿದೆ. ಮೊದಲ ಹಂತದಲ್ಲಿ ಮನೆ ಮನೆಗೆ ಸಮೀಕ್ಷೆ ನಡೆಯುತ್ತಿದೆ. ಗಣತಿದಾರು ಸರಿಯಾಗಿ ಮಾಹಿತಿ ಮತ್ತು ತರಬೇತಿ ಕೊರತೆಯಿಂದಾಗಿ ಮನೆಗಳಿಗೆ ಹೋಗಿ ತಪ್ಪು ಮಾಹಿತಿ ದಾಖಲಿಸಿಕೊಳ್ಳುತ್ತಿರುವುದು ಭೋವಿ ಸಮಾಜದ ಮುಖಂಡರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಜಿಲ್ಲಾಡಳಿತ, ಆಯೋಗ, ಸರ್ಕಾರ ಗಮನ ಹರಿಸಲಿ ಎಂದು ಆಗ್ರಹಿಸಿದರು.

ಗಣತಿದಾರರು ನೀವು ಎಸ್‌ಸಿನಾ ಎಂಬುದಾಗಿ ಕೇಳಿದ್ದಾರೆ. ಆಗ ಭೋವಿ(ವಡ್ಡರ) ಸಮಾಜವರು ಹೌದು ಅಂದಿದ್ದಾರೆ. ನೀವು ಕರ್ನಾಟಕ ಮೂಲದವರಾ, ಅಂಧ್ರ ಮೂಲದವರಾ ಅಥವಾ ತಮಿಳುನಾಡು ಮೂಲದವರಾ ಎಂಬುದಾಗಿ ಪ್ರಶ್ನಿಸಿದ್ದಾರೆ. ಆಗ ನಮ್ಮ ಸಮಾಜದವರು ಕರ್ನಾಟಕವೆಂದಿದ್ದಾರೆ. ಹಾಗಾದರೆ ನೀವು ಆದಿ ಕರ್ನಾಟಕಕ್ಕೆ ಸೇರಿದವರಾ ಎಂದು ಪ್ರಶ್ನಿಸಿದಾಗ ಕೆಲ ಅನಕ್ಷರಸ್ಥ ಭೋವಿ ಕುಟುಂಬಗಳು ಹೌದು ಎಂಬುದಾಗಿ ಹೇಳಿದ್ದಾರೆ. ಅದನ್ನೇ ದಾಖಲಿಸಿಕೊಳ್ಳಲಾಗಿದೆ. ಮೊದಲು ಗಣತಿದಾರರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವ ಕೆಲಸ ಆಗಲಿ ಎಂದು ತಿಳಿಸಿದರು.

ಭೋವಿ ಸಮಾಜದವರನ್ನು ಆದಿ ಕರ್ನಾಟಕವೆಂದು ದಾಖಲಿಸಿಕೊಳ್ಳುವ ಮೂಲಕ ಭೋವಿ (ವಡ್ಡರ) ಸಮಾಜಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈ ಹಿನ್ನೆಲೆ ಭೋವಿ ಸಮಾಜ ಬಾಂಧವರು ಗಣತಿಗೆ ಬಂದಂತಹ ಸಂದರ್ಭದಲ್ಲಿ ನಾವು ಕರ್ನಾಟಕದವರು. ಆದರೆ, ಆದಿ ಕರ್ನಾಟಕ ಜನಾಂಗಕ್ಕೆ ಸೇರಿದವರಲ್ಲ. ನಮ್ಮ ಜಾತಿ ಭೋವಿ, ಕೋಡ್ ಸಂಖ್ಯೆ 23.1-ಭೋವಿ ಅಥವಾ ಕೋಡ್ ಸಂಖ್ಯೆ-23.4-ವಡ್ಡರ ಎಂಬುದಾಗಿ ಕಡ್ಡಾಯವಾಗಿ ಗಣತಿಯಲ್ಲಿ ಪಾಲ್ಗೊಂಡು, ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಣತಿದಾರರಿಗೆ ಸೂಕ್ತ ನಿರ್ದೇಶನ ನೀಡಲಿ ಎಂದು ಮನವಿ ಮಾಡಿದರು.

ಸಮಾಜದ ಮುಖಂಡ, ಪಾಲಿಕೆ ಮಾಜಿ ಸದಸ್ಯ ಆರ್.ಶಿವಾನಂದ, ಸಮಾಜದ ಜಿಲ್ಲಾಧ್ಯಕ್ಷ ಪಿ.ಶ್ರೀನಿವಾಸ, ಅಶೋಕ, ಮಂಜುನಾಥ ನಲ್ಲಿ, ವಕೀಲ ನಾಗರಾಜ, ರಮೇಶ, ಕಿರಣ ಇತರರು ಇದ್ದರು.